ಮಕ್ಕಳಿಗೆ ಚಿಕ್ಕಂದಿನಿಂದಲೇ ದಾನದ ಗುಣ ಬೆಳೆಸಬೇಕು

ಮಕ್ಕಳಿಗೆ ಚಿಕ್ಕಂದಿನಿಂದಲೇ ದಾನದ ಗುಣ ಬೆಳೆಸಬೇಕು

ಶ್ರೀ ಕ್ಷೇತ್ರ ಧರ್ಮಸ್ಥಳದ ಅನ್ನ ದಾಸೋಹಕ್ಕೆ ಶ್ರೀ ಸೋಮೇಶ್ವರ ವಿದ್ಯಾಲಯದಿಂದ ಅಕ್ಕಿ ಸಮರ್ಪಣೆ

ದಾವಣಗೆರೆ, ಅ.7- ಮಕ್ಕಳಿಗೆ ಚಿಕ್ಕಂದಿನಿಂದಲೇ ದಾನದ ಗುಣ ಬೆಳೆಸುವುದರಿಂದ ಉತ್ತಮ ಸಂಸ್ಕಾರ ನೀಡಿದಂತಾಗುತ್ತದೆ. ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದು ಭಾರತೀಯ ಸಂಸ್ಕೃತಿಯಲ್ಲಿನ ಬಲವಾದ ನಂಬಿಕೆ ಎಂದು ಹರಿಹರ ಶ್ರೀ ರಾಮಕೃಷ್ಣ ಮಿಷನ್‌ನ ಅಧ್ಯಕ್ಷರಾದ ಶ್ರೀ ಶಾರದೇಶಾನಂದ ಸ್ವಾಮಿ ಮಹಾರಾಜ್ ಹೇಳಿದರು.

ನಗರದ ಶ್ರೀ ಸೋಮೇಶ್ವರ ವಿದ್ಯಾಲಯದ ಆವರಣದಲ್ಲಿ ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಅನ್ನ ದಾಸೋಹಕ್ಕೆ ದ್ವಿತೀಯ ವರ್ಷದ ಅಕ್ಕಿ ಸಮರ್ಪಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ದಾನಕ್ಕೆ ತನ್ನದೇ ಆದ ಮಹತ್ವವಿದೆ. ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯ ಜೊತೆಗೆ ಮನಸ್ಸಿಗೆ ಸಂತೋಷ, ಆತ್ಮತೃಪ್ತಿ ಉಂಟಾಗುತ್ತದೆ ಎಂದರು.

ಇಡೀ ಜಗತ್ತಿನಲ್ಲಿಯೇ ಶ್ರೀ ಧರ್ಮಸ್ಥಳ ಸುಕ್ಷೇತ್ರ ಅನ್ನ ದಾಸೋಹದಲ್ಲಿ ಅತ್ಯಂತ ಪ್ರಖ್ಯಾತಿಯನ್ನು ಪಡೆದಿದ್ದು, ನಿತ್ಯ ಸಾವಿರಾರು ಭಕ್ತರಿಗೆ ಅನ್ನ ದಾಸೋಹದ ಮೂಲಕ ತೊಡಗಿಸಿಕೊಂಡಿರುವ ಸೇವಾ ಕಾರ್ಯ  ಶ್ಲ್ಯಾಘನೀಯವಾದುದು ಎಂದು ಹೇಳಿದರು.

ಇದೇ ವೇಳೆ ವಿವೇಕಾನಂದರ ಹಿತ ನುಡಿಗಳನ್ನು ಮಕ್ಕಳಿಗೆ ಹೇಳಿಕೊಡುವ ಮೂಲಕ ಅನ್ನದಾನದ ಶ್ರೇಷ್ಠತೆ ಹಾಗೂ ಅನ್ನದ ಮಹತ್ವವನ್ನು ವಿವರಿಸಿದ ಶ್ರೀಗಳು, ಇಂತಹ ಪುಣ್ಯದ ಕೆಲಸವನ್ನು ಮಾಡುತ್ತಿರುವ ಶ್ರೀ ಸೋಮೇಶ್ವರ  ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ. ಸುರೇಶ್ ಮತ್ತು ಅವರ ಸೇವೆ ಅನನ್ಯ ಎಂದು ಬಣ್ಣಿಸಿ, ಸನ್ಮಾನಿಸಿ, ಗೌರವಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ರೈತ ಸಮುದಾಯ ಸಹ ದಾನ ಮಾಡುವುದರಲ್ಲಿ ಎತ್ತಿದ ಕೈ. ತಾವು ಬೆಳೆದ ದವಸ-ಧಾನ್ಯಗಳಲ್ಲಿ ಒಂದು ಪಾಲು ದಾನ ಮಾಡಲು ತೆಗೆದಿಡುತ್ತಾರೆ. ದಾನದ ಮಹತ್ವ ಸಾರುವ ಮತ್ತು ದಾನ ನೀಡಲು ಮಕ್ಕಳಲ್ಲಿ ಪ್ರೇರಣೆ ನೀಡುವ ಇಂತಹ ಕಾರ್ಯಕ್ರಮಗಳನ್ನು ಇತರೆ ಶಾಲೆಗಳು ಕೂಡ ಅನುಕರಿಸಬೇಕೆಂದು ಸಲಹೆ ನೀಡಿದರು.

ಸರ್ ಎಂ.ವಿ. ಕಾಲೇಜಿನ ಅಧ್ಯಕ್ಷ ಎಸ್.ಜೆ. ಶ್ರೀಧರ್ ಮಾತನಾಡಿ, ನಾವು ದುಡಿದ ಸಂಪಾದನೆಯಲ್ಲಿ ಒಂದಿಷ್ಟು ಹಣವನ್ನು ದಾನಕ್ಕೆ ಮೀಸಲಿಡುವುದರಿಂದ ಧನ್ಯತಾಭಾವ ಉಂಟಾಗುತ್ತದೆ. ದಾನ ಕೂಡ ಶಿಕ್ಷಣದ ಒಂದು ಭಾಗ ಎಂದರು.

ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ ಮಾತನಾಡಿ, ಕೇಳುವ ಕೈಗಳಿಗೆ ಪ್ರಾಮಾಣಿಕತೆ ಇದ್ದರೆ, ಕೊಡುವ ಕೈಗಳಿಗೆ ಬರವಿಲ್ಲ. ದಾನದ ಗುಣ ಬೆಳೆಸುವ ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಪ್ರೇರಣೆ, ತ್ಯಾಗ ಮತ್ತು ಸೇವಾ ಮನೋಭಾವನೆ ನಮ್ಮ ದೇಶದ ಸಂಸ್ಕೃತಿಯ ಮೂಲ ಆಶಯವಾಗಿದೆ ಎಂದು ಹೇಳಿದರು.

ಶ್ರೀ ಸೋಮೇಶ್ವರ ವಿದ್ಯಾಲಯದ ಅಧ್ಯಕ್ಷ ಹೆಚ್.ಆರ್. ಅಶೋಕ ರೆಡ್ಡಿ ಮಾತನಾಡಿದರು. ಶ್ರೀ ಸೋಮೇಶ್ವರ ಸಮೂಹ ಸಂಸ್ಥೆಗಳ ಸಂಸ್ಥಾಪಕ ಕೆ.ಎಂ. ಸುರೇಶ್, ಮಹಾನಗರ ಪಾಲಿಕೆ ಸದಸ್ಯ ಕೆ.ಎಂ. ವಿರೇಶ್ ಮತ್ತಿತರರು ಭಾಗವಹಿಸಿದ್ದರು.

error: Content is protected !!