ಗಾಂಧೀಜಿ, ಶಾಸ್ತ್ರೀಜಿ ಸ್ಮರಣೆಯಲ್ಲಿ ದಾವಿವಿಯಿಂದ ಕುಗ್ರಾಮಗಳ ದತ್ತು

ಗಾಂಧೀಜಿ, ಶಾಸ್ತ್ರೀಜಿ ಸ್ಮರಣೆಯಲ್ಲಿ ದಾವಿವಿಯಿಂದ ಕುಗ್ರಾಮಗಳ ದತ್ತು

ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ

ದಾವಣಗೆರೆ, ಅ. 6- ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ದಾವಣಗೆರೆ ವಿಶ್ವವಿದ್ಯಾನಿಲ ಯವು ‘ಗಾಂಧಿ ಪ್ರೇರಣೆ’ ವಿಶೇಷ ಕಾರ್ಯಕ್ರಮ ರೂಪಿಸಿ, ಅದರ ಮೂಲಕ ತನ್ನ ಕಾರ್ಯ ವ್ಯಾಪ್ತಿಯ ಕುಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಂತರ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ 15ರಿಂದ 20 ಗ್ರಾಮಗಳನ್ನು ದತ್ತು ಪಡೆದು ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವುದು. ವಿಶ್ವವಿದ್ಯಾನಿಲಯದ ಪ್ರತಿಯೊಬ್ಬ ಪ್ರಾಧ್ಯಾಪಕರೂ ತಿಂಗಳಿಗೊಮ್ಮೆ ಯಾದರೂ ಗ್ರಾಮಕ್ಕೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕೈ ಜೋಡಿಸುವರು. ಆ ಮೂಲಕ ಗ್ರಾಮಗಳಲ್ಲಿ ಶಿಕ್ಷಣ, ಆರೋಗ್ಯ, ಮೂಲಸೌಲಭ್ಯಗಳನ್ನು ದೊರಕಿಸಿಕೊಡುವ ಕೆಲಸವನ್ನು ಗಾಂಧಿ ಪ್ರೇರಣೆ ಕಾರ್ಯಕ್ರಮವನ್ನಾಗಿ ಆಚರಿಸಲಾಗುವುದು ಎಂದು ತಿಳಿಸಿದರು.

ಗಾಂಧೀಜಿ ಅವರ ಗ್ರಾಮ ಸ್ವರಾಜ್ಯವು ಎಲ್ಲರ ಸಹಭಾಗಿತ್ವ, ಸಹಕಾರದ ದುಡಿಮೆಯಿಂದ ನಿರ್ಮಾಣಗೊಳ್ಳುವುದು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜವಾಬ್ದಾರಿಯನ್ನು ಅರ್ಥ ಮಾಡಿಕೊಂಡು ಸತ್ಯ, ನಿಷ್ಠೆ, ಪ್ರಾಮಾಣಿಕತೆ, ನಿಸ್ವಾರ್ಥ ಹಾಗೂ ಸ್ವಾಭಿಮಾನದಿಂದ ಕೆಲಸ ಮಾಡಿದಾಗ ಸ್ವಾವಲಂಬಿ ಭಾರತವನ್ನು ಕಾಣಬಹುದು. ಗಾಂಧೀಜಿ ಅವರ ತತ್ವಾದರ್ಶಗಳ ಪಾಲನೆಗಾಗಿ ಪ್ರತಿಯೊಬ್ಬರೂ ಸಂಕಲ್ಪ ಮಾಡುವುದು ಅತ್ಯಗತ್ಯ ಎಂದು ವಿವರಿಸಿದರು.

‘ಗಾಂಧೀಜಿ ಅವರ ಆದರ್ಶ, ತತ್ವ, ಸಂದೇಶಗಳನ್ನು ನಮಗೆ ಗೊತ್ತಿಲ್ಲದೇ ಹಲವಾರು ಸಂದರ್ಭದಲ್ಲಿ ಆಚರಿಸುತ್ತೇವೆ. ನ್ಯಾಯಕ್ಕಾಗಿ ಹೋರಾಟ ನಡೆದಾಗ ಗಾಂಧೀಜಿಯವರ ಸತ್ಯಾಗ್ರಹ, ಅಹಿಂಸಾ ತತ್ವ ಪಾಲನೆಯಾಗುತ್ತದೆ. ಆದರೆ ಗಾಂಧೀಜಿ ಮಾತ್ರ ವರ್ಷಕ್ಕೊಮ್ಮೆ ನೆನಪಾಗುತ್ತಿರುವುದು ವಿಪರ್ಯಾಸ’ ಎಂದರು.

ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳ ಜೀವನ, ಭವ್ಯ ಭಾರತದ ಕಲ್ಪನೆ, ಕ್ರಿಯಾ ಶಕ್ತಿಗಳು ಯುವಜನರಿಗೆ ಪ್ರೇರಣೆಯಾಗಬೇಕು. ಅಹಿಂಸಾತ್ಮಕ ಹೋರಾಟದಿಂದ ಯಶಸ್ಸು ಸಾಧ್ಯ ಎಂಬುದನ್ನು ಇಬ್ಬರೂ ಮಹನೀಯರು ಸಾಬೀತುಪಡಿಸಿದ್ದಾರೆ. ಅವರ ಸರ್ವೋದಯ, ಅಹಿಂಸಾ, ಸತ್ಯ, ಸಾಮಾಜಿಕ ನ್ಯಾಯದ ತತ್ವಗಳು ಕೇವಲ ಹೇಳಿಕೆಗಷ್ಟೇ ಸೀಮಿತವಾಗದೆ ಕಾರ್ಯಪಾಲನೆಯಲ್ಲಿ ಜಾರಿಗೊಂಡಾಗ ರಾಮರಾಜ್ಯ ಪರಿಕಲ್ಪನೆಯ ಸದೃಢ ಗ್ರಾಮ ಭಾರತವನ್ನು ಕಾಣಬಹುದು ಎಂದು ಹೇಳಿದರು.

ಕಲಾ ನಿಕಾಯದ ಡೀನ್ ಪ್ರೊ.ವೆಂಕಟರಾವ್ ಪಲಾಟೆ ಅವರು ವಿಶೇಷ ಉಪನ್ಯಾಸ ನೀಡಿ, ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ ಶೈಲಿ, ಕಾರ್ಯ ವೈಖರಿಯಲ್ಲಿ ಸಾಮ್ಯತೆಯನ್ನು ಕಾಣಬಹುದು. ಇಬ್ಬರದೂ ಸರಳ ವ್ಯಕ್ತಿತ್ವ. ನೇರ ನಡೆಯ ಪ್ರಾಮಾಣಿಕ ವ್ಯಕ್ತಿಗಳು. ಅವರ ದೇಶಾಭಿಮಾನ, ಗ್ರಾಮೀಣ ಅಭಿವೃದ್ಧಿಯ ಯೋಜನೆಗಳು, ಸಾಮಾಜಿಕ ಚಿಂತನೆ, ಆರ್ಥಿಕ ಪರಿಕಲ್ಪನೆಗಳು ಸ್ವತಂತ್ರ ಭಾರತದ ಭದ್ರತೆಗೆ ಬುನಾದಿ ಹಾಕಿವೆ ಎಂದು ನುಡಿದರು.

ಹಳ್ಳಿಗಳನ್ನೇ ಹೆಚ್ಚಾಗಿ ಹೊಂದಿರುವ ಭಾರತದಲ್ಲಿ ಬೃಹತ್ ಕೈಗಾರಿಕೆಗಳಿಗಿಂತ ಗಾಂಧೀಜಿ ಅವರ ಸಲಹೆಯಂತೆ ಗುಡಿ ಕೈಗಾರಿಕೆಗಳು ಹೆಚ್ಚಬೇಕು. ದೇಶದ ಎಲ್ಲ ಜನರಿಗೂ ಕೆಲಸ ನೀಡುವ ಗುಡಿ ಕೈಗಾರಿಕೆಗಳು ನಿರುದ್ಯೋಗ, ಬಡತನ, ಅನಕ್ಷರತೆ ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ಏಕೈಕ ಪರಿಹಾರ ಮಾರ್ಗವಾಗಿದೆ ಎಂದು ಹೇಳಿದರು.

ಕುಲಸಚಿವರಾದ ಬಿ.ಬಿ. ಸರೋಜ, ಪರೀಕ್ಷಾಂಗ ಕುಲಸಚಿವ ಡಾ.ಕೆ.ಶಿವಶಂಕರ್, ಹಣಕಾಸು ಅಧಿಕಾರಿ ಪ್ರೊ.ಆರ್.ಶಶಿಧರ್ ಮಾತನಾಡಿದರು.  ಹಿಂದುಳಿದ ವರ್ಗಗಳ ಘಟಕದ ಸಂಚಾಲಕ ಡಾ.ನಾಗಭೂಷಣಗೌಡ ಸ್ವಾಗತಿ ಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಎಂ. ರೂಪಾ ಕಾರ್ಯಕ್ರಮ ನಿರೂಪಿಸಿದರು.

error: Content is protected !!