ಮಕ್ಕಳಿಗೆ ಕಾಯ್ದಾರಿಸಿದ ಬಿಸಿ ನೀರು ಕೊಡಬೇಕು

ಮಕ್ಕಳಿಗೆ ಕಾಯ್ದಾರಿಸಿದ ಬಿಸಿ ನೀರು ಕೊಡಬೇಕು

ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಹೊಸ ಬುಳ್ಳಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ ನಿರ್ದೇಶನ

ದಾವಣಗೆರೆ, ಅ. 9 –  ಜನರಿಗೆ ಇತ್ತೀಚಿಗೆ ಜ್ವರದಿಂದ ಬಾಧಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟದ ವೇಳೆ ಮಕ್ಕಳಿಗೆ ಕಾಯ್ದಾರಿಸಿದ ಬಿಸಿ ನೀರು ನೀಡಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಶಿಕ್ಷಕರಿಗೆ ಸೂಚನೆ ನೀಡಿದರು.

ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಹೊಸ ಬುಳ್ಳಾಪುರ ಗ್ರಾಮದಲ್ಲಿ ಸೋಮವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಹೆಚ್ಚುವರಿ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಂದ ಹಿಡಿದು ವೃದ್ಧರವರಿಗೂ ಜ್ವರದಿಂದ ಬಳಲುತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಬಿಸಿಯೂಟದ ವೇಳೆ ಕಾಯ್ದಾರಿಸಿದ ಬಿಸಿ ನೀರು ಕೊಡಬೇಕೆಂದು ಶಿಕ್ಷಕರಿಗೆ ಸಲಹೆ ನೀಡಿದರು.

ಈ ಶಾಲೆಯ ಕೊಠಡಿಗಳ ಆರ್‌ಸಿಸಿ ಬಿರುಕುಗೊಂಡು ಮಳೆ ಬಂದಾಗ ಸೋರು ತ್ತಿವೆ. ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದು ಮುಖ್ಯ ಶಿಕ್ಷಕರು ಮಾಹಿತಿ ನೀಡಿದ್ದಾರೆ. ನಾನು ಕೊಠಡಿ ದುರಸ್ತಿಗೆ ಬೇಕಾದ ಅನುದಾನ ಕೊಡುತ್ತೇನೆ. ಕೂಡಲೇ ಮಕ್ಕಳಿಗೆ ಶುದ್ಧ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸುವಂತೆ ಈಗಾಗಲೇ ಗ್ರಾ.ಪಂ. ಪಿಡಿಒಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಗ್ರಾಮದಲ್ಲಿ ಬಡವರು ಬಗರ್ ಹುಕ್ಕುಂ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಆದರೆ ಅವರಿಗೆ ಮನೆಗಳ ಹಕ್ಕುಪತ್ರ ಇನ್ನೂ ಸಿಕ್ಕಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರವೇ ಮನೆಗಳ ಹಕ್ಕುಪತ್ರ ವಿತರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಉತ್ತರ ವಲಯದ ಬಿಇಒ ಶೇರ್ ಅಲಿ, ಆನಗೋಡು ಉಪತಹಶೀಲ್ದಾರ್ ರಾಮಸ್ವಾಮಿ, ಇಸಿಒ ಶ್ರೀನಿವಾಸ್, ಆನಗೋಡು ಕಂದಾಯ ಅಧಿಕಾರಿ ಚಂದ್ರಪ್ಪ, ಆನಗೋಡು ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ಉಪಾಧ್ಯಕ್ಷ ಬಸವ ರಾಜಪ್ಪ, ಪಿಡಿಒ ಸುಮಲತಾ, ಸದಸ್ಯ ಕರಿಬ ಸಪ್ಪ ಹಾಗೂ ಮುಖಂಡರಾದ ಬಸವನ ಗೌಡಪ್ಪ, ನಾಗರಾಜಪ್ಪ, ಹನುಮಂತ, ಬಸವ ರಾಜ್, ಮೂರ್ತೆಪ್ಪ, ಕೊಂಡಪ್ಪ, ಮಂಜು, ಓಬಳೇಶ್, ಎಸ್.ಟಿ.ಪರಮೇಶ್ವರಪ್ಪ ಇದ್ದರು.

ಇದೇ ಸಂದರ್ಭದಲ್ಲಿ ಹೊಸ ಬುಳ್ಳಾಪುರ ಮತ್ತು ಹಳೆಬುಳ್ಳಾಪುರ ಗ್ರಾಮದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಮಕ್ಕಳ ಸಮಸ್ಯೆಗಳನ್ನು ಆಲಿಸಿದರು.

error: Content is protected !!