ಭ್ರಷ್ಟಾಚಾರ ನಿರ್ಮೂಲನೆ ಹೊಣೆಗಾರಿಕೆ ಕೇವಲ ಇಲಾಖೆ ಕರ್ತವ್ಯವಲ್ಲ

ಭ್ರಷ್ಟಾಚಾರ ನಿರ್ಮೂಲನೆ ಹೊಣೆಗಾರಿಕೆ  ಕೇವಲ ಇಲಾಖೆ ಕರ್ತವ್ಯವಲ್ಲ

`ಜಾಗೃತಿ ಅರಿವು ಸಪ್ತಾಹ’ ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರಿ ಹೆಗಡೆ

 ದಾವಣಗೆರೆ,ಅ.11- ಸಾರ್ವಜನಿಕ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ತೊಲಗಿಸಿ ಉತ್ತಮ ಆಡಳಿತಕ್ಕಾಗಿ ಪಾರದರ್ಶಕ ನೀತಿ ರೂಪಿಸಿ, ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ `ದೇಶದ ಅಭಿವೃದ್ಧಿಗಾಗಿ, ಭ್ರಷ್ಟಾಚಾರ ಮುಕ್ತ ಭಾರತ’ ಎಂಬ ಘೋಷವಾಕ್ಯದೊಂದಿಗೆ ಇಂದು ನಡೆದ ಭ್ರಷ್ಟಾಚಾರ ವಿರುದ್ದದ ಜಾಗೃತಿ ಅರಿವು ಸಪ್ತಾಹ-2023 ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಜಾಗೃತಿ ಅರಿವು ಸಪ್ತಾಹ ನಿರಂತರವಾಗಿ ನಡೆಯುವ ಕಾರ್ಯಕ್ರಮವಾಗಬೇಕು. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವ ಹೊಣೆಗಾರಿಕೆ ಕೇವಲ ಇಲಾಖೆಯ ಕರ್ತವ್ಯವಲ್ಲ. ಪ್ರತಿ ನಾಗರಿಕರು ಹಾಗೂ ಪ್ರಜ್ಞಾವಂತ ಸಮಾಜ ಜಾಗರೂಕತೆಯಿಂದ ಬದ್ಧರಾಗಿರಬೇಕು. ದೇಶದ ರಾಜಕೀಯ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಎಲ್ಲರೂ ಪಾಲುದಾರರಾಗಿ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲಾಧಿಕಾರಿ  ಡಾ.ವೆಂಕಟೇಶ್.ಎಂ.ವಿ ಅವರು ಮಾತನಾಡಿ, ಭ್ರಷ್ಟಾಚಾರ ಎಂಬುದು ಸಾಮಾಜಿಕ ಪಿಡುಗುಗಳಲ್ಲಿ ಒಂದಾಗಿದೆ. ಇದರಲ್ಲಿ ದೇಶದ ಆರ್ಥಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಕುಂಠಿತವಾಗುತ್ತದೆ. ಇದಲ್ಲದೆ, ಸಮಾಜದಲ್ಲಿ ಆಗಬೇಕಾಗಿರುವಂತಹ ಕಾರ್ಯಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಡತನ ನಿವಾರಣೆಗೂ ಅಡಚಣೆ ಉಂಟಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾನೂನು ನಿಯಮಗಳಿಗೆ ಒಳಪಟ್ಟು ಕಾರ್ಯ ನಿರ್ವಹಿಸಬೇಕು ಎಂದರು.

ಭ್ರಷ್ಟಾಚಾರ ಎಂದರೆ ಕೇವಲ ಹಣವನ್ನು ಪಡೆಯುವುದು ಅಷ್ಟೇ ಅಲ್ಲದೇ, ಕಚೇರಿಯಲ್ಲಿನ ಯಾವುದೇ ಒಂದು ಕಡತವನ್ನು ಮಂಜೂರಾತಿ ಮಾಡದೇ ಕಾರ್ಯ ವಿಳಂಬ ಮಾಡಿದರೂ ಸಹ ಅದು ಭ್ರಷ್ಟಾಚಾರವೇ, ಇದನ್ನು ಅರ್ಥೈಸಿಕೊಂಡು ಪ್ರಜಾಪ್ರಭುತ್ವದ ಆತ್ಮವಾಗಿರುವ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದಾಗ ಮಾತ್ರ ಉತ್ತಮ ಸಮಾಜ ಕಟ್ಟಲು ಸಾಧ್ಯ ಎಂದರು.

ಸರ್ಕಾರವು ಸಕಾಲ ಸೇವೆಯನ್ನು ಜಾರಿಗೆ ತಂದು, ಸಾರ್ವಜನಿಕರು ಕಛೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದ್ದು, 450ಕ್ಕೂ ಹೆಚ್ಚು ಸೇವೆಗಳನ್ನು ಸಕಾಲದಲ್ಲಿ ಒದಗಿಸಲಾಗುತ್ತಿದೆ ಎಂದರು.

ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಭ್ರಷ್ಟಾಚಾರ ತಡೆ ಜಾಗೃತಿ ಸಪ್ತಾಹದ ಪ್ರತಿಜ್ಞಾ ವಿಧಿ ಬೋಧಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ ಬಿ. ಇಟ್ನಾಳ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣನಾಯ್ಕ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಎಲ್.ಹೆಚ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!