ಹರಿಹರ, ಅ.12- ನಗರದ ಅಂಜುಮನ್- ಎ – ಇಸ್ಲಾಮಿಯಾ ಸಮಿತಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಊಟ ವಿತರಣೆ ಮಾಡಿ ಕಾನೂನು ಉಲ್ಲಂಘನೆ ಮಾಡಲಾಗಿದ್ದು, ಹಾಗಾಗಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಸದಸ್ಯ ಮುಜಾಮಿಲ್ ಬಿಲ್ಲು, ಮಾಜಿ ಸದಸ್ಯ ಮಹಮ್ಮದ್ ಸಿಗ್ಬತ್ ಉಲ್ಲಾ ಸೇರಿದಂತೆ ಇತರರು ಚುನಾವಣಾ ಅಧಿಕಾರಿ ಸೈಯದ್ ಮು. ಅಜಂ ಪಾಷಾರಿಗೆ ದೂರು ನೀಡಿದರು.
ಮುಜಾಮಿಲ್ ಬಿಲ್ಲು, ಮಹಮ್ಮದ್ ಸಿಗ್ಬತ್ ಉಲ್ಲಾ, ಸನಾವುಲ್ಲಾ, ಮನ್ಸೂರ್ ಮದ್ದಿ, ಸಮಿವುಲ್ಲಾ ಅವರು ಮಾತನಾಡಿ, ಅಂಜುಮಾನ್ ಸಮಿತಿಗೆ ಇದೇ ದಿನಾಂಕ 28 ರಂದು ನಡೆ ಯುವ ಚುನಾವಣೆಗೆ ನಗರದ ಅಂಜುಮಾನ್ ಶಾಲಾ ಕಚೇರಿಯ ಸಭಾಂಗಣದಲ್ಲಿ ಇಂದು 71 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ನಾಮಪತ್ರವನ್ನು ಸಲ್ಲಿಸಲು ಬಂದಂತಹ ಅಭ್ಯರ್ಥಿಗಳಿಗೆ, ಇನ್ನೊಂದು ಗುಂಪು ಊಟವನ್ನು ವಿತರಣೆ ಮಾಡಿ ಕಾನೂನು ಉಲ್ಲಂಘನೆ ಮಾಡಿದೆ ಎಂದು ದೂರಿದರು.
ಸಮಿತಿಯ ಒಟ್ಟು 3852 ಮತದಾರರಲ್ಲಿ ಬಹುತೇಕರು ಅನೇಕ ಕಡೆಗಳಲ್ಲಿ ಇರುವಂತಹ ಕೈಗಾರಿಕಾ ಕೇಂದ್ರಗಳಲ್ಲಿ ಕೆಲಸಕ್ಕೆ ಹೋಗುವುದರಿಂದ ಅವರು ಮಧ್ಯಾಹ್ನದ ನಂತರ ಬರುತ್ತಾರೆ. ಹಾಗಾಗಿ ಮತದಾನದ ಅಂತಿಮ ಸಮಯವನ್ನು 3 ಗಂಟೆಯ ಬದಲಿಗೆ ಸಂಜೆ 5 ಗಂಟೆಯವರೆಗೆ ವಿಸ್ತರಿಸಬೇಕು. ಮತ ಎಣಿಕೆಯನ್ನು ಮಾರನೆಯ ದಿನ ಮಾಡಬೇಕು ಎಂದು ಒತ್ತಾಯಿಸಿದರು.
ಚುನಾವಣೆ ಅಧಿಕಾರಿ ಅಜಂ ಪಾಷಾ ಮಾತನಾಡಿ, ಚುನಾವಣೆ ಪ್ರಕ್ರಿಯೆ ನಡೆಯುವ ಸಮಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅರ್ಜಿಗಳನ್ನು ಸಲ್ಲಿಸಲು ಅಭ್ಯರ್ಥಿಗಳು ಆಗಮಿಸಿದ್ದರು, ಕಚೇರಿಯ ಹೊರಗಡೆ ಏನು ನಡೆದಿದೆ ಎಂಬುದರ ಮಾಹಿತಿ ಇಲ್ಲ. ಕೆಲವರು ಚುನಾವಣೆ ಕಚೇರಿಯ ಹೊರಗಡೆ ಊಟ ವಿತರಣೆ ಮಾಡಿದ್ದಾರೆ ಎಂದು ದೂರನ್ನು ನೀಡಿದ್ದಾರೆ. ಅದರ ಪ್ರಕಾರ ಎಲ್ಲವನ್ನೂ ಪರಿಶೀಲಿಸಿ, ಕಾನೂನು ಉಲ್ಲಂಘನೆ ಆಗಿದ್ದರೆ ವಕ್ಫ್ ಬೋರ್ಡ್ ನಿಯಮದ ಪ್ರಕಾರ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚುನಾವಣೆ ಸಿಬ್ಬಂದಿ ಸೈಯದ್ ಜಾಕೀರ್ ಹುಸೇನ್, ನಗರಸಭೆ ಸದಸ್ಯ ಎಂ.ಎಸ್. ಬಾಬುಲಾಲ್, ಬಿ. ಅಲ್ತಾಫ್, ಮಾಜಿ ನಗರಸಭೆ ಸದಸ್ಯರಾದ ಅಲ್ತಮಷ್, ಏಜಾಜ್ ಆಹ್ಮದ್, ಮುಖಂಡರಾದ ಕೆ. ಆಸೀಫ್ ಕನವಳ್ಳಿ ಅಜಗರ್ ಆಹ್ಮದ್, ನಸ್ರುಲ್ಲಾ, ಫಕೃಲ್ಲಾ ಸಾಬ್, ರಿಜ್ವಾನ್, ಬಬ್ಲು ಪೈಲ್ವಾನ್, ನಜೀರ್ ಹುಸೇನ್ ಹಾಗು ಇತರರು ಹಾಜರಿದ್ದರು.