ದಾವಣಗೆರೆ, ಅ. 3- ಮಾನವ ಬಂಧುತ್ವ ವೇದಿಕೆ ಹಾಗೂ ಸತೀಶ್ ಜಾರಕಿಹೊಳಿ ಫೌಂಡೇಶನ್ ಸಹಯೋಗದೊಂದಿಗೆ ನಾಳೆ ದಿನಾಂಕ 4ರ ಬುಧವಾರ ಬಿ.ಐ.ಇ.ಟಿ. ಕಾಲೇಜಿನ ಆವರಣದಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್ ಸಭಾಂಗಣದಲ್ಲಿ ‘ಬುದ್ಧನ ಬೆಳಕು’ ನಾಟಕ ಪ್ರದರ್ಶನ ಹಾಗೂ ಕಲೆಗಳ ಕಲರವ ಶಿಬಿರದ ಸಮಾರೋಪ ನೆರವೇರಲಿದೆ.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ.ಎ.ಬಿ ರಾಮಚಂದ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಸತೀಶ್ ಜಾರಕಿಹೊಳಿ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಕಲೆಗಳ ಕಲರವ ಎಂಬ ಶಿಬಿರ ಕಳೆದ 15 ದಿನಗಳಿಂದ ಹನಗವಾಡಿಯ ಮೈತ್ರಿವನದಲ್ಲಿ ನಡೆಯುತ್ತಿದೆ. ಡಿಂಗ್ರಿ ನರೇಶ್ ಅವರು ತರಬೇತಿ ನೀಡಿದ್ದಾರೆ. ದಾವಣಗೆರೆಯಲ್ಲಿ §ಬುದ್ದನ ಬೆಳಕು¬ ನಾಟಕದ ಮೊದಲ ಪ್ರದರ್ಶನ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಭಾಗದಲ್ಲಿ ಪ್ರದರ್ಶನ ನಡೆಸಲಾಗುವುದು ಎಂದು ತಿಳಿಸಿದರು.
ಬುಧವಾರ ಸಂಜೆ 6.30 ಕ್ಕೆ ನಡೆಯುವ ಕಾರ್ಯಕ್ರಮಕ್ಕೆ ಸಾಣೇಹಳ್ಳಿಯ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿ ಸಾನ್ನಿಧ್ಯ ವಹಿಸುವರು. ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ಡಾ.ಎಂ.ಜಿ. ಈಶ್ವರಪ್ಪ, ಬಿ.ಎನ್. ಮಲ್ಲೇಶ್, ರವಿನಾಯ್ಕ, ನಾಟಕ ರಚನೆಕಾರ ವಿಕಾಸ್ ಆರ್. ಮೌರ್ಯ ಇತರರು ಭಾಗವಹಿಸುವರು ಎಂದು ಹೇಳಿದರು.
ನಿರ್ದೇಶಕ ಡಿಂಗ್ರಿ ನರೇಶ್ ಮಾತನಾಡಿ, §ಬುದ್ಧನ ಬೆಳಕು¬ ಈಗಿನ ಭಾರತದಲ್ಲಿನ ಸಂಕಷ್ಟ, ತಲ್ಲಣಗಳಿಗೆ ಸೂಕ್ತ ಪರಿಹಾರ ಒದಗಿಸಬಲ್ಲ ಔಷಧಿ ಆಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಲೋಕಿಕೆರೆ ಆಂಜಿನಪ್ಪ, ರಾಘು ದೊಡ್ಡಮನಿ, ಮಾಡಾಳು ಶಿವಕುಮಾರ್, ಕರಿಯಪ್ಪ ಮಾಳಿಗೇರ್ ಇದ್ದರು.