ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಪ್ರಾಮಾಣಿಕ ಪ್ರಯತ್ನ

ದಾವಣಗೆರೆ, ಅ. 12- ಪ್ರಸ್ತುತ ಅಂಚೆ ಇಲಾಖೆಯ ನ್ಯೂನತೆಗಳನ್ನು ಸರಿಪಡಿಸಿಕೊಂಡು, ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅಂಚೆ ಇಲಾಖೆ ಅಧೀಕ್ಷಕ ಚಂದ್ರಶೇಖರ್ ಹೇಳಿದರು.

 ನಗರದ ಗಡಿಯಾರ ಕಂಬದ ಬಳಿ ಇರುವ ಪ್ರಧಾನ ಅಂಚೆ ಕಚೇರಿಯ ಸಭಾಂಗಣದಲ್ಲಿ ನಡೆದ ಅಂಚೆ  ವಿಭಾಗೀಯ ಡಾಕ್ ಅದಾಲತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರ ದೂರುಗಳು ಮತ್ತು ಸಲಹೆಗಳನ್ನು ಸ್ವೀಕರಿಸಿ, ಅವುಗಳ ತ್ವರಿತ ವಿಲೇವಾರಿಗೆ ಇಲಾಖೆ ಮುಂದಾಗಲಿದೆ ಎಂದು ತಿಳಿಸಿದರು.

ಭಾರತೀಯ ಅಂಚೆ ಸೇವೆ ಜಗತ್ತಿನಲ್ಲಿಯೇ ಅತಿ ದೊಡ್ಡ ಸಂಪರ್ಕ ಜಾಲವನ್ನು ಹೊಂದಿದ್ದು, ಪ್ರತಿ ಹಳ್ಳಿಗಳಲ್ಲೂ ಅಂಚೆ ಕಚೇರಿಗಳಿವೆ. ತನ್ಮೂಲಕ ಸಾರ್ವಜನಿಕರು ದೇಶದ ಎಲ್ಲಾ ಪ್ರದೇಶಗಳೊಂದಿಗೆ ಸಂರ್ಪಕದಲ್ಲಿ ಇರಲು ಸಾಧ್ಯವಾಗಿದೆ ಎಂದರು.

ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕ ಗಣೇಶ್ ಶೆಣೈ ಮಾತನಾಡಿ, ಅಂಚೆ ಕಾರ್ಡ್‌ಗಳು ಗ್ರಾಹಕರ ಮನೆಗಳಿಗೆ ಸಕಾಲಕ್ಕೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕಾಗಿದೆ. ದೇವರ ಸೇವೆ ಎಂದು ಭಾವಿಸಿ, ಇಚ್ಛಾಶಕ್ತಿಯೊಂದಿಗೆ ಕರ್ತವ್ಯ ನಿರ್ವಹಿಸಿದಾಗ ಆತ್ಮತೃಪ್ತಿ ಜೊತೆಗೆ ಜನ ಮನ್ನಣೆ ಗಳಿಸಲು ಸಾಧ್ಯ ಎಂದರು.

ಪ್ರತಿ ವರ್ಷ ಕಲಾಕುಂಚ ಸಂಸ್ಥೆಯು `ಅಂಚೆ-ಕುಂಚ’ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬಂದಿದ್ದು, ಅಂಚೆ ಇಲಾಖೆ ಜೊತೆಗೆ ಸಂಸ್ಥೆ ಅವಿನಾಭಾವ ಸಂಬಂಧ ಹೊಂದಿದೆ ಎಂದು ಹೇಳಿದರು.

ಶಿವರಾಜ್, ಕೃಷ್ಣಮೂರ್ತಿ, ಸಮರ್ಥ, ಉದಯ್, ಲೋಕೇಶ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಅಂಚೆ ಇಲಾಖೆ ಉಪ ಅಧೀಕ್ಷಕ ಗುರುಪ್ರಸಾದ್, ಅಂಚೆ ಪಾಲಕ ಸದ್ಯೋಜಾತಪ್ಪ, ಮಾರುತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

error: Content is protected !!