ದಾವಣಗೆರೆ, ಅ. 12- ಇತ್ತೀಚಿನ ದಿನಮಾನಗಳಲ್ಲಿ ಸಾಮಾಜಿಕ ಜಾಲ ತಾಣಗಳು ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ.ವಿಕೃತ ಸುದ್ಧಿಗಳನ್ನು ಬಿತ್ತರಿಸುವ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ ಎಂದು ಮಾಜಿ ಸಚಿ ವರೂ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ರಾಜ್ಯ ಪ್ರಧಾನ ಆಯು ಕ್ತರೂ ಆದ ಪಿ.ಜಿ.ಆರ್. ಸಿಂಧ್ಯಾ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಪಿ.ಜೆ. ಬಡಾವಣೆಯ ಬಾಪೂಜಿ ಕೇಂದ್ರೀಯ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ನೇತಾಜಿ ಸ್ಕೌಟ್ಸ್ ಗ್ರೂಪ್ ಮತ್ತು ಚೇತನಾ ಗೈಡ್ ಗ್ರೂಪ್ ನ 25 ನೇ ವರ್ಷದ `ರಜತ ವೈಭವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯನ್ನು ಎಲ್ಲಾ ರಾಜ್ಯಗಳಲ್ಲೂ ಆರಂಭಿಸಿ, ಮಕ್ಕಳಿಗೆ ಉತ್ತಮ ತರಬೇತಿ ನೀಡಬೇಕೆಂಬ ಆಶಯ ಸರ್ಕಾರಗಳ ದ್ದಾಗಿದೆ. ಪ್ರತಿ ಶಾಲಾ-ಕಾಲೇಜುಗಳಲ್ಲೂ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ಗ್ರೂಪ್ಗಳನ್ನು ಕಡ್ಡಾಯವಾಗಿ ಆರಂಭಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಸಮಾಜದಲ್ಲಿ ಕುಸಿಯುತ್ತಿರುವ ಮೌಲ್ಯಗಳನ್ನು ಪುನರುತ್ಥಾನ ಗೊಳಿಸಲು ಇಂತಹ ಸೇವಾ ಸಂಸ್ಥೆಗಳ ಅಗತ್ಯತೆ ಇದೆ. ರಾಜ್ಯದಲ್ಲಿ ಕೊಂಡಜ್ಜಿ ಬಸಪ್ಪ, ಚಿಗಟೇರಿ ಜಯಣ್ಣ ಅವರಂತಹ ಮಹನೀಯರ ಅವಿರತ ಶ್ರಮದಿಂದ ಇಂದು ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟಿದ್ದು, ಜಾತ್ಯತೀತ ಮನೋಭಾವನೆಯನ್ನು ಬೆಳೆಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿನ ಕಾಲೇಜುಗಳಲ್ಲಿ ರೋವರ್ಸ್, ರೇಂಜರ್ಸ್ ಗ್ರೂಪ್ಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಎರಡನೇ ಸಮವಸ್ತ್ರಗಳನ್ನು ಧರಿಸಲು ಅವಕಾಶ ನೀಡಲು ಚಿಂತನೆ ನಡೆಸಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು, ಪ್ರಾಥಮಿಕ ಶಿಕ್ಷಕರಿಗೂ ಸಹ ತರಬೇತಿ ನೀಡಲಾಗುವುದು ಎಂದರು.
ಹೊಸ ಶಿಕ್ಷಣ ನೀತಿಯನ್ನು ಕೈಬಿಟ್ಟು ರಾಜ್ಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ಮುಂದಾಗಿದ್ದು, ಸ್ಕೌಟ್ಸ್, ಗೈಡ್ಸ್ ಶಾಖೆಗಳನ್ನು ತೆರೆಯಲು ಹಿಂದಿನ ಪದ್ಧತಿಯನ್ನೇ ಮುಂದುವರೆಸಲು ಒತ್ತಾಯಿಸಲಾಗುವುದು ಎಂದು ಹೇಳಿದರು.
`ಯಶಸ್ಸು’ ಮಾಸ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಜಸ್ಟಿನ್ ಡಿಸೋಜಾ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ಸ್ಕೌಟ್ಸ್, ಗೈಡ್ಸ್, ರೋವರ್ಸ್, ರೇಂಜರ್ಸ್ ಕಾರ್ಯ ಚಟುವಟಿಕೆಗಳನ್ನು ನಡೆಸಲು ಕಷ್ಟಕರವೇನಲ್ಲ. ಶಿಕ್ಷಣ ಸಂಸ್ಥೆಗಳ ಇಚ್ಛಾಶಕ್ತಿ ಮುಖ್ಯವಾಗಿದ್ದು, ನಾಯಕತ್ವ ಗುಣ, ಸೇವಾ ಮನೋಭಾವನೆ, ಶಿಸ್ತು, ಸಮಯ ಪ್ರಜ್ಞೆ ಬೆಳೆಸಲು ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ಸಹಕಾರಿಯಾಗಲಿವೆ ಎಂದರು.
ಮೌಲ್ಯಗಳು ಕಡಿಮೆಯಾಗುತ್ತಿ ರುವ ಪ್ರಸ್ತುತ ಸಂದರ್ಭದಲ್ಲಿ ಇಂದಿನ ಮಕ್ಕಳಲ್ಲಿ ಒಳ್ಳೆಯತನ ಮತ್ತು ಮೌಲ್ಯಗಳನ್ನು ಬಿತ್ತುವ ಕೆಲಸವನ್ನು ಪಾಲಕರು, ಶಿಕ್ಷಕರು ಮಾಡಬೇ ಕಾಗಿದೆ. ಶಿಕ್ಷಣ ಎನ್ನುವುದು ತ್ರಿಕೋನ ಇದ್ದ ಹಾಗೆ. ಶಿಕ್ಷಕರು-ಪಾಲಕರು- ವಿದ್ಯಾರ್ಥಿಗಳು. ಈ ಮೂರೂ ಜನರು ನೀಡುವ ಕೊಡುಗೆಯಿಂದ ಶಿಕ್ಷಣ ಪರಿಪೂರ್ಣವಾಗಲಿದೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆ ದಕ್ಷಿಣ ವಲಯದ ಅಧ್ಯಕ್ಷರೂ, ನಿವೃತ್ತ ಪ್ರಾಧ್ಯಾಪಕರಾದ ಡಾ. ಹೆಚ್.ಎಸ್. ಮಂಜುನಾಥ್ ಕುರ್ಕಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಮ್ಮು-ಕಾಶ್ಮೀರದ ರಾಜ್ಯ ಸಂಘಟನಾ ಆಯುಕ್ತ ಪುರುಷೋತ್ತಮ್ ಲಾಲ್ ದುಬೆ, ರಾಜಸ್ಥಾನದ ಜಿ.ಮುಖೇಶ್, ದಾವಣಗೆರೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ ಜೆ. ಚಿಗಟೇರಿ, ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯೆ ಕಿರುವಾಡಿ ಗಿರಿಜಮ್ಮ, ಉತ್ತರ ಪ್ರದೇಶದ ವಿಜಯಕುಮಾರ್ ಮಿಶ್ರಾ, ಜಿಲ್ಲಾ ಸ್ಕೌಟ್ ಆಯುಕ್ತ ಎ.ಪಿ. ಷಡಾಕ್ಷರಪ್ಪ, ಮಂಜುನಾಥ್ ಆಚಾರ್, ಜಾನಕಿ ವೇಣುಗೋಪಾಲ್, ನೇತಾಜಿ ಸ್ಕೌಟ್ಸ್ ಗ್ರೂಪ್ ಸಂಸ್ಥಾಪಕ ಜಿ.ಎಸ್. ವಿಜಯ್ ಮತ್ತಿತರರು ಉಪಸ್ಥಿತರಿದ್ದರು.