ಉಚಿತ ಪ್ರಸಾದ ನಿಲಯಗಳ ಪಿತಾಮಹ ಲಿಂ. ಜಯದೇವ ಜಗದ್ಗುರುಗಳು

ಉಚಿತ ಪ್ರಸಾದ ನಿಲಯಗಳ ಪಿತಾಮಹ ಲಿಂ. ಜಯದೇವ ಜಗದ್ಗುರುಗಳು

ಶ್ರೀ ಜಯದೇವ ಲೀಲೆ ಪ್ರವಚನ ಕಾರ್ಯಕ್ರಮದಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿ

ದಾವಣಗೆರೆ, ಆ.8- ಉಚಿತ ಪ್ರಸಾದ ನಿಲಯಗಳ ಪಿತಾಮಹ ಲಿಂ.ಜಯದೇವ ಜಗದ್ಗುರುಗಳು ಎಂದು ಚಿತ್ರದುರ್ಗ ಮುರುಘಾ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಬಣ್ಣಿಸಿದರು.

ನಗರದ ಬಸವ ಕೇಂದ್ರ, ಶಿವಯೋಗಾಶ್ರಮದಲ್ಲಿ ಲಿಂ.ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ ರಥೋತ್ಸವ ಹಾಗೂ ವಚನ ಗ್ರಂಥ ಮೆರವಣಿಗೆ, 67ನೇ ವರ್ಷದ ಸ್ಮರಣೋತ್ಸವದ ಅಂಗವಾಗಿ ಇಂದು ಹಮ್ಮಿ ಕೊಳ್ಳಲಾಗಿದ್ದ ಶ್ರೀ ಜಯದೇವ ಲೀಲೆ ಪ್ರವಚನ ಕಾರ್ಯ ಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಜಯದೇವ ಜಗದ್ಗುರುಗಳು ಸ್ವಾತಂತ್ರ್ಯ ಪೂರ್ವದಲ್ಲಿಯೇ ನಾಡಿನ ಬಡಮಕ್ಕಳಿಗಾಗಿ ಉಚಿತ ಪ್ರಸಾದ ನಿಲಯಗಳನ್ನು ಪ್ರಾರಂಭಿಸಿ, ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದರು ಎಂದರು.

ಇಪ್ಪತ್ತನೆಯ ಶತಮಾನದಲ್ಲಿ ಸಾಮಾ ಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯದ್ಭುತವಾದ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸಮಾಜವನ್ನು ಉದ್ಧಾರ ಮಾಡಿದ ಕೀರ್ತಿ  ಲಿಂ. ಜಗದ್ಗುರು ಜಯದೇವ ಶ್ರೀಗಳಿಗೆ ಸಲ್ಲುತ್ತದೆ ಎಂದರು.

ವಿಶ್ವಗುರು ಎಂದರೆ ಬಸವಣ್ಣನವರು ನೆನಪಿಗೆ ಬರುವಂತೆ, ಜಗದ್ಗುರು ಎಂದರೆ ಜಯದೇವ ಜಗದ್ಗುರುಗಳವರು ಎಂದು ಪ್ರಖ್ಯಾತರಾಗಿದ್ದಾರೆ. ಅವರ ಬದುಕು ನಾಡಿನ ಜನತೆಗೆ ಅದು ಆದರ್ಶ ಅಷ್ಟೇ ಅಲ್ಲ, ಮಾನವ ಕುಲಕ್ಕೆ ಜ್ಞಾನ ದೀಪದ ಸ್ತಂಭವಾಗಿ ಬೆಳಕನ್ನು ನೀಡುತ್ತಿದ್ದಾರೆ. ಅವರು ನಮ್ಮ ಭಕ್ತರ ಎದೆಯಲ್ಲಿ  ಸದಾಕಾಲವೂ ಉಸಿರಾಗಿ ಬೆರೆತು ಹೋಗಿದ್ದಾರೆ. ಹಾಗಾಗಿ ಇಂದಿಗೂ ಎಲ್ಲರೂ ಅವರ ಸ್ಮರಣೆಯಲ್ಲಿದ್ದಾರೆ ಇದು ನಿಜವಾದ ಸಾಧನೆ ಎಂದರು. ಮಾನವ ಎಷ್ಟು ದಿನಗಳ ಕಾಲ ಬದುಕಿದ್ದ ಎನ್ನುವು ದಕ್ಕಿಂತ ಎಷ್ಟು ಒಳ್ಳೆಯ ಕಾರ್ಯಗಳನ್ನು ಮಾಡಿದ್ದ ಎನ್ನುವುದು ಮಹತ್ವದ್ದಾಗಿದೆ. ಈ ನಾಡಿನಲ್ಲಿ ಲಕ್ಷಾಂತರ ಜನರಿಗೆ ವಿದ್ಯೆಯನ್ನು ನೀಡಿದ ಮಹಾಮಹಿಮರು ಜಯದೇವ ಜಗದ್ಗುರುಗಳವ ರಾಗಿದ್ದಾರೆ. ಹಾಗಾಗಿಯೇ ಅವರೊಬ್ಬ ವಿಭೂತಿ ಪುರುಷರು. ಯುಗ ಪುರುಷರೂ ಆಗಿದ್ದಾರೆ ಎಂದರು.

ಚನ್ನಗಿರಿಯ ಪ್ರವಚನಕಾರ ಮಹಾಂತೇಶ ಶಾಸ್ತ್ರಿಗಳು ತಮ್ಮ ಪ್ರವಚನದಲ್ಲಿ ಮಾತನಾಡುತ್ತಾ,  ನರ ಜನ್ಮದಲ್ಲಿ ಹುಟ್ಟಿದವನು ಹರನಾಗಲು ಗುರುವಿನಿಂದ ಸನ್ಮಾರ್ಗದ ಕೃಪೆ ಇರಬೇಕು ಎಂದರು.

ಕಾಶಿಯಲ್ಲಿ ಮದನ್ ಮೋಹನ್ ಮಾಳವೀಯ ಅವರು ವಿಶ್ವವಿದ್ಯಾಲಯ ಸ್ಥಾಪಿಸಲು ಹಣಕ್ಕಾಗಿ ವಂತಿಕೆ ಸಂಗ್ರಹಿಸುವಾಗ ಅವರ ಬೆನ್ನ ಹಿಂದೆ ನಿಂತು ವಂತಿಗೆ ಸಂಗ್ರಹಿಸಲು ನೆರವಾಗಿದ್ದು ಲಿಂ.ಜಯದೇವ ಜಗದ್ಗುರು ಗಳು. ಈ ಮೂಲಕ ಅವರು ಕಾಶಿಯಲ್ಲಿ ಕರ್ನಾಟಕದ ಹೆಸರನ್ನು ಅಜರಾಮರಗೊಳಿಸಿದ್ದಾರೆ ಎಂದರು.

ರೈತ ಮುಖಂಡ ತೇಜಸ್ವಿ ವಿ. ಪಟೇಲ್ ಸಮಾರಂಭ  ಉದ್ಘಾಟಿಸಿದರು. ಬಸವಕಲಾ ಲೋಕದವರು ವಚನ ಸಂಗೀತ ನಡೆಸಿಕೊಟ್ಟರು.

error: Content is protected !!