ಓದಿನ ಜೊತೆ ನಾಯಕತ್ವ ಗುಣ ಮೈಗೂಡಿಸಿಕೊಳ್ಳಬೇಕು

ಓದಿನ ಜೊತೆ ನಾಯಕತ್ವ ಗುಣ ಮೈಗೂಡಿಸಿಕೊಳ್ಳಬೇಕು

ಸಾಹಸ ಕ್ರೀಡೆಗಳ ತರಬೇತಿ ಕಾರ್ಯಾಗಾರದಲ್ಲಿ ಮೇಘನಾಥ್ ಕರೆ

ದಾವಣಗೆರೆ, ಅ.8- ವಿದ್ಯಾರ್ಥಿ -ವಿದ್ಯಾರ್ಥಿನಿಯರು ಓದಿನ ಜೊತೆಗೆ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಉನ್ನತ ಸಾಧನೆ ಮೆರೆಯಬೇಕು ಎಂದು ಸಂತ ಪೌಲರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಟಿ.ಮೇಘನಾಥ್ ಕರೆ ನೀಡಿದರು.

ನಗರದ ಸಂತ ಪೌಲರ ಪದವಿ ಪೂರ್ವ ಕಾಲೇಜಿನಲ್ಲಿ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್‌ ಅಕಾಡೆಮಿ ಹಮ್ಮಿಕೊಂಡಿದ್ದ ಸಾಹಸ ಕ್ರೀಡೆಗಳ ಕುರಿತ ತರಬೇತಿ ಕಾರ್ಯಾಗಾರ ಹಾಗೂ ಬೋಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿನಿಯರಲ್ಲಿ ಸಾಹಸ ಗುಣ ಬೆಳೆಸಲು ಇಂತಹ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ವಿದ್ಯಾರ್ಥಿಗಳು ಸಾಧನೆ ಮಾಡಬೇಕು. ಕಲೆ, ಕ್ರೀಡೆ, ಸಂಗೀತ, ಸಾಹಿತ್ಯ ಹೀಗೆ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಗಮನಹರಿಸಬೇಕು. ತಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ನಿಮ್ಮ ಪಾಲಕರಿಗೂ ಸಹ ಮೊಬೈಲ್‌ ಕೊಡಿಸದಂತೆ ತಿಳಿ ಹೇಳುವ ಮೂಲಕ ನಿಮ್ಮ ಜ್ಞಾನ ಸಾಧನೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.

ಬೋಧಕರನ್ನು ಸನ್ಮಾನಿಸಿ ಮಾತನಾಡಿದ  ಹಿರಿಯ ಪತ್ರಕರ್ತ ನಾಗರಾಜ ಎಸ್‌.ಬಡದಾಳ್‌, ಸಾಹಸ ಕ್ರೀಡೆಗಳ ಬಗ್ಗೆ ಗಂಟೆಗಟ್ಟಲೇ ಕಾರ್ಯಾಗಾರದಲ್ಲಿ ಆಲಿಸಿದ್ದೀರಿ. ಭವಿಷ್ಯ, ಜೀವನ ಸಹ ಸವಾಲಿನದ್ದೇ ಆಗಿರುತ್ತದೆ. ಅದನ್ನೆಲ್ಲಾ ಆತ್ಮವಿಶ್ವಾಸದಿಂದ ಎದುರಿಸುವ ಮೂಲಕ ಜೀವನ ಸಾಧನೆಯೆಂಬ ಸಾಹಸದಲ್ಲಿ ನೀವೆಲ್ಲರೂ ಯಶಸ್ವಿಯಾಗಬೇಕು. ಈ ಸಂಸ್ಥೆ ಯಲ್ಲಿ ಓದಿದ ಅದೆಷ್ಟೋ ಹಿರಿಯ ವಿದ್ಯಾರ್ಥಿನಿಯರು ದೇಶ, ವಿದೇಶಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಆ ಎಲ್ಲರಿಗಿಂತ ಉನ್ನತ ಸಾಧನೆ ನಿಮ್ಮಿಂದ ಆಗಬೇಕು ಎಂದು ಕರೆ ನೀಡಿದರು.

ಮೊಬೈಲ್‌, ವಾಟ್ಸಾಪ್‌, ಫೇಸ್‌ ಬುಕ್‌, ಮೆಸೆಂಜರ್‌ ನಂತಹ ಸಾಮಾಜಿಕ ಜಾಲತಾಣಗಳನ್ನು ಹಿತಮಿತವಾಗಿ ಬಳಸಬೇಕು. ಊಟದ ಎಲೆಯಲ್ಲಿ ಚಿಟಿಕೆ ಉಪ್ಪು ಇಟ್ಟಿರುತ್ತಾರೆ. ರುಚಿಗೆ ತಕ್ಕಷ್ಟು ಮಾತ್ರ ಉಪ್ಪನ್ನು ಹೇಗೆ ಬಳಸುತ್ತೇವೆಯೋ, ಅದೇ ರೀತಿ ನಮ್ಮ ಜ್ಞಾನ ಹೆಚ್ಚಿಸಿಕೊಳ್ಳಲಷ್ಟೇ ಸಾಮಾಜಿಕ ಜಾಲತಾಣ ಬಳಸಿ. ಅನಾವಶ್ಯಕವಾಗಿ ಯಾರೊಂದಿಗೂ ಸಲಹೆ ಬೇಡ. ಜೀವನದಲ್ಲಿ ಎಂತಹದ್ದೇ ಸಮಸ್ಯೆ, ಸವಾಲುಗಳನ್ನು ಎದುರಿಸುತ್ತೇವೆಂಬ ಆತ್ಮವಿಶ್ವಾಸ ಮೈಗೂಡಿಸಿಕೊಂಡು ಸಾಧನೆ ಮಾಡಿ ಎಂದು ಅವರು ಕಿವಿಮಾತು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಹಿಮಾ ಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ಕಾರ್ಯದರ್ಶಿ, ಸಾಹಸ ಕ್ರೀಡೆಗಳ ತರಬೇತುದಾರ ಎನ್‌.ಕೆ.ಕೊಟ್ರೇಶ್ ಮಾತನಾಡಿದರು.

ರೆಡ್‌ಕ್ರಾಸ್ ಸಂಸ್ಥೆಯ ಸಂಚಾಲಕರಾದ ಶಿವಕುಮಾರ ಮತ್ತು ಇತರರು  ಇದ್ದರು. ಇದೇ ವೇಳೆ ಕಾಲೇಜಿನ ಬೋಧಕ ಎಸ್‌.ಕಿರಣ್‌, ದೈಹಿಕ ಶಿಕ್ಷಕ ಎ.ಬಿ.ಸಿದ್ದೇಶ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

error: Content is protected !!