ಶುಶ್ರೂಷಕ ಸೇವೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ನಾಗರತ್ನಗೆ ಗೌರವ

ಶುಶ್ರೂಷಕ ಸೇವೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ನಾಗರತ್ನಗೆ ಗೌರವ

ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕಿನಿಂದ ನಾಗರತ್ನ ಅವರ ಅನನ್ಯ ಸೇವೆಗೆ ಶ್ಲ್ಯಾಘನೆ

ದಾವಣಗೆರೆ, ಅ. 5- ತಮ್ಮ ಶುಶ್ರೂಷಕ ಸೇವೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗಿರುವ ಹೊನ್ನಾಳಿಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಪ್ರಾಥಮಿಕ ಆರೋಗ್ಯ ಸುರಕ್ಷಿತ ಅಧಿಕಾರಿ (ಎಎನ್‌ಎಂ) ಶ್ರೀಮತಿ ಟಿ. ನಾಗರತ್ನ ಅವರನ್ನು ದಾವಣಗೆರೆ -ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಬ್ಯಾಂಕಿನ ಸಭಾಂಗಣದಲ್ಲಿ ಕಳೆದ ವಾರ ಏರ್ಪಾಡಾಗಿದ್ದ ಸರಳ ಸಮಾರಂಭದಲ್ಲಿ ನಾಗರತ್ನ ಅವರನ್ನು ಬ್ಯಾಂಕಿನ ಅಧ್ಯಕ್ಷ ಎನ್.ಎ. ಮುರುಗೇಶ್ ಮತ್ತು ಉಪಾಧ್ಯಕ್ಷರಾದ ಶ್ರೀಮತಿ ಜಯಮ್ಮ ಪರಶುರಾಮಪ್ಪ ಅವರುಗಳು ಶಾಲು ಹೊದಿಸಿ, ಫಲ-ಪುಷ್ಪದೊಂದಿಗೆ ಸನ್ಮಾನಿಸಿ, ಸತ್ಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಎನ್.ಎ. ಮುರುಗೇಶ್, ಪ್ರಪಂಚಾದ್ಯಂತ  ತಾಂಡವವಾಡಿದ ಕೊರೊನಾ ಸಮಯದಲ್ಲಿ ದಾಖಲೆ ಪ್ರಮಾಣದಲ್ಲಿ ಲಸಿಕೆ ಹಾಕುವುದರ ಮೂಲಕ ನೂರಾರು ಜನರನ್ನು ಆತಂಕದಿಂದ ದೂರಮಾಡುವಲ್ಲಿ ಅಪಾರವಾಗಿ ಶ್ರಮಿಸಿದ ನಾಗರತ್ನ ಅವರ ಸೇವೆಯನ್ನು ಮುಕ್ತ ಕಂಠದಿಂದ ಪ್ರಶಂಶಿಸಿದರು.

ಶುಶ್ರೂಷಕ ಕ್ಷೇತ್ರದಲ್ಲಿ ದಾದಿಯರು ಸಲ್ಲಿಸುತ್ತಿರುವ ಅನನ್ಯ ಸೇವೆಗೆ  ಭಾರತ ಸರ್ಕಾರದ  ಇಂಡಿಯನ್ ನೈಟಿಂಗೇಲ್ ಕೌನ್ಸಿಲ್ ಪ್ರತಿ ವರ್ಷ ಕೊಡ ಮಾಡುವ  ನ್ಯಾಷನಲ್ ಪ್ಲೋರೆನ್ಸ್ ನೈಟಿಂಗೇಲ್ ಪ್ರಶಸ್ತಿಗೆ ನಾಗರತ್ನ ಅವರು ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು ಕಳೆದ ವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ನಾಗರತ್ನ ಅವರಿಗೆ ಪ್ರದಾನ ಮಾಡಿ ಗೌರವಿಸಿದ್ದು,  ಈ ಮೂಲಕ ದಾವಣಗೆರೆ ಜಿಲ್ಲೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ ನಾಗರತ್ನ ಅವರನ್ನು ಮುರುಗೇಶ್ ಅಭಿನಂದಿಸಿದರು.

ಪ್ರಶಸ್ತಿಯೊಂದಿಗೆ ನೀಡಿರುವ 50 ಸಾವಿರ ರೂ. ನಗದನ್ನು ಬಡ ವಿದ್ಯಾರ್ಥಿಗಳು, ವಿಶೇಷ ಚೇತನ ಮಕ್ಕಳು, ಅನಾಥಾಶ್ರಮ, ಸಾಮಾಜಿಕ ಸೇವೆಯ ಸಂಸ್ಥೆಗೆ ಹಂಚಿಕೆ ಮಾಡಿರುವ  ನಾಗರತ್ನ ಅವರ  ಸಾಮಾಜಿಕ  ಸೇವೆ ಮತ್ತು ಕಳಕಳಿ ಸಮಾಜಕ್ಕೆ ಮಾದರಿ ಯಾಗಿದೆ ಎಂದು ಮುರುಗೇಶ್ ಅವರು ಸಂತಸ ವ್ಯಕ್ತಪಡಿಸಿದರು.

ಬ್ಯಾಂಕಿನ  ನಿರ್ದೇಶಕರುಗಳಾದ ಕಿರುವಾಡಿ ವಿ. ಸೋಮಶೇಖರ್, ಎ.ಹೆಚ್. ಕುಬೇರಪ್ಪ, ಕೆ ಶಂಕರ್‌ರಾವ್, ಎಸ್.ಕೆ. ಪ್ರಭುಪ್ರಸಾದ್, ಕೆ.ಎಂ.ಜ್ಯೋತಿ ಪ್ರಕಾಶ್, ಪಿ.ಹೆಚ್. ವೆಂಕಪ್ಪ, ಬಿ. ನಾಗೇಂದ್ರಚಾರಿ, ಎ. ಕೊಟ್ರೇಶ್, ಶ್ರೀಮತಿ ಉಮಾ ವಾಗೀಶ್, ಬಿ. ಚಿದಾನಂದಪ್ಪ, ವಿಶಾಲ್‌ಕುಮಾರ್ ಆರ್. ಸಂಘವಿ, ಶ್ರೀಮತಿ ಅನಿತಾ ಕೋಗುಂಡಿ ಪ್ರಕಾಶ್, ಶ್ರೀಮತಿ ಅನುಪ ಡಾ. ವೀರೇಂದ್ರಸ್ವಾಮಿ, ವೃತ್ತಿಪರ ನಿರ್ದೇಶಕರುಗಳಾದ ಆರ್.ವಿ. ಶ್ರೀಶೈಲಮಠ್, ಕಿರಣ್ ಶೆಟ್ಟಿ, ಪ್ರಧಾನ ವ್ಯವಸ್ಥಾಪಕ ಎನ್. ತುಳಸಿನಾಥ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!