ಸತ್ಯ, ಅಹಿಂಸಾ ತತ್ವಗಳಿಂದ ಸ್ವಾತಂತ್ರ್ಯ ತಂದು ಕೊಟ್ಟಿದ್ದು ವಿಶ್ವದಲ್ಲೇ ಪ್ರಥಮ

ಸತ್ಯ, ಅಹಿಂಸಾ ತತ್ವಗಳಿಂದ ಸ್ವಾತಂತ್ರ್ಯ ತಂದು ಕೊಟ್ಟಿದ್ದು ವಿಶ್ವದಲ್ಲೇ ಪ್ರಥಮ

ದಾವಣಗೆರೆ, ಅ. 17- ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಭಾರತ ಬಿಟ್ಟು ತೊಲಗಿ ಅಹಿಂಸಾ ಚಳವಳಿಗಳ ಮೂಲಕ ಸತ್ಯ ಮತ್ತು ಅಹಿಂಸೆಯ ತತ್ವಗಳಿಂದ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ವಿಶ್ವದಲ್ಲೇ ಪ್ರಥಮ ಎಂದು ಜಾನಪದ ತಜ್ಞರೂ, ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ ಹೇಳಿದರು.

 ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಸಭಾಂಗಣದಲ್ಲಿ ಮೊನ್ನೆ ಏರ್ಪಾಡಾಗಿದ್ದ ಗಾಂಧಿ, ಶಾಸ್ತ್ರೀಜಿ ಜಯಂತಿ, ಬಡವರಿಗೆ ಸೈಕಲ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಸತ್ಯ, ಅಹಿಂಸೆಯ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ  ಮಹಾನ್ ಪುರುಷ ಗಾಂಧೀಜಿ. ಪ್ರತಿಯೊಬ್ಬರಲ್ಲಿರುವ ಮಾನವೀಯತೆ, ಮನುಷ್ಯತ್ವವನ್ನು ಹುಡುಕಿ ಹೊರತೆಗೆದವರು.`ಅಯ್ಯ ಎಂದರೆ ಸ್ವರ್ಗ, ಎಲವೋ ಎಂದರೆ ನರಕ’ ಎನ್ನುವ ತತ್ವವನ್ನು ಜೀವನ ಪರ್ಯಂತ ಅನುಸರಿಸಿದವರು ಎಂದರು.

ಬುದ್ಧ, ಬಸವ, ಗಾಂಧಿ ಇವರೆಲ್ಲರೂ ಸರಳ ಸೂತ್ರಗಳನ್ನು ಅನುಸರಿಸಿದವರೇ ಆಗಿದ್ದಾರೆ. ಸತ್ಯ, ಅಹಿಂಸೆಯನ್ನು ಸಮಾಜಕ್ಕೆ ಸಾರಿದವರು. ಯಾವುದು ಸರಿಯೋ, ಯಾವುದು ಜೀವ ಸಂಕುಲಕ್ಕೆ ಒಳ್ಳೆಯದನ್ನು ಮಾಡುತ್ತದೆಯೋ ಅದನ್ನೇ ಸತ್ಯ ಎಂದು ನಂಬಿದ್ದರು. ಹೀಗೆಯೇ ಲಾಲ್ ಬಹದ್ದೂರು ಶಾಸ್ತ್ರೀಜಿಯವರ ಸರಳ ಜೀವನ ಮತ್ತು ಗಾಂಧೀಜಿಯವರ ನಿಲುವುಗಳನ್ನು ಉದಾಹರಣೆ ಸಹಿತ ವಿವರಿಸಿದರು.

ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಗಾಂಧೀಜಿ ಹಾಗೂ ಅಂಬೇಡ್ಕರ್ ಚಿಂತನೆಗಳನ್ನು ಒಟ್ಟೊಟ್ಟಾಗಿ ನೋಡಿ ಸಮನ್ವಯಗೊಳಿಸಿಕೊಳ್ಳಬೇಕಾದ ಅಗತ್ಯತೆ, ಅನಿವಾರ್ಯತೆ ಇದೆ. ಇಬ್ಬರನ್ನೂ ಪ್ರತ್ಯೇಕಿಸಿ, ಚಿಂತನೆ ಮಾಡುವುದು ಸರಿಯಲ್ಲ ಎಂದರು. 

ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಗುರು ಮೂರ್ತಿ ಅವರು, ಲಾಲ್ ಬಹದ್ದೂರು ಶಾಸ್ತ್ರಿಯವರ ಸರಳತೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಸವರಾಜ್ ಒಡೆಯರ್ ಮಾತನಾಡಿ, ಡಾ. ಎಂ.ಎಸ್.ಸ್ವಾಮಿನಾಥನ್ ಅವರನ್ನು ಈ ಕ್ಷಣದಲ್ಲಿ ನೆನಪಿಸಬೇಕು ಎಂದು ಅವರ ಹಸಿರು ಕ್ರಾಂತಿಯ ಬಗ್ಗೆ  ತಿಳಿಸಿ, ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಮಂಜುಳಾ ಬಸವಲಿಂಗಪ್ಪ, ಶಿವಾನಂದ ಗುರೂಜಿ, ಮಧುಸೂದನ್, ಅಜ್ಜಂಪುರ ಶೆಟ್ರು ಮೃತ್ಯುಂ ಜಯ, ಶರಣ ಸಾಹಿತ್ಯ ಪರಿಷತ್ತಿನ ಪರಮೇಶ್ವರಪ್ಪ,  ಆವರಗೆರೆ ರುದ್ರಮುನಿ ಮುಂತಾದವರಿದ್ದರು.  

ಬಿ.ಟಿ. ಪ್ರಕಾಶ್ ಸುಶ್ರಾವ್ಯವಾಗಿ ವಚನ ಗಾಯನ ಮಾಡಿದರು. ಎ.ಎಂ. ಕೊಟ್ರೇಶ್ವರ್ ಸ್ವಾಗತಿಸಿದರು.

error: Content is protected !!