ವೈದ್ಯಕೀಯ ಪಿಜಿ ಪ್ರವೇಶ ಪರೀಕ್ಷೆ ನ್ಯಾಯಸಮ್ಮತವಾಗಿರಬೇಕು

ಎಐಡಿಎಸ್ಓನ ರಾಜ್ಯ ಕಾರ್ಯದರ್ಶಿ ಅಜಯ ಕಾಮತ್ ಒತ್ತಾಯ

 ದಾವಣಗೆರೆ,ಅ.2-  ಪಿಜಿ ಪ್ರವೇಶ ಪರೀಕ್ಷೆಯ 2ನೇ ಸುತ್ತಿನಿಂದ 3ನೇ ಸುತ್ತಿಗೆ ಮುಂದುವರೆಯಲು  2023ರ ನೀಟ್ ಆಕಾಂಕ್ಷಿಗಳಿಗೆ   ನ್ಯಾಯಬದ್ಧ ಶಿಕ್ಷಣವನ್ನು ಒದಗಿಸಲು ಕರ್ನಾಟಕ ಪರೀಕ್ಷಾ ಅಧಿಕಾರವು ವಿದ್ಯಾರ್ಥಿಗಳಿಗೆ ಸಮರ್ಪಕವಾದ ಅವಕಾಶಗಳನ್ನು ಕಲ್ಪಿಸಬೇಕು ಎಂದು ಎಐಡಿಎಸ್ಓನ ರಾಜ್ಯ ಕಾರ್ಯದರ್ಶಿ  ಅಜಯ ಕಾಮತ್ ಒತ್ತಾಯಿಸಿದ್ದಾರೆ.

 ಮೆಡಿಕಲ್ ಸೆಂಟ್ರಲ್ ಕೌನ್ಸಿಲ್ ನ 4ನೇ ಮತ್ತು ಕರ್ನಾಟಕ ಪಿಜಿ ಪ್ರವೇಶ ಪರೀಕ್ಷೆಯ 2ನೇ ಸುತ್ತಿನ ಕೌನ್ಸಿಲಿಂಗ್ ಎರಡೂ ಕೂಡ ಒಂದೇ ಸಮಯದಲ್ಲಿ ನಡೆಯುತ್ತಿವೆ. ಮೂರನೇ ಸುತ್ತಿಗೆ ಅವಕಾಶ ನೀಡದಿದ್ದಲ್ಲಿ ಉತ್ತಮ ಮೆರಿಟ್ ಹೊಂದಿರುವ ವಿದ್ಯಾರ್ಥಿಗಳು ಕೂಡ ಎರಡನೇ ಸುತ್ತಿನ ಸೀಟುಗಳನ್ನೇ ಪಡೆಯುವ ಅನಿವಾರ್ಯತೆಗೆ ಒಳಪಡುತ್ತಾರೆ. ಮೂರನೇ ಸುತ್ತಿಗೆ ಮುಂಬಡ್ತಿ ದೊರೆತಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತಮ ಕಾಲೇಜನ್ನು ಪ್ರವೇಶಿಸುವ ಅವಕಾಶವನ್ನು ಪಡೆಯುತ್ತಾರೆ ಮತ್ತು ನೀಟ್ 2023ರಲ್ಲಿ ಅವರು ಪಡೆದಿರುವ ಅಂಕಗಳಿಗೆ ಇದು ನ್ಯಾಯಸಮ್ಮತವಾಗಿರುತ್ತದೆ. 

ಅಥವಾ ಮೆಡಿಕಲ್ ಸೆಂಟ್ರಲ್ ಕೌನ್ಸಿಲಿಂಗ್ ನ ಮೂರನೇ ಸುತ್ತಿನ ಕೊನೆಯ ದಿನಾಂಕದವರೆಗೂ ಪಿಜಿ ಪ್ರವೇಶ ಪರೀಕ್ಷೆಯ ಎರಡನೇ ಸುತ್ತನ್ನು ತಡೆ ಹಿಡಿದಲ್ಲಿ ಮೆಡಿಕಲ್ ಸೆಂಟ್ರಲ್ ಕೌನ್ಸಿಲಿಂಗ್ ನಲ್ಲಿ ಸೀಟುಗಳನ್ನು ಪಡೆದಿರುವ ವಿದ್ಯಾರ್ಥಿಗಳು ಕರ್ನಾಟಕ ಪಿಜಿ ಪ್ರವೇಶ ಪರೀಕ್ಷೆಯ ಎರಡನೇ ಸುತ್ತಿನಿಂದ ಹೊರ ಹೋಗುತ್ತಾರೆ. ಇದರಿಂದಾಗಿ ಬಾಕಿ ಉಳಿದ ಸೀಟುಗಳು ಕರ್ನಾಟಕದ ಆಕಾಂಕ್ಷಿಗಳಿಗೆ ಲಭ್ಯವಾಗುತ್ತವೆ. ಅಭ್ಯರ್ಥಿಗಳ ಮೆರಿಟ್ ಹಾಗೂ ಪರಿಶ್ರಮಕ್ಕೆ ಇದು ನ್ಯಾಯ ಒದಗಿಸುತ್ತದೆ. 

ಕರ್ನಾಟಕದ ಒಂದು ಸಾವಿರ ವಿದ್ಯಾರ್ಥಿಗಳು ಇದರಿಂದ ಪ್ರಯೋಜನ ಹೊಂದುತ್ತಾರೆ. ನಿಜವಾದ ಸಾಮರ್ಥ್ಯ ಮತ್ತು ಅರ್ಹತೆಯೊಂದಿಗೆ ಪ್ರವೇಶ ಪಡೆಯುವ ಸಮಾನ ಹಕ್ಕನ್ನು ಎಲ್ಲಾ ಆಕಾಂಕ್ಷಿಗಳು ಹೊಂದುವಂತೆ ಮಾಡುವುದು ಅತ್ಯವಶ್ಯಕವಾಗಿದೆ. ಅಸಂಖ್ಯಾತ ಅಭ್ಯರ್ಥಿಗಳ ಕನಸು ಮತ್ತು ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಈ ಪ್ರಸ್ತಾವನೆಯನ್ನು  ಅತ್ಯಂತ ಸೂಕ್ತವೆಂದು ಪರಿಗಣಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುವುದಾಗಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ ತಿಳಿಸಿದ್ದಾರೆ.

error: Content is protected !!