ಬಡವರಿಗೆ ಉತ್ತಮ ಶಿಕ್ಷಣ ಮರೀಚಿಕೆ

ಬಡವರಿಗೆ ಉತ್ತಮ ಶಿಕ್ಷಣ ಮರೀಚಿಕೆ

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್‍ಕುಮಾರ್ ವ್ಯಾಕುಲತೆ

ದಾವಣಗೆರೆ, ಅ. 16 – ಜೀವನದ ಸವಾಲುಗಳನ್ನು ಎದುರಿಸಲು ಮತ್ತು ಅವಕಾಶಗಳ ಮೂಲಕ ಅಭಿವೃದ್ದಿ ಹೊಂದಲು ವ್ಯಕ್ತಿಗಳನ್ನು ಸಶಕ್ತಗೊಳಿಸಲು ಶಿಕ್ಷಣದ ಅವಶ್ಯಕವಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್‍ಕುಮಾರ್ ಅಭಿಪ್ರಾಯಪಟ್ಟರು.

ಭಾನುವಾರ ನಗರದ ವನಿತಾ ಸಮಾಜದಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆಯು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕಾರ್ಮಿಕರ ಮಕ್ಕಳಿಗಾಗಿ ಆಯೋಜಿಸಲಾಗಿದ್ದ 6ನೇ ವರ್ಷದ ಅಭಿನಂದನಾ ಸಮಾರಂಭದಲ್ಲಿ ಭಗತ್‍ಸಿಂಗ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ ಮತ್ತು ನಿರಂತರ ಬೆಳವಣಿಗೆಯನ್ನು ಉತ್ತೇಜಿಸುವ ಪ್ರಜ್ಞೆಯನ್ನು ಶಿಕ್ಷಣ ನೀಡುತ್ತದೆ. ಸಂವಿಧಾನದ ಅಡಿಯಲ್ಲಿ ಶಿಕ್ಷಣ ಮೂಲಭೂತ ಹಕ್ಕು ಘೋಷಿಸಿದ್ದರೂ ಸಹ ಇಂದಿಗೂ ಶಿಕ್ಷಣ ವಂಚಿತರನ್ನು ನಾವು ನೋಡುತ್ತಿದ್ದೇವೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸುವುದು ಸರ್ಕಾರಗಳ ಜವಾಬ್ದಾರಿ ಆಗಿದೆ. ಆದರೆ, ಇಂದು ಶಿಕ್ಷಣ ಮತ್ತು ಆರೋಗ್ಯ ವ್ಯಾಪಾರೀಕರಣಗೊಂಡು ಬಡವರಿಗೆ ನಿಲುಕದ ಸ್ಥಿತಿಗೆ ತಲುಪಿಸುವುದು ಅತ್ಯಂತ ವಿಷಾದನೀಯ ಎಂದು ಹೇಳಿದರು.

ಒಂದೆಡೆ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗುತ್ತಿದೆ. ಇನ್ನೊಂದೆಡೆ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗುತ್ತಿದ್ದು, ಬಡವರಿಗೆ ಉತ್ತಮ ಶಿಕ್ಷಣ ಮರೀಚಿಕೆ ಆಗಿದೆ. ಜಾತಿ, ಮತ, ಧರ್ಮ, ಲಿಂಗಭೇದಗಳನ್ನು ಮೀರಿ ಆಲೋಚಿಸುವ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಪ್ರೊಫೆಷನಲ್ ಸೋಷಿಯಲ್ ವರ್ಕ್ ಅಸೋಸಿಯೇಷನ್‍ ಅಧ್ಯಕ್ಷ ಡಾ.ಎಂ. ಸಂತೋಷ್ ಕುಮಾರ್ ಮಾತನಾಡಿ, ದುಡಿಯುವ ವರ್ಗದ ಎಲ್ಲರ ಮಕ್ಕಳನ್ನು ಅಭಿನಂದಿಸುತ್ತಿರುವುದು ಅತ್ಯಂತ ಸಂತೋಷದಾಯಕ ಸಂಗತಿ, ಕಳೆದ ಆರು ವರ್ಷಗಳಿಂದ ನಿರಂತರವಾಗಿ ಕಾರ್ಮಿಕರ ಮಕ್ಕಳಲ್ಲಿ ಶಿಕ್ಷಣದ ಅರಿವು ಮೂಡಿಸುತ್ತಾ ಬಂದಿರುವ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಕಾರ್ಯ ಶ್ಲಾಘನೀಯ ಎಂದರು.

ಅತಿಥಿಯಾಗಿ ಕರ್ನಾಟಕ ಶ್ರಮಿಕ ಶಕ್ತಿಯ ಸತೀಶ್ ಅರವಿಂದ್ ಆಗಮಿಸಿದ್ದರೆ, ಅಧ್ಯಕ್ಷತೆಯನ್ನು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಪವಿತ್ರ ವಹಿಸಿದ್ದರು. ಆದಿಲ್‍ಖಾನ್ ಪ್ರಸ್ತಾವಿಕವಾಗಿ ಮಾತನಾಡಿದರು. ಯಲ್ಲಪ್ಪ ನಿರೂಪಿಸಿದರೆ, ಯಮನೂರು ವಂದನಾರ್ಪಣೆ ಸಲ್ಲಿಸಿದರು.

error: Content is protected !!