ಭಾರತ ಬರಗಾಲಕ್ಕೆ ತುತ್ತಾಗಿದ್ದಾಗ ವಾರಕ್ಕೊಮ್ಮೆ ಊಟ ತ್ಯಜಿಸಲು ಕರೆ ನೀಡಿದ್ದ ಶಾಸ್ತ್ರೀಜಿ

ಭಾರತ ಬರಗಾಲಕ್ಕೆ ತುತ್ತಾಗಿದ್ದಾಗ ವಾರಕ್ಕೊಮ್ಮೆ ಊಟ ತ್ಯಜಿಸಲು ಕರೆ ನೀಡಿದ್ದ ಶಾಸ್ತ್ರೀಜಿ

ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಪ್ರೊ. ಚನ್ನಪ್ಪ ಪಲ್ಲಾಗಟ್ಟೆ ಸ್ಮರಣೆ

ದಾವಣಗೆರೆ, ಅ. 3- ಭಾರತ ಸೇವಾದಳದ ವತಿಯಿಂದ  ಮಹಾತ್ಮ ಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿಯನ್ನು ಮತ್ತು ಸರ್ವಧರ್ಮ ಪ್ರಾರ್ಥನೆ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ನಗರದ ಭಾರತ ಸೇವಾದಳ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

 ದಾವಣಗೆರೆ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ ಅವರು ಬಾಪೂಜಿ ಮತ್ತು ಶಾಸ್ತ್ರೀಜಿಯವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಬದುಕಿನ ಮೌಲ್ಯಾಧಾರಿತ ಜೀವನದ ಬಗ್ಗೆ ತಿಳಿಸಿದರು. 

ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಪ್ರೊ.ಚನ್ನಪ್ಪ ಎಚ್. ಪಲ್ಲಾಗಟ್ಟೆ  ಮಾತನಾಡಿ, ಸ್ವಾತಂತ್ರ ಹೋರಾಟದಲ್ಲಿ ಸಾವಿರಾರು ಜನ ಹುತಾತ್ಮರಾದರು. ಸತ್ಯ-ಅಹಿಂಸೆಯಿಂದ ಹೋರಾಟ ನಡೆಸಿದ ಮಹಾತ್ಮ ಗಾಂಧೀಜಿ ವಿಶ್ವಕ್ಕೆ ಮಹಾತ್ಮರಾದರು.  ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ನೆಹರು ನಂತರ ಭಾರತದ ಎರಡನೆಯ ಪ್ರಧಾನಮಂತ್ರಿಯಾಗಿ ದಿಟ್ಟ ನಾಯಕತ್ವ ನೀಡಿದರು. ಅವರ ಕೇವಲ ಹದಿನೆಂಟು ತಿಂಗಳ ಆಡಳಿತದ ಸಮಯದಲ್ಲಿ ಇಡೀ ಭಾರತ ದೇಶ ತೀವ್ರವಾದ ಬರಗಾಲಕ್ಕೆ ತುತ್ತಾಗಿದ್ದ ಸಂದರ್ಭದಲ್ಲಿ ವಾರಕ್ಕೊಮ್ಮೆ ಊಟವನ್ನು ತ್ಯಜಿಸಲು ಕರೆ ನೀಡಿದರು. ಆಗ ಹೈಸ್ಕೂಲ್ ವಿದ್ಯಾರ್ಥಿ ಆಗಿದ್ದ ತಾವೂ ಕೂಡ ಆ ಕರೆಗೆ ಸ್ಪಂದಿಸಿ ಇಲ್ಲಿಯವರೆಗೂ ಪ್ರತಿ ಶನಿವಾರ ರಾತ್ರಿ ಊಟವನ್ನು ತ್ಯಜಿಸಿರುವುದಾಗಿ ತಿಳಿಸಿದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಆಲೂರು ವಿಜಯಕುಮಾರ್,  ತಾಲ್ಲೂಕು ಸೇವಾದಳ ಅಧ್ಯಕ್ಷ ಹಾಸಬಾವಿ ಕರಿಬಸಪ್ಪ,  ತಾಲ್ಲೂಕು ಸಮಿತಿ ಉಪಾಧ್ಯಕ್ಷ ಕೆ.ಆರ್ ಸಿದ್ದೇಶಪ್ಪ,  ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದಲಿಂಗಪ್ಪ,  ಬಿ.ಪಿ. ಪ್ರಸಾದ್,  ದೈಹಿಕ ಶಿಕ್ಷಣಾಧಿಕಾರಿ ಲೋಕೇಶಪ್ಪ, ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ವಲಯ ಸಂಘಟಕ ಎಂ. ಅಣ್ಣಪ್ಪ ಸ್ವಾಗತಿಸಿದರು. ಎ.ಆರ್. ಗೋಪಾಲಪ್ಪ ನಿರೂಪಿಸಿದರು. ಭಾನುಮತಿ ವಂದಿಸಿದರು.

error: Content is protected !!