ದಾವಣಗೆರೆ, ಅ. 6- ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಏಳು ಜನರ ವಿರುದ್ಧ ದಾಖಲಿಸಲಾಗಿದ್ದ ಎಫ್ಐಆರ್ ಗಳನ್ನು ರಾಜ್ಯ ಉಚ್ಛನ್ಯಾಯಾಲಯ ರದ್ದುಗೊಳಿಸಿದೆ.
ವನ್ಯ ಜೀವಿಗಳನ್ನು ಅಕ್ರಮವಾಗಿ ಸಾಕಿದ್ದಾರೆ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಉದ್ಯಮಿ ಎಸ್.ಎಸ್. ಗಣೇಶ್, ಕರಿಬಸಪ್ಪ, ಸಂಪನ್ನ ಮುತಾಲಿಕ್ ಸೇರಿದಂತೆ ಏಳು ಜನರ ಮೇಲೆ ದಾಖಲಿಸಲಾಗಿದ್ದ ಎಫ್ಐಆರ್ ಅನ್ನು ನ್ಯಾಯಾಧೀಶರಾದ ನಾಗಪ್ರಸನ್ನ ಅವರು ರದ್ದುಗೊಳಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ ಎಂದು ಸಚಿವರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಕಳೆದ ಡಿಸೆಂಬರ್ 18ರಂದು ಬೆಂಗಳೂರಿನಲ್ಲಿ ಜಿಂಕೆಯ ಚರ್ಮ, ಕೊಂಬು ಸಹಿತ ವಿವಿಧ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಸೆಂಥಿಲ್ ಕುಮಾರ್ ಎಂಬುವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆತ ನೀಡಿದ ಮಾಹಿತಿಯಂತೆ ಕಲ್ಲೇಶ್ವರ ಮಿಲ್ನ ಹಿಂಭಾಗದ ಫಾರ್ಮ್ ಹೌಸ್ಗೆ ಸಿಸಿಬಿ ಪೊಲೀಸರು ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ದಾಳಿ ಮಾಡಿ ಕೃಷ್ಣಮೃಗ, ಜಿಂಕೆ ಸೇರಿ ಒಟ್ಟು 30 ವನ್ಯ ಜೀವಿಗಳನ್ನು ವಶಪಡಿಸಿಕೊಂಡಿದ್ದರು. ನಂತರ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ಎಫ್ಐಆರ್ ದಾಖಲಾಗಿತ್ತು.