ವ್ಯಕ್ತಿ ಸ್ವಾತಂತ್ರ್ಯ ಕಸಿಯುವ ಪ್ರಯತ್ನ ಸಲ್ಲದು

ವ್ಯಕ್ತಿ ಸ್ವಾತಂತ್ರ್ಯ ಕಸಿಯುವ ಪ್ರಯತ್ನ ಸಲ್ಲದು

ಎಸ್ಟಿ ಸಮುದಾಯದ ಹತ್ತು ವಿದ್ಯಾರ್ಥಿಗಳಿಗೆ ಇನ್‌ಸೈಟ್ಸ್‌ ಸಂಸ್ಥೆಯಿಂದ ಉಚಿತವಾಗಿ ಐಎಎಸ್ ತರಬೇತಿ ನೀಡಲಾಗುವುದು. ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. 

– ಜಿ.ಬಿ. ವಿನಯ್ ಕುಮಾರ್

ದಾವಣಗೆರೆ, ಅ. 8- ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಂವಿಧಾನದ ಮೂಲಕ ಬಂದಿರುವ ಒಬ್ಬರ ಸ್ವಾತಂತ್ರ್ಯವನ್ನು ಮತ್ತೊಬ್ಬರು ಕಸಿಯುವ ಪ್ರಯತ್ನವನ್ನು ಯಾರೂ ಸಹ  ಮಾಡಬಾರದು ಎಂದು ಇನ್‌ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್ ಹೇಳಿದರು.

ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ನಾಯಕ (ಎಸ್‌ಟಿ) ಸಮುದಾಯದ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿ ಮುಂದೆ ಬಂದಿದ್ದೇನೆ. ಕಳೆದ ಮೂರು ತಿಂಗಳುಗಳಿಂದ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿರುವ ಕಾರಣ ನನ್ನ ಹೆಸರು ಪ್ರಚಲಿತದಲ್ಲಿದೆ. ರಾಜಕೀಯ ಸಮೀಕ್ಷೆಯಲ್ಲೂ ಸಹ ನನ್ನ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದ್ದು, ನನಗೇ ಟಿಕೆಟ್ ಸಿಗುತ್ತದೆಂಬ ಖಾತ್ರಿ ನನ್ನದು. ಯಾರಿಗೂ ಹೆದರದೇ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಅದು ನನ್ನ ವೈಯಕ್ತಿಕ ವಿಚಾರ ಎಂದು ವಿನಯ್ ಕುಮಾರ್ ಸ್ಪಷ್ಟಪಡಿಸಿದರು.

ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ದೇಶವಾಗಿದೆ. ರಾಜಕೀಯ ಕ್ಷೇತ್ರಕ್ಕೆ ಪಾದರ್ಪಣೆ ಮಾಡುವ ಮೂಲಕ, ಪ್ರತಿ ಹಳ್ಳಿಗಳಿಗೆ ಹೋದಾಗ ನನ್ನನ್ನು ಯಾರೂ ತಡೆಯುವುದಿಲ್ಲ. ಜನರನ್ನು ಮಾತನಾಡಿಸಿದಾಗ ಯಾರು ಕೂಡ ಬರಬೇಡ ಎಂಬ ನಿರ್ಬಂಧ ಕೂಡ ಹೇರಿಲ್ಲ ಎಂದರು.

ಇಂತಹ ಸ್ವಾತಂತ್ರ್ಯ ನಮಗೆಲ್ಲರಿಗೂ ನೀಡಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನನ್ನದೊಂದು ದೊಡ್ಡ ಸಲಾಂ. ಆದರೆ ಇಂತಹ ಸ್ವಾತಂತ್ರ್ಯವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಕಿತ್ತುಕೊಳ್ಳಲೂಬಾರದು. ಅಂತಹ ಪ್ರಯತ್ನ ಸಹ ಮಾಡಬಾರದು ಎಂದು ಹೇಳಿದರು.

ಪ್ರಗತಿ ಹೊಂದಿದವರು ತುಳಿತಕ್ಕೆ ಒಳಗಾದವ ರನ್ನು ಮೇಲೆಕ್ಕೇರಲು ಬಿಡುತ್ತಿಲ್ಲ. ಹಣವುಳ್ಳವರೇ ಅಧಿಕಾರಕ್ಕೆ ಬರುತ್ತಿದ್ದು, ಈ ಎರಡೂ ಪರಿಸ್ಥಿತಿಗಳು ಬದಲಾಗಬೇಕು. ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ.

ಒಬ್ಬ ಯುವ ರಾಜಕಾರಣಕ್ಕೆ ಬರುತ್ತಾನೆಂದರೆ ಆತನಿಗೆ ಪ್ರೋತ್ಸಾಹ ಸಿಗುವುದಿಲ್ಲ. ಅವನು ಎಲ್ಲಿ ಬೆಳೆಯುತ್ತಾನೋ ಎನ್ನುವ ಭಯ. ಅಭದ್ರತೆ ಕಾಡುತ್ತಿದೆ. ಇದು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ. ದೇಶಾದ್ಯಂತ ಇದೆ. ಇಂದು ಮಹತ್ತರ ಕನಸು ಕಾಣುವುದು ಕೂಡ ಅಪರಾಧವಾಗಿದೆ. ದೊಡ್ಡ ದೊಡ್ಡ ಕನಸು ಕಾಣಲು ನಮ್ಮ ಸಂಸ್ಥೆ ನಿಮ್ಮ ಜೊತೆ ಸದಾ ಇರುತ್ತದೆ ಎಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.

ಸಮಾರಂಭವನ್ನು ಉದ್ಘಾಟಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕರಿಸಿದ್ಧಪ್ಪ ಮಾತನಾಡಿ, ಸರ್ಕಾರಿ ಉದ್ಯೋಗ ಪಡೆಯುವಲ್ಲಿ ಪರಿಶಿಷ್ಟ ಸಮುದಾಯ ಹಿಂದೆ ಬಿದ್ದಿದ್ದು, ಈ ನಿಟ್ಟಿನಲ್ಲಿ ವಿದ್ಯಾವಂತ ಯುವಕ-ಯುವತಿಯರು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯವಿದೆ ಎಂದರು.

ಮಕ್ಕಳ ಸಾಧನೆಗೆ ಪೋಷಕರು ಬೆನ್ನೆಲುಬಾಗಿ ನಿಲ್ಲಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಿಕೊಟ್ಟಾಗ ಮಾತ್ರ ದೇಶ ಅಭಿವೃದ್ಧಿ ಕಾಣಲು ಸಾಧ್ಯ. ರಾಜ್ಯದಲ್ಲಿ 83 ಲಕ್ಷ ಎಸ್ಟಿ ಜನಸಂಖ್ಯೆ ಇದ್ದು, ಸಮುದಾಯದ ಯುವಕ-ಯುವತಿಯರು ಉನ್ನತ ಸ್ಥಾನಮಾನ ಪಡೆಯಲು ವಾಲ್ಮೀಕಿ ಗುರುಪೀಠ ಮೆಡಿಕಲ್, ಇಂಜನಿಯರಿಂಗ್, ವೃತ್ತಿಪರ ಕಾಲೇಜು ಗಳನ್ನು ಪ್ರಾರಂಭ ಮಾಡುವ ಅವಶ್ಯವಿದೆ ಎಂದರು.

ಎಸ್ಟಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸಮೂರ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹಾಲೇಶಪ್ಪ, ಸಮಾಜದ ಮುಖಂಡ ಹೊದಿಗೆರೆ ರಮೇಶ್, ಪ್ರಗತಿ ಪರ ರೈತ ನಾಗೇಂದ್ರಪ್ಪ, ನಿವೃತ್ತ ಶಿಕ್ಷಕಿ ನಾಗವೇಣಿ, ನಿವೃತ್ತ ಪೊಲೀಸ್ ಅಧಿಕಾರಿ ಪ್ರಹ್ಲಾದ್, ಗುಮ್ಮನೂರು ಚನ್ನಬಸಪ್ಪ ಮತ್ತಿತರರು ಭಾಗವಹಿಸಿದ್ದರು.

error: Content is protected !!