ದಾವಣಗೆರೆ, ಅ. 16 – ತಾಲ್ಲೂಕಿನ ಎಲೆಬೇತೂರು ಗ್ರಾಮದ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ ಹಾಗೂ ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಆವರಣದಲ್ಲಿ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಗಾಂಧೀ ಜಯಂತಿ ಪ್ರಯುಕ್ತ ಶ್ರಮದಾನ, ಜಾಗೃತಿ ಮತ್ತು ಶಾಂತಿ ನಡಿಗೆ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆಯನ್ನು ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಹೆಚ್. ಬಸವರಾಜಪ್ಪ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಾಲ್ಲೂಕು ಕಸಾಪ ನಿರ್ದೇಶಕ ಹಾಗೂ ಸ್ಥಳೀಯ ಸಲಹಾ ಸಮಿತಿ ಸದಸ್ಯ ಎಂ. ಷಡಕ್ಷರಪ್ಪ ಬೇತೂರು ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಶಿಸ್ತು, ಸೇವಾ ಮನೋಭಾವನೆ ಮತ್ತು ಸಮಯ ಪ್ರಜ್ಞೆ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಪ್ರಸ್ತುತ ಸಂದರ್ಭದಲ್ಲಿ ಸಭೆ-ಸಮಾರಂಭಗಳಲ್ಲಿ ಮಾಡಿದ ಉಳಿದ ಆಹಾರ ಪದಾರ್ಥಗಳನ್ನು ವ್ಯರ್ಥ ಮಾಡದೆ ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ನೀಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು, ನೀರನ್ನೂ ಸಹ ಸರಿಯಾದ ರೀತಿಯಲ್ಲಿ ಬಳಕೆ ಮಾಡುವಂತೆ ಪ್ರೇರೇಪಿಸಬೇಕು ಎಂದರು.
ವಿದ್ಯಾರ್ಥಿ ದೆಸೆಯಲ್ಲಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ವಿದ್ಯಾಭ್ಯಾಸ ದತ್ತ ಗಮನಹರಿಸಿ, ಎಂದು ಮಾದಕ ವ್ಯಸನಕ್ಕೆ ಯುವ ಸಮೂಹ ಗುರಿಯಾಗದಂತೆ ಎಚ್ಚರವಹಿಸಬೇಕು. ಬೆಂಕಿ ಸಂಭವಿಸಿದಾಗ ಜಲಪ್ರಳಯ ಬಂದಾಗ ರಸ್ತೆ ಅಪಘಾತ ಆದಾಗ ಸ್ವಯಂಸೇವಕರಾಗಿ ನೀವು ಕಾರ್ಯ ನಿರ್ವಹಿಸಬೇಕು. ಮಹಾತ್ಮ ಗಾಂಧೀಜಿ ಅವರು ಶಾಂತಿ, ಶಿಸ್ತು ಮತ್ತು ಅಹಿಂಸಾ ಮಾರ್ಗದಲ್ಲಿ ನಮಗೆ ಸ್ವಾತಂತ್ರ್ಯ ತಂದು ಕೊಟ್ಟರೆಂದು ಈ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಶಶಿಕಲಾ ಬಿ.ಎಂ.ಸ್ಕೌಟ್ ಮಾಸ್ಟರ್ ಪುಷ್ಪಾವತಿ ಎನ್. ಉಪಸ್ಥಿತರಿದ್ದರು.
ಗೈಡ್ ಲೀಡರ್ ಸುನೀತ ಜಿ.ಆರ್. ಪ್ರಾಸ್ತಾವಿಕ ಮಾತನಾಡಿದರು. ಪ್ರಕೃತಿ ಬಿ. ಸ್ವಾಗತಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಂದನಾರ್ಪಣೆ ವಿದ್ಯಾರ್ಥಿನಿ ಭೂಮಿಕಾ ಇವರಿಂದ ನೆರವೇರಿತು. ಕೊನೆಯಲ್ಲಿ ಗಾಂಧೀ ಜಯಂತಿ ಪ್ರಯುಕ್ತ ಶಾಂತಿ ನಡಿಗೆ ನಡೆಯಿತು.