ಅಡಿಕೆ ಎಲೆ ಚುಕ್ಕೆ ರೋಗ : ರೈತರಿಗೆ ಆತಂಕ ಬೇಡ

ಅಡಿಕೆ ಎಲೆ ಚುಕ್ಕೆ ರೋಗ : ರೈತರಿಗೆ ಆತಂಕ ಬೇಡ

ದಾವಣಗೆರೆ, ಅ. 5- ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಅಡಿಕೆ ಎಲೆ ಚುಕ್ಕೆ ರೋಗದ ಬಗ್ಗೆ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ತಿಳಿಸಿದರು.

ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಇಲಾಖೆ, ದಾವಣಗೆರೆ ಹಾಗೂ ವಿದ್ಯಾನಗರ ಲಯನ್ಸ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ದಾವಣಗೆರೆ ತಾಲ್ಲೂಕು ಬಸವನಾಳ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಿಂಗಳ ಹುರಳಿ ಬೆಳೆಯ ಕ್ಷೇತ್ರೋತ್ಸವ ಹಾಗೂ ಅಡಿಕೆ ಬೆಳೆಯ ಸಮಗ್ರ ಮಾಹಿತಿ ಶಿಬಿರದಲ್ಲಿ ಭಾಗವಹಿಸಿ, ಮಾತನಾಡಿದ ಅವರು, ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಹಾಗೂ ವಾತಾವರಣದಲ್ಲಿ ಆದ್ರತೆ ಹೆಚ್ಚಿರುವ ಕಡೆ ಎಲೆ ಚುಕ್ಕೆಯ ಹಾನಿ ಪರಿಣಾಮಕಾರಿಯಾಗಿರುತ್ತದೆ.  

ಜಿಲ್ಲೆಯಲ್ಲಿ ಈ ವರ್ಷ ಮಳೆಯ ಪ್ರಮಾಣ ಕಡಿಮೆ ಹಾಗೂ ಶುಷ್ಕ ವಾತಾವರಣವಿದೆ.  ಇಲ್ಲಿ ಇದರ ತೀವ್ರತೆ ಕಡಿಮೆ ಹಾಗಾಗಿ ರೈತರು ಆತಂಕಕ್ಕೆ ಒಳಗಾಗದೇ ಬಾಧಿತ ತೋಟಗಳಲ್ಲಿ ಹೆಕ್ಸಾಕೊನೋಜೋಲ್ 1 ಮಿಲೀ / ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕೆಂದು ಮಾಹಿತಿ ನೀಡಿದರು.

ಪ್ರಾತ್ಯಕ್ಷಿಕೆಗೆ ನೀಡಿದ ತಿಂಗಳ ಹುರುಳಿಯ ತಳಿ ‘ಅರ್ಕಾ ಅರ್ಜುನ್’ ನಾರು ರಹಿತವಾಗಿದ್ದು ಉತ್ತಮ ಇಳುವರಿ ಬಂದಿದೆ. ಜೊತೆಗೆ ಇದನ್ನು ಭೂಮಿಗೆ ಮಗುಚುವುದರಿಂದ ಮಣ್ಣಿನ ಫಲವತ್ತತೆಯೂ ಹೆಚ್ಚುತ್ತದೆ ಎಂದು ತಿಳಿಸಿದರು.

ಮಣ್ಣು ಪರೀಕ್ಷೆಯ ಮಹತ್ವ, ಪೋಷಕಾಂಶಗಳ ನಿರ್ವಹಣೆ, ರೋಗ ಮತ್ತು ಕೀಟಗಳ ನಿಯಂತ್ರಣ, ಅಂತರ ಬೆಳೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ವಿಜ್ಞಾನಿ ಹೆಚ್.ಎಂ.  ಸಣ್ಣಗೌಡ್ರ ಮತ್ತು ಡಾ. ಟಿ.ಜಿ. ಅವಿನಾಶ್ ತಿಳಿಸಿದರು.

ವಿದ್ಯಾನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಹೆಚ್. ದೇವರಾಜ ಮಾತನಾಡಿ, ಭಾರತ ಕೃಷಿ ಪ್ರಧಾನವಾದ ದೇಶ, ಇಲ್ಲಿ ಕೃಷಿಕರು ವೈಜ್ಞಾನಿಕ ತಂತ್ರಜ್ಞಾನಗಳನ್ನು ಅಳವಡಿಸಿ ಕೃಷಿಯಲ್ಲಿ ಸುಸ್ಥಿರತೆಯನ್ನು ಕಾಣುತ್ತಿದ್ದಾರೆ ಎಂದರು. 

ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀಮತಿ ರೇಷ್ಮಾ ಪರ್ವಿನ್ ಮಾತನಾಡಿ, ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅಡಿಕೆಯಲ್ಲಿ ಅಂತರ ಬೆಳೆಯಾಗಿ ಕಾಳು ಮೆಣಸು, ಕೋಕೋ, ಜಾಯಿಕಾಯಿ ಬೆಳೆಗಳನ್ನು ಬೆಳೆಯಲು ಅನುದಾನವಿದ್ದು ರೈತರು ಇದನ್ನು ಬಳಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ  ಶಿವಕುಮಾರ್,  ದಿಳ್ಯೆಪ್ಪ ಮಾಸ್ಟರ್,  ಹೆಚ್. ಎನ್. ಕುಮಾರ್, ಬೇತೂರು ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ಬಸವರಾಜ್, ಪ್ರಗತಿಪರ ರೈತರಾದ ಪರಮೇಶ್ವರಯ್ಯ, ಐಗೂರು ಮಂಜುನಾಥ್, ಬಿ.ಸಿ. ಮರುಳಸಿದ್ದಯ್ಯ,  ಮಹೇಶ್ವರಯ್ಯ ಹಾಗೂ ರೈತರು ಉಪಸ್ಥಿತರಿದ್ದರು.

error: Content is protected !!