ಕೋಮು ಸಾಮರಸ್ಯ ಹಾಳುಗೆಡವಿದವರ ವಿರುದ್ಧ ಕಾನೂನು ಕ್ರಮಕ್ಕೆ ಮುಸ್ಲಿಂ ಒಕ್ಕೂಟದ ಮನವಿ

ದಾವಣಗೆರೆ, ಅ.16- ಇಲ್ಲಿನ ಬಸವರಾಜ ಪೇಟೆಯ ಶ್ರೀ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಮಕ್ಕಳ ಆಸ್ಪತ್ರೆ ಎದುರು ಡಿಜೆ ಹಾಕಿ ಶಬ್ಧ ಮಾಲಿನ್ಯ ನಿಯಂತ್ರಣ ನಿಯಮ ಉಲ್ಲಂಘಿಸಿದ ಹಾಗೂ ಮತ್ತೊಂದು ಕೋಮಿಗೆ ನೋವುಂಟಾಗುವ ರೀತಿ ಗೀತೆಗಳನ್ನು ಹಾಕಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಮುಸ್ಲಿಂ ಒಕ್ಕೂಟದಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.

ಇದೇ ದಿನಾಂಕ 12ರಂದು ಮಹಾರಾಜ ಯುವಕರ ಸಂಘದವರು ಪ್ರತಿಷ್ಠಾಪನೆ ಮಾಡಿದ್ದ ಗಣೇಶಮೂರ್ತಿ ವಿಸರ್ಜನೆ ವೇಳೆ ಬೃಹತ್ ಗಾತ್ರದ ಡಿ.ಜೆ ಸಿಸ್ಟಮ್ ಅಳವಡಿಸಿಕೊಂಡು, ಬೇರೆ ಸಮುದಾಯಗಳಿಗೆ ನೋವು ಉಂಟಾಗುವ ರೀತಿ ಹಾಡುಗಳನ್ನು ಹಾಕಿ ಶಬ್ದ ಮಾಲಿನ್ಯ ಮಾಡುತ್ತಿದ್ದರು. ಅಲ್ಲದೇ, ರಾತ್ರಿ 7.30 ಗಂಟೆಯ ಸುಮಾರಿಗೆ ಹಳೆ ಬೇತೂರು ರಸ್ತೆಯ ಮದೀನಾ ಆಟೋರಿಕ್ಷಾ ನಿಲ್ದಾಣದ ಹತ್ತಿರ ಇರುವ ಮಕ್ಕಳ ಆಸ್ಪತ್ರೆ ಮುಂದೆ ಮೆರವಣಿಗೆ ಬಂದಾಗ ಅಲ್ಲಿ ಚಿಕ್ಕಮಕ್ಕಳು ಡಿಜೆ ಶಬ್ಧಕ್ಕೆ ಗಾಬರಿಯಾಗುತ್ತಿದ್ದುದನ್ನು ಕಂಡು ಮುಸ್ಲಿಂ ಮುಖಂಡರು ಡಿಜೆ ಬಂದ್ ಮಾಡಲು ಹೇಳಿದಾಗ ಕೆಲವು ಕಿಡಿಗೇಡಿಗಳು ಮತ್ತಷ್ಟು ಶಬ್ಧ ಹೆಚ್ಚಿಸಿದರು ಎಂದು ಒಕ್ಕೂಟದಿಂದ ಆರೋಪಿಸಲಾಗಿದೆ.

ಶಬ್ಧ ಹೆಚ್ಚು ಮಾಡಿದ್ದರಿಂದ ಇದು ಸರಿಯಲ್ಲ ಎಂದು ಅನ್ಯಕೋಮಿನವರು ಹೇಳಲು ಮುಂದಾದಾಗ ಪೊಲೀಸರು ಸ್ಥಳಕ್ಕೆ ಆಗಮಿಸಿ, ಎರಡೂ ಕಡೆಯವರೆಗೂ ಸಮಜಾಯಿಷಿ ಮಾಡಿ ಕಳಿಸಿದರು. ಆದರೆ, ಸ್ವಲ್ಪ ಮುಂದೆ ಹೋಗಿ ಹಾಸಬಾವಿ ಸರ್ಕಲ್‌ನಲ್ಲಿ ಕೆಲ ಕಿಡಿಗೇಡಿಗಳು ಅವಹೇಳನವಾಗುವ ರೀತಿಯ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಹಾಕಿದ್ದಾರೆ ಎಂದು ಅಸಹನೆ ವ್ಯಕ್ತಪಡಿಸಿದರು. ಈ ವಿಷಯವನ್ನು ಜಾತಿಯ ಲೇಪ ಹಚ್ಚಿ ಕೋಮುವಾದೀಕರಣ ಮಾಡಲು ಕೆಲವರು ಅ.13 ರಂದು ಪ್ರತಿಭಟನೆ ಮೂಲಕ ಎಸ್ಪಿಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಒಕ್ಕೂಟ ದೂರಿದೆ.

ಈ ಸಂದರ್ಭದಲ್ಲಿ ಮಹಮ್ಮದ್ ಶೋಯೇಬ್, ಇಬ್ರಾಹಿಂ ಖಲೀಲ್‌ವುಲ್ಲಾ, ನೂರ್ ಅಹ್ಮದ್, ಹಾಕಿ ಸೈಯ್ಯದ್, ಆರೀಫ್, ಶಾನವಜ್ ಖಾನ್, ಡಿ.ಸೈಯದ್ ರಿಯಾಜ್, ಮನ್ಸೂರ್, ನವೀದ್, ಅಯೂಬ್ ಖಾನ್, ಹೈದರ್ ಅಲಿ, ಮೆಹಬೂಬ್ ಬೀಡ, ಖಲೀಂವುಲ್ಲಾ ಖಾನ್, ಖಾಸಿಂ ಸಾಬ್, ಫಕೃದ್ದೀನ್, ಎನ್. ಉಸ್ಮಾನ್ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!