ದಾವಣಗೆರೆ, ಅ.8- ಪಾರಂಪರಿಕ ವೈದ್ಯ ಪರಿಷತ್‌ವತಿಯಿಂದ ರಾಷ್ಟ್ರ ಮಟ್ಟದ ಹಾಗೂ 14ನೇ ರಾಜ್ಯ ಮಟ್ಟದ ಪಾರಂಪರಿಕ ವೈದ್ಯರ ಸಮ್ಮೇಳನವನ್ನು ಇದೇ ದಿನಾಂಕ 26ರಿಂದ 28ವರೆಗೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ಆದಿಚುಂಚನಗಿರಿ ಮಠದ ಸಹಯೋಗದಲ್ಲಿ ಏರ್ಪಡಿಸಲಾಗಿದೆ ಎಂದು ಪರಿಷತ್‌ನ ಜಿಲ್ಲಾ ಸಂಚಾಲಕರಾದ ಕೆ.ಎಂ. ಪುಷ್ಪಲತಾ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದಿನಾಂಕ
26 ರಂದು ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ವೈದ್ಯ ಪರಿಷತ್ತಿನ ಗೌರವಾಧ್ಯಕ್ಷ ಪ್ರಸನ್ನನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸಮ್ಮೇಳನ
ನಡೆಯಲಿದ್ದು ವೈದ್ಯ ಪರಿಷತ್ ಅಧ್ಯಕ್ಷ ಜಿ. ಮಹದೇವಯ್ಯ ಅಧ್ಯಕ್ಷತೆ ವಹಿಸುವರು ಎಂದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸುವರು. ಕೃಷಿ ಸಚಿವ ಚೆಲುವರಾಯಸ್ವಾಮಿ, ಸಂಸದೆ ಸುಮಲತಾ, ಶಾಸಕರಾದ ಬಾಲಕೃಷ್ಣ, ಶರಣು ಸಲಗರ, ವೈದ್ಯ ಪರಿಷತ್ ಸಂಸ್ಥಾಪಕ ಗಾ.ನಂ.ಶ್ರೀಕಂಠಯ್ಯ, ಡಾ. ಸತ್ಯನಾರಾಯಣ ಭಟ್ಟ, ಪ್ರೊ. ಜಿ. ಹರಿರಾಮಮೂರ್ತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು.
ಇದೇ ಸಂದರ್ಭದಲ್ಲಿ ಮೂರು ಸಾವಿರಕ್ಕೂ ಅಧಿಕ ಪಾರಂಪರಿಕ ವೈದ್ಯರ ಮಾಹಿತಿ ಒಳ ಗೊಂಡ ಮಾಹಿತಿ ಕೋಶ ಬಿಡುಗಡೆಗೊಳಿಸ ಲಾಗುವುದು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಆರು ಕಾಯಿಲೆಗಳ ಬಗ್ಗೆ 60 ವೈದ್ಯರು ತಮ್ಮ ಅನುಭವದ ವಿಷಯ ಮಂಡಿಸುವರು. ಕಾರ್ಯಕ್ರಮದಲ್ಲಿ ಪಾರಂಪರಿಕ ವೈದ್ಯರ ಜ್ಞಾನದ ದಾಖಲೀಕರಣವೂ ನಡೆಯಲಿದೆ ಎಂದರು.
ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ನಾಡಿನ ಹಲವು ಮಠಾಧೀಶರು, ಆಯುರ್ವೇದ ವಿದ್ಯಾರ್ಥಿಗಳು, ತಜ್ಞ ಆಯುರ್ವೇದ ವೈದ್ಯರು ಭಾಗವಹಿಸಲಿದ್ದಾರೆ. ರಾಜ್ಯದ ಸುಮಾರು ಎರಡು ಸಾವಿರ ಪಾರಂಪರಿಕ ವೈದ್ಯರು ಹಾಗೂ ಆಂಧ್ರ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಛತ್ತೀಸ್‌ಗಡ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ 500ಕ್ಕೂ ಅಧಿಕ ಪಾರಂಪರಿಕ ವೈದ್ಯರು ಸಮ್ಮೇಳನದಲ್ಲಿ ಭಾಗವಹಿ ಸುವರು. ದಾವಣಗೆರೆ ಜಿಲ್ಲೆಯಿಂದ ಅಂದಾಜು ಒಂದು ನೂರು ಜನ ಪಾರಂಪರಿಕ ವೈದ್ಯರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪಾರಂಪರಿಕ ವೈದ್ಯ ಪರಿಷತ್‌ನ ಪ್ರಮುಖರಾದ ಮಮತಾ, ಶಾರದಾ, ಕೆ.ಪಿ. ಲತಾ, ಈಶಣ್ಣ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು. ದಾವಣಗೆರೆ ಪಾರಂಪರಿಕ ವೈದ್ಯ ಪರಿಷತ್‌ನ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿದ್ದರು.