ಹರಿಹರದಲ್ಲಿನ ಕಾಮಗಾರಿಗಳ ಪರಿಶೀಲನೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್
ಹರಿಹರ, ಅ,11- ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶಗಳು ಎಂದು ಈಗಾಗಲೇ ಸರ್ಕಾರ ಘೋಷಣೆ ಮಾಡಿದ್ದರಿಂದ 119 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಅನುದಾನ ಬಿಡುಗಡೆ ಮಾಡಿದ ತಕ್ಷಣವೇ ರೈತರಿಗೆ ಪರಿಹಾರ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹೇಳಿದರು.
ನಗರದ ವಿದ್ಯಾನಗರ, ಇಂದ್ರಾನಗರ, ಬೆಂಕಿನಗರ ಬಡಾವಣೆಯಲ್ಲಿ ನಗರೋತ್ಥಾನ ಯೋಜನೆಯಡಿ ನಡೆಯುತ್ತಿರುವ ಚರಂಡಿ, ರಸ್ತೆ ಕಾಮಗಾರಿಯ ಗುಣಮಟ್ಟ ವೀಕ್ಷಿಸಿದ ನಂತರ ಅವರು `ಜನತಾವಾಣಿ’ ಯೊಂದಿಗೆ ಮಾತನಾಡಿದರು.
ಕೇಂದ್ರ ಬರ ಅಧ್ಯಯನ ತಂಡ ಜಿಲ್ಲೆಯ ಜಗಳೂರು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ವರದಿ ಸಿದ್ದತೆ ಮಾಡಿ ಕಳಿಸಲಾಗಿದೆ ಎಂದು ಅವರು ಹೇಳಿದರು.
ಬೆಂಕಿನಗರದ ಚಾನೆಲ್ ನಲ್ಲಿ ಕಸಕಡ್ಡಿ, ಗಿಡಗಳು ಹೆಚ್ಚಾಗಿ ಬೆಳೆದು ನೀರು ಸರಾಗವಾಗಿ ಹರಿಯದೇ ಬಡಾವಣೆಗಳಿಗೆ ನೀರು ನುಗ್ಗುವ ಸಾಧ್ಯತೆ ಇರುತ್ತದೆ. ತಕ್ಷಣವೇ ಚಾನೆಲ್ ನಲ್ಲಿ ಕಟ್ಟಿಕೊಂಡಿರುವ ಕಸ ಮತ್ತು ಗಿಡಗಳನ್ನು ಜೆಸಿಬಿ ಯಂತ್ರದ ಮೂಲಕ ಶೀಘ್ರದಲ್ಲಿ ಸ್ವಚ್ಛತೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಡೆ ಗೋಡೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳ ಬಳಿ ಚರ್ಚಿಸಿ ತದ ನಂತರ ತಡೆಗೋಡೆ ನಿರ್ಮಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ನಗರದ ತುಂಗಭದ್ರಾ ನದಿಯ ಹತ್ತಿರ ಇರುವ ದರ್ಗಾ ಮುಂಭಾಗದ ರಸ್ತೆ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಮತ್ತು ಪೌರಾಯುಕ್ತರ ಬಳಿ ಸಮಸ್ಯೆಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಆದಷ್ಟು ಬೇಗ ಪರಿಹರಿಸಲು ಮುಂದಾಗುವುದಾಗಿ ಹೇಳಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಉಲ್ಬಣಗೊಳುವ ಸಾಧ್ಯತೆಗಳು ಹೆಚ್ಚು .ಹಾಗಾಗಿ ಸ್ಥಳ ಪರಿಶೀಲನೆ ನಡೆಸಿ ಪ್ರತಿವಾರ ಸಭೆ ಏರ್ಪಡಿಸಲಾಗುತ್ತದೆ. ಮೊದಲು ಬೊರ್‌ವೆಲ್ ನೀರು, ಚಾನೆಲ್, ಹೊಸ ಬೊರ್‌ವೆಲ್ ಹಾಕಿಸೋದು, ಬೊರ್‌ವೆಲ್ ಬಾಡಿಗೆ ಪಡೆದು ಸರಬರಾಜು ಮಾಡುವುದು. ಅದು ಆಗದೆ ಇದ್ದಾಗ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಮೂಲಕ ಕುಡಿಯುವ ನೀರಿಗೆ ಆದ್ಯತೆ ನೀಡಲಾಗುತ್ತದೆ ಎಂದರು.
ಡಿ.ಆರ್.ಎಂ. ಪ್ರೌಢಶಾಲೆ ಶಿಥಿಲವಾಗಿದ್ದು, ಕಟ್ಟಡ ನೆಲಸಮ ಮಾಡುವುದಕ್ಕೆ 2019 ರಲ್ಲಿ ಸರ್ಕಾರವು ಆದೇಶ ನೀಡಲಾಗಿದ್ದರೂ ಸಹ ಇದುವರೆಗೂ ಶಾಲೆಯನ್ನು ನೆಲಸಮ ಮಾಡಿರುವುದಿಲ್ಲ ಎಂಬ ವಿಚಾರಕ್ಕೆ ಶಾಲೆಗೆ ಸಂಬಂಧಿಸಿದ ಅಧಿಕಾರಿಗಳ ಬಳಿ ಚರ್ಚಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಗರ ಅಭಿವೃದ್ಧಿ ಯೋಜನಾಧಿಕಾರಿ ಮಹಾಂತೇಶ್, ಇಂಜಿನಿಯರ್ ಮಂಜುನಾಥ್, ತಹಶಿಲ್ದಾರ್ ಪೃಥ್ವಿ ಸಾನಿಕಂ ಪೌರಾಯುಕ್ತ ಐಗೂರು ಬಸವರಾಜ್, ಎಇಇ ತಿಪ್ಪೇಸ್ವಾಮಿ, ಇಂಜಿನಿಯರ್ ಮಂಜುಳಾ, ಕಾಂಗ್ರೆಸ್ ಮುಖಂಡ ದಾದಾಪೀರ್ ಭಾನುವಳ್ಳಿ, ಜೆಡಿಸ್ ಮುಖಂಡ ಬಾಷಾ, ಸದ್ದಾಂ, ಮಕ್ರಿ ಪಾಲಾಕ್ಷಪ್ಪ, ವಿ.ಎ. ಸಮೀರ್, ಪೊಲೀಸ್ ನವೀನ್ ಬೆಳ್ಳೂಡಿ, ನಗರಸಭೆ ಸಂತೋಷ, ಅಕ್ಬರ್ ಸಾಬ್ ಇತರರು ಹಾಜರಿದ್ದರು.