ಹೂವಿನಹಡಗಲಿ, ಅ.8- ಜೆಸ್ಕಾಂ ನೌಕರ ಕೊಟ್ರೇಶ್ ಬಾರ್ಕಿ ಹಗರನೂರಿನ ಖಾಸಗಿ ಶಾಲೆಯ ವಿದ್ಯಾರ್ಥಿನಿಯರಿಗೆ ಅಕ್ರಮವಾಗಿ ಶಾಲೆ ಪ್ರವೇಶ ಮಾಡಿ, ಲೈಂಗಿಕ ಕಿರುಕುಳ ಕೊಟ್ಟ ಹಾಗೂ ವಿಕೃತವಾಗಿ ವರ್ತಿಸಿದ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದನ್ನು ಗಮನಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ವಿಚಾರಣೆ ನಡೆಸಿ, ಲೈಂಗಿಕ ಶೋಷಣೆಗೊಳಗಾದ ವಿದ್ಯಾರ್ಥಿನಿಯರನ್ನು ಸಂಪರ್ಕಿಸಿ, ನಂತರ ಹಿರೇಹಡಗಲಿ ಪೊಲೀಸರಿಗೆ ದೂರು ನೀಡಿರುವುದರಿಂದ ಕೊನೆಗೂ ಪೋಕ್ಸೋ ಪ್ರಕರಣ ದಾಖಲಿಸಿ, ಕೊಟ್ರೇಶ್ ಬಾರ್ಕಿಯನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ತಾಲ್ಲೂಕಿನ ಹಗರನೂರು ಶಾಲೆಯ ಆಡಳಿತ ಮಂಡಳಿಯಲ್ಲಿ ತಮ್ಮ ಸಹೋದರ ಇರುವ ಕಾರಣಕ್ಕೆ ಮತ್ತು ಸದರಿ ಶಾಲೆಯನ್ನು ಆರಂಭಿಸಲು ಪರಿಶ್ರಮ ಹಾಕಿದ್ದೇನೆಂಬ ನೆಪದಲ್ಲಿ ತಾನು ಮಾಡುವ ಜೆಸ್ಕಾಂ ಕೆಲಸಕ್ಕೆ ಗೈರು ಹಾಜರಾಗಿ ಯಾವಾಗಲೂ ಸದರಿ ಶಾಲೆಯಲ್ಲಿ ಇರುತ್ತಿದ್ದ ಎನ್ನಲಾಗಿದೆ.