ಡಿಸಿಇಟಿ-ಪಿಜಿಸಿಇಟಿ ಪ್ರವೇಶಾತಿ : ಕಟ್ ಆಫ್ ಬಿಡುಗಡೆಗೆ ಆಗ್ರಹ

ಡಿಸಿಇಟಿ-ಪಿಜಿಸಿಇಟಿ ಪ್ರವೇಶಾತಿ : ಕಟ್ ಆಫ್ ಬಿಡುಗಡೆಗೆ ಆಗ್ರಹ

ನಗರದಲ್ಲಿ ಎಬಿವಿಪಿ ಪ್ರತಿಭಟನೆ

ದಾವಣಗೆರೆ, ಅ. 4 – ಡಿಸಿಇಟಿ ಮತ್ತು ಪಿಜಿಸಿಇಟಿ ಪ್ರವೇಶಾತಿಯಲ್ಲಿ 2ನೇ ಸುತ್ತಿನ ಕಟ್ ಆಫ್ ಬಿಡುಗಡೆ ಮಾಡಿ ಮೂರನೇ ಸುತ್ತನ್ನು ನಡೆಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ಉನ್ನತ ಪದವಿಗಳಿಗೆ ಸೇರಬೇಕೆಂಬುದು ಲಕ್ಷಾಂತರ ವಿದ್ಯಾರ್ಥಿಗಳ ಕನಸಾಗಿದ್ದು, ಇದಕ್ಕಾಗಿ ಹಗಲು ಇರುಳು ಶ್ರಮಪಟ್ಟು ಪ್ರವೇಶ ಪರೀಕ್ಷೆಗಳನ್ನು ಬರೆದು ಉತ್ತಮ
ರಾಂಕಿಂಗ್ ಪಡೆದು ಪ್ರತಿಷ್ಠಿತ ಕಾಲೇಜುಗಳಲ್ಲಿ ದಾಖಲಾಗುವ ಕನಸು ಕಂಡಿರುತ್ತಾರೆ. ಇಂತಹ ಕನಸು ಕಂಡ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪಾರದರ್ಶಕ ಪ್ರಕ್ರಿಯೆ ಮೂಲಕ ಪ್ರೋತ್ಸಾಹವಾಗಿ ನಿಲ್ಲಬೇಕು. 

ಆದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಪರೀಕ್ಷೆಗಳನ್ನು ಕೈಗೊಂಡು ಪ್ರವೇಶಾತಿಗಳನ್ನು ನೀಡುವ ನಿಟ್ಟಿನಲ್ಲಿ ಕೆಲವು ಲೋಪದೋಷಗಳನ್ನು ಮಾಡುತ್ತಿದೆ, ಅದರಲ್ಲಿ ಪ್ರಮುಖವಾದದ್ದು ಪ್ರಕ್ರಿಯೆ ಡಿಸಿಇಟಿ ಮತ್ತು ಪಿಜಿಸಿಇಟಿ ಮೊದಲಾಗಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದರು.

ತಾಂತ್ರಿಕ ಶಿಕ್ಷಣದಲ್ಲಿ ಮುಂದುವರೆ ಯಬೇಕೆಂಬ ಅಪೇಕ್ಷೆಯನ್ನಿಟ್ಟುಕೊಂಡು ಡಿಪ್ಲೋಮಾ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ನೇರ ಎರಡನೇ ವರ್ಷದ ಇಂಜಿನಿಯರಿಂಗ್ ಪದವಿಗೆ ದಾಖಲಾಗುವ ಪ್ರವೇಶಾತಿ ಮತ್ತು ಎಂಬಿಎ, ಎಂಕಾಂನ ಉನ್ನತ ಪದವಿಗಳಿಗೆ ಸೇರುವ ಪ್ರಕ್ರಿಯೆಯಲ್ಲಿ ಪಿಜಿಸಿಇಟಿ ಲೋಪ ದೋಷಗಳು ಕಂಡುಬಂದಿವೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಳೆದ ಎರಡು ವರ್ಷಗಳಿಂದ ಡಿಸಿಇಟಿ ಮತ್ತು ಪಿಜಿಸಿಇಟಿಯ ಎರಡನೇ ಸುತ್ತಿನ ಕಟ್ ಆಫ್ ಅಂಕಪಟ್ಟಿ ಮತ್ತು ಉಳಿದಿರುವ ವರದಿ ಪ್ರಕಟಿಸದೇ ಇರುವುದು ಅನೇಕ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಪ್ರಕ್ರಿಯೆ, ಪ್ರವೇಶಾತಿ ಪ್ರಕ್ರಿಯೆ ಬಗ್ಗೆ ಸಂದೇಹ ಉಂಟು ಮಾಡುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

ಮೊದಲನೇ ಸುತ್ತಿನಲ್ಲಿ ಪ್ರವೇಶಾತಿ ಸಿಗದ ವಿದ್ಯಾರ್ಥಿಗಳು ಎರಡನೇ ಸುತ್ತಿನಲ್ಲಿ ತಮ್ಮ ಆಯ್ಕೆಗಳನ್ನು ನೀಡುತ್ತಾರೆ. ಆದರೆ ಇಲ್ಲಿಯೂ ಪ್ರವೇಶಾತಿ ಸಿಗದೆ, ಮೂರನೇ ಸುತ್ತಿನಲ್ಲಿ ತಮಗೆ ಬೇಕಾದಂತಹ ಕಾಲೇಜನ್ನು ಆಯ್ದುಕೊಳ್ಳಲು ಅನುಕೂಲವಾಗಲು ಎರಡನೇ ಸುತ್ತಿನ ಕಟ್ ಆಫ್ ಅಂಕ, ಪ್ರಮುಖವಾಗುತ್ತದೆ. ಆದರೆ ಎರಡನೇ ಸುತ್ತಿನಲ್ಲಿ ಪ್ರವೇಶಾತಿ ಪಡೆದ ಕೆಲ ವಿದ್ಯಾರ್ಥಿಗಳು ತಮಗೆ ನೀಡಿದಂತಹ ಕಾಲೇಜುಗಳಿಗೆ ಪ್ರವೇಶಾತಿಯನ್ನು ಪಡೆಯದೇ ಖಾಲಿ ಬಿಡುತ್ತಾರೆ. ಇಂತಹ ಸೀಟುಗಳನ್ನು ಕಾಲೇಜಿನ ಆಡಳಿತ ಮಂಡಳಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ತೋರಿಸಿಲ್ಲ, ಹೀಗಾಗಿ ವಿದ್ಯಾರ್ಥಿಗಳಿಗೆ ಯಾವ ಯಾವ ಕಾಲೇಜಿನಲ್ಲಿ ಎಷ್ಟೆಷ್ಟು ಸೀಟು ಖಾಲಿ ಇವೆ ಎಂಬುದು ತಿಳಿಯುತ್ತಿಲ್ಲ ಎಂದು ದೂರಿದ್ದಾರೆ.

ಕಾಲೇಜಿನ ಕಟ್ ಆಫ್ ತಿಳಿಯದೇ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಕೋರ್ಸ್ ಮತ್ತು ಕಾಲೇಜನ್ನು ಆಯ್ದುಕೊಳ್ಳುವುದು ಬಹಳ ಕಷ್ಟವಾಗಿದ್ದು, ಇದರಿಂದ ಸಾವಿರಾರು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಪ್ರತಿಷ್ಠಿತ ಕಾಲೇಜುಗಳಲ್ಲಿ ಅಥವಾ ತಮ್ಮಿಷ್ಟದ ಕಾಲೇಜುಗಳಲ್ಲಿ ಮುಂದುವರಸಲಾಗುವುದಿಲ್ಲ. ಈ ಪ್ರಕ್ರಿಯೆಯಲ್ಲಿನ ಲೋಪದೋಷವು ಪ್ರವೇಶಾತಿಯಲ್ಲಿ ಪಾರದರ್ಶಕತೆಯ ಕೊರತೆಯನ್ನು ತೋರಿಸುತ್ತದೆ. ಎಬಿವಿಪಿ, ಈ ಹಿಂದೆ ಇದರ ಕುರಿತಾಗಿ ಪ್ರಾಧಿಕಾರದ ಗಮನಕ್ಕೆ ತಂದಿರುತ್ತದೆ, ಆದರೆ ಪರೀಕ್ಷಾ ಪ್ರಾಧಿಕಾರ ಜಾಲತಾಣಗಳಲ್ಲಿ ಎರಡನೇ ಸುತ್ತಿನ ಫಲಿತಾಂಶವನ್ನು ನೀಡುತ್ತಿಲ್ಲ. 

ಆದ್ದರಿಂದ ಈ ವರ್ಷ ನಡೆದಂತಹ ಡಿಸಿಇಟಿ ಮತ್ತು ಪಿಜಿಸಿಇಟಿಯ ಪ್ರವೇಶಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕತೆಯಿಂದ ನಡೆಸುವಂತೆ ಹಾಗೂ ಎರಡು ಸುತ್ತಿನ ಕಟ್ ಆಫ್ ಫಲಿತಾಂಶವನ್ನು ಬಿಡುಗಡೆ ಮಾಡಿ ಮೂರನೇ ಸುತ್ತನ್ನು ನಡೆಸಿ, ಪ್ರಾಧಿಕಾರದ ವೆಬ್ ಸೈಟ್‌ ನಲ್ಲಿ ಪ್ರಕಟಿಸುವಂತೆ ಒತ್ತಾಯಿಸಿದರು.

ದಾವಣಗೆರೆ ವಿಭಾಗದ ಸಂಘಟನಾ ಕಾರ್ಯದರ್ಶಿ ಮಂಜುನಾಥ ಕೊಳ್ಳೇರ, ನಗರ ಸಂಘಟನಾ ಕಾರ್ಯದರ್ಶಿ ವರುಣ್, ನಗರ ಸಹ ಕಾರ್ಯದರ್ಶಿ ಮೋಹಿತ್, ತನುಷ, ತನೋಜ್, ಪ್ರಜ್ವಲ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

error: Content is protected !!