ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ನಗರದ ಎಂ.ಎಂ. ವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳು

ದಾವಣಗೆರೆ, ಅ.6- ಅಮೇರಿಕಾದ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯ ಅಕ್ಟೋಬರ್ 2023ರಲ್ಲಿ ಪ್ರಕಟಿಸಿರುವ ವಿಶ್ವದ ಮೊದಲ ಶೇ. 2ರಷ್ಟು ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ನಗರದ ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ಇಬ್ಬರು ಹಿರಿಯ ವಿದ್ಯಾರ್ಥಿಗಳು ಸತತವಾಗಿ ಮೂರನೇ ಬಾರಿಗೆ ಸ್ಥಾನ ಪಡೆದಿದ್ದಾರೆ. ಇವರಿಬ್ಬರ ಹೆಸರುಗಳು ಅಕ್ಟೋಬರ್ 2021 ಹಾಗೂ 2022ರಲ್ಲಿ ಪ್ರಕಟವಾದ ಪಟ್ಟಿಯಲ್ಲಿಯೂ ಸಹ ಸೇರ್ಪಡೆಯಾಗಿದ್ದವು.

ವಿಶ್ವದ ಸಂಶೋಧಕರು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡ ಸಂಶೋಧನಾ ಪ್ರಕಟಣೆಗಳು, ಸಂಶೋಧನಾ ಉಲ್ಲೇಖಗಳು, ಸಹ ಲೇಖನಗಳು, ಹೆಚ್ ಇಂಡೆಕ್ಸ್ ಐ-ಟೆನ್ ಸೇರಿದಂತೆ ಹಲವು ಸಂಯೋಜಿತ ವಿವಿಧ ಮಾನದಂಡಗಳನ್ನು ಆಧರಿಸಿ ಸಂಶೋಧನಾ ತಂಡವು ಜಾಗತಿಕವಾಗಿ ಎರಡು ಲಕ್ಷಕ್ಕಿಂತ ಹೆಚ್ಚು ವಿಜ್ಞಾನಿಗಳನ್ನು ಗುರುತಿಸಿ ದತ್ತಾಂಶ ಪ್ರಕಟಿಸಿದೆ. 

ಎಲ್ಸೆವಿಯರ ಸಂಸ್ಥೆಯ ಸಹಯೋಗದಲ್ಲಿ ಸ್ಟ್ಯಾನ್‍ಫೋರ್ಡ್‌ ವಿಶ್ವವಿದ್ಯಾಲಯದ ಸಂಶೋಧನಾ ತಂಡ ಶೇ. 2ರಷ್ಟು ವಿಜ್ಞಾನಿಗಳ ಮಾಹಿತಿ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಜೆ. ಮಂಜಣ್ಣ ಅನೇಕ ವರ್ಷಗಳಿಂದ ಪ್ರತಿಷ್ಟಿತ ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ ಸಂಶೋಧನಾ ಲೇಖನಗಳನ್ನು, ಪಡೆದಿರುವ ಪೇಟೆಂಟ್‍ಗಳನ್ನು, ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡಿದ ಮಾರ್ಗದರ್ಶನ ಹಾಗೂ ರಾಷ್ಟ್ರೀಯ ಮಟ್ಟದ ಸಮ್ಮೇಳನ ಮತ್ತು ಸೆಮಿನಾರ್‍ಗಳಲ್ಲಿ ವಿಷಯ ತಜ್ಞರಾಗಿ ಸಕ್ರಿಯವಾಗಿ ಭಾಗವಹಿಸಿದ್ದುದನ್ನು ಪರಿಗಣಿಸಿ, ಇವರ ಹೆಸರನ್ನು ವಿಶ್ವದ ವಿಜ್ಞಾನಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಈಗಾಗಲೇ ಇವರ ಮಾರ್ಗದರ್ಶನದಲ್ಲಿ 10 ವಿದ್ಯಾರ್ಥಿಗಳು ಪಿಹೆಚ್.ಡಿ ಪದವಿ ಪಡೆದುಕೊಂಡಿದ್ದಾರೆ. ಡಾ.ಜೆ.ಮಂಜಣ್ಣನವರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಹೆಚ್.ಜಿ.ಹಳ್ಳಿಯವರು.

ದಾವಣಗೆರೆ ವಿಶ್ವವಿದ್ಯಾಲಯದ ಗಣಿತ ವಿಭಾಗದ ಪ್ರಾಧ್ಯಾಪಕ ಬಿ.ಸಿ.ಪ್ರಸನ್ನಕುಮಾರ್ ಅವರು 15 ವರ್ಷಗಳಿಂದ ಕೈಗೊಂಡ ಬೋಧನೆ ಹಾಗೂ ಸಂಶೋಧನೆಯ ಫಲವಾಗಿ 150 ಲೇಖನಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಇವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳ ವಿಷಯ ಮಂಡನೆ ಗೋಷ್ಠಿಯ ಅಧ್ಯಕ್ಷತೆ ವಹಿಸಿರುತ್ತಾರೆ. ಅನೇಕರ ಕೋರಿಕೆಯ ಮೇರೆಗೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ  ಐದು ವಿದ್ಯಾರ್ಥಿಗಳು ಪಿಹೆಚ್.ಡಿ ಪದವಿ ಪಡೆದುಕೊಂಡಿದ್ದಾರೆ. 

ಇವರಿಬ್ಬರ ಸಾಧನೆಯನ್ನು ಮೆಚ್ಚಿ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ,  ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಶ್ರೀ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯವರು ಹಾಗೂ ಎಂ.ಎಂ. ಕಾಲೇಜಿನ ಅವರ ವಿದ್ಯಾಗುರುಗಳು, ಪ್ರಾಚಾರ್ಯರು, ಬೋಧಕ, ಬೋಧಕೇತರ ಸಿಬ್ಬಂದಿ ಯವರು ಅಭಿನಂದನೆ ಸಲ್ಲಿಸಿದ್ದಾರೆ.

error: Content is protected !!