ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ
ದಾವಣಗೆರೆ, ಅ. 2- ರಾಜ ಕೀಯ ಕ್ಷೇತ್ರ ಕಲುಷಿತಗೊಂಡಿದೆ ಎಂದು ಹೇಳಲು ಅತೀವ ನೋವಾ ಗುತ್ತದೆ. ಮತದಾರರು ಬದಲಾಗದ ಹೊರತು, ನೇತಾರ ಬದಲಾಗಲಾರ. ಬದಲಿಗೆ ಮತದಾರರೇ ಜಾಗೃತಗೊಳ್ಳ ಬೇಕು. ಸಮಾಜದ ಬಗ್ಗೆ ನಿಜವಾದ ತುಡಿತ ಇರುವವರು ಮಾತ್ರ ರಾ ಜಕೀಯಕ್ಕೆ ಬರಬೇಕು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
ನಗರದ ಅಭಿನವ ರೇಣುಕಾ ಮಂದಿರದಲ್ಲಿ ವಿನಯ್ಕುಮಾರ್ ಜಿ.ಬಿ. ಅಭಿಮಾನಿ ಬಳಗದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿ, ಹಿರಿಯ ನಾಗರೀಕರ ದಿನಾಚರಣೆ ಹಾಗೂ ವಿಕಲಚೇತನರಿಗೆ ವ್ಹೀಲ್ ಚೇರ್, ವಾಕರ್, ಶ್ರವಣ ಸಾಧನ ಸೇರಿದಂತೆ ವಿವಿಧ ಸಾಧನ ಸಲಕರಣೆಗಳ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಇನ್ಸೈಟ್ಸ್ ಐಎಎಸ್ ಎಂಬ ಸಂಸ್ಥೆ ಕಟ್ಟಿ ಬೆಳೆಸುತ್ತಿರುವ ವಿನಯ್ಕುಮಾರ್ ರಾಜಕೀಯ ಕ್ಷೇತ್ರಕ್ಕೆ ಬರಬೇಕೆಂಬ ಆಕಾಂಕ್ಷೆ ಹೊಂದಿದ್ದಾರೆ. ಆದರೆ ರಾಜಕೀಯ ಕ್ಷೇತ್ರ ಅಷ್ಟೊಂದು ಸುಲಭವಲ್ಲ. ಮೊದಲ ಪ್ರಯತ್ನದಲ್ಲಿ ಫಲ ಸಿಗದಿದ್ದರೆ ಸಭ್ಯರು ದೂರ ಉಳಿಯುತ್ತಾರೆ. ಆಗ ದುಷ್ಟರೇ ವಿಜೃಂಭಿಸುತ್ತಾರೆ. ಪ್ರಯತ್ನ ಫಲಿಸದಿದ್ದರೂ ಸಂಸ್ಕಾರದ ಜೊತೆಗೆ ಆದರ್ಶಗಳನ್ನು ಮೈಗೂಡಿಸಿಕೊಂಡು ಕಾಯಕ ಮಾಡಬೇಕೆಂದು ಶ್ರೀಗಳು ಹಿತ ನುಡಿದರು.
ಇತ್ತೀಚಿನ ದಿನಗಳಲ್ಲಿ ಸರಳತೆ ಎಂಬುದು ಮರೀಚಿಕೆಯಾಗಿ ಆಡಂಬರ ವಿಜೃಂಭಿಸುತ್ತಿದೆ. ಗಾಂಧೀಜಿ, ಶಾಸ್ತ್ರೀಜಿ ಸರಳತೆಯ ಸಾಕಾರ ಮೂರ್ತಿಗಳಾಗಿದ್ದಾರೆ. ಗಾಂಧೀಜಿ ದೇಶದಲ್ಲಿ ಅನ್ನ ಮತ್ತು ಬಟ್ಟೆ ಕೊರತೆ ಕಂಡು ತುಂಡು ಬಟ್ಟೆ ಉಡಲಾರಂಭಿಸಿದರು. ಅಲ್ಲದೇ ಆರೋಗ್ಯದ ದೃಷ್ಟಿಯಿಂದ ಮೇಕೆ ಹಾಲು ಮತ್ತು ಒಂದು ಮುಷ್ಠಿ ಕಡಲೇಕಾಳನ್ನು ಆಹಾರವಾಗಿ ಸೇವಿಸುತ್ತಿದ್ದರು. ಈ ಸರಳತೆಯೇ ಅವರ ಬದುಕಿಗೆ ಮತ್ತಷ್ಟು ಮೆರಗು ನೀಡಿತು ಎಂದು ಹೇಳಿದರು.
ಸಿರಿವಂತರಿಗೆ ಸಂಪತ್ತು ನೀಡುವುದು ಪುಣ್ಯದ ಕಾರ್ಯವಲ್ಲ. ಸಮಾಜದಲ್ಲಿನ ಬಡವರಿಗೆ ಇರುವ ಕೊರತೆ ಗಮನಿಸಿ, ಅದನ್ನು ನೀಗಿಸುವುದೇ ಪುಣ್ಯದ ಕೆಲಸ. ಅವಶ್ಯಕತೆ ಪೂರೈಸುವವನು ಮಾತ್ರ ನಿಜವಾದ ಮುಖಂಡನಾಗಲು ಸಾಧ್ಯ. ಈ ನಿಟ್ಟಿನಲ್ಲಿ ಇನ್ಸೈಟ್ಸ್ ಐಎಎಸ್ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯ್ ಕುಮಾರ್ ವಿಕಲಚೇತನರ ಅವಶ್ಯಕತೆ ಪೂರೈಸುವ ಕೆಲಸ ಮಾಡುತ್ತಿರುವುದು ಶ್ಲ್ಯಾಘನೀಯ ಎಂದರು.
ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಸರ್ವ ಸಮುದಾಯಗಳಿಗೂ ರಾಜಕೀಯ ಪ್ರಾತಿನಿಧ್ಯತೆ ಸಿಗಬೇಕು. ಆಗ ಮಾತ್ರ ಹಿಂದುಳಿದ, ದಲಿತ, ಶೋಷಿತ ಸಮುದಾಯಗಳು ಸಮಾಜದ ಮುನ್ನೆಲೆಗೆ ಬರಲು ಸಾಧ್ಯ ಎಂದು ಹೇಳಿದರು.
ಇಂದಿನ ರಾಜಕೀಯ ಕ್ಷೇತ್ರ ಕೇವಲ ದುಡ್ಡು ಮಾಡುವ ಕ್ಷೇತ್ರವಾಗಿ ಬಿಟ್ಟಿದೆ. ರಾಜಕಾರಣಕ್ಕೆ ಬಡವರು, ಶೋಷಿತರು, ನಿರ್ಗತಿಕರು, ಸಮಾಜ ಸೇವೆ ಮಾಡುವ ಪ್ರಾಮಾಣಿಕತೆ ಇರುವವರು ಬರಬೇಕಾಗಿದೆ. ಪ್ರಮುಖವಾಗಿ ಯುವಕರು ರಾಜಕೀಯಕ್ಕೆ ಬರಬೇಕಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ ಜಿ.ಬಿ. ವಿನಯ್ ಕುಮಾರ್ ಅವರು, ಐಶ್ವರ್ಯ ಬಂದಾಗ ಹಣ, ಅಂತಸ್ತನ್ನು ಗುಡ್ಡೆ ಹಾಕಿ ಕೂರುವುದಲ್ಲ. ಆತ್ಮ ಸಂತೋಷಕ್ಕಾಗಿ ಸಮಾಜ ಸೇವೆಗೂ ಬದ್ಧರಾಗಬೇಕು. ಈ ಹಿನ್ನೆಲೆಯಲ್ಲಿ ಇಂದಿನ ಸೇವಾ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ರೈತರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ಯುವಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುವುದು. ತುಳಿತಕ್ಕೆ ಒಳಗಾದವರನ್ನು ಮೇಲೆತ್ತಬೇಕೇ ಹೊರತು, ಅವರಿಗೆ ಅನ್ಯಾಯ ಎಸಗುವುದಲ್ಲ ಎಂದು ಹೇಳಿದರು.
ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸ್ವಯಂ ಸಾಧಕನಾಗಿ, ಬಡತನದಲ್ಲಿದ್ದು, ದುರ್ಗಮದ ಹಾದಿಯನ್ನು ಸುಗಮ ಮಾಡಿಕೊಂಡು, ವಿದ್ಯಾರ್ಜನೆಗೈದು ವಿದ್ಯಾವಂತನಾಗಿ ನಾನು ಯಾರ ಹಿಂಬಾಲಕನಲ್ಲ. ಸಾವಿರಾರು ಜನರ ಮಧ್ಯೆ ನಾಯಕನಾಗಬೇಕೆಂಬ ಕನಸು ಕಟ್ಟಿಕೊಂಡ ಯುವ ನಾಯಕ ವಿನಯ್ ಕುಮಾರ್ ಅವರ ಸಮಾಜ ಸೇವಾ ಕಾರ್ಯ ಶ್ಲ್ಯಾಘನೀಯ ಎಂದರು.
ಇವತ್ತು ಯುವಕರು ನಾಯಕರಾಗಬೇಕಿದೆ. ವ್ಯಕ್ತಿತ್ವಕ್ಕೆ ಬೆಲೆ ಕೊಟ್ಟಾಗ ರಾಜಕೀಯ ಸುಧಾರಿಸುತ್ತದೆ ಎಂದು ಹಿತನುಡಿದರು.
ಹಾವೇರಿ ಜಿಲ್ಲೆ ನರಸೀಪುರದ ಶ್ರೀ ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ, ಚಿತ್ರದುರ್ಗ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಆಶೀರ್ವಚನ ನೀಡಿದರು.
ಫಾದರ್ ರಾಜಶೇಖರ್, ಪತ್ರಕರ್ತ ಮಧುಕರ್, ನಿಂಚನ ಶಾಲೆಯ ಸಂಸ್ಥಾಪಕ ನಿಂಗಪ್ಪ, ಇನ್ಸೈಟ್ಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ 60 ಕ್ಕೂ ಹೆಚ್ಚು ಜನರಿಗೆ ವ್ಹೀಲ್ ಚೇರ್, 100 ಕ್ಕೂ ಅಧಿಕ ಫಲಾನುವಭವಿಗಳಿಗೆ ಶ್ರವಣ ಸಾಧನ, 80 ಕ್ಕೂ ಅಧಿಕ ಜನರಿಗೆ ವಾಕರ್ ಗಳನ್ನು ವಿತರಣೆ ಮಾಡಲಾಯಿತು.
ಸೌಮ್ಯ ಮತ್ತು ಸಂಗಡಿಗರು ವಚನ ಗಾಯನ ಮಾಡಿದರು. ಕಲಾವಿದ ಪರಮೇಶ್ವರ್ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಇಪ್ಟಾ ಜಿಲ್ಲಾಧ್ಯಕ್ಷ ಐರಣಿ ಚಂದ್ರು, ಬಾನಪ್ಪ, ರುದ್ರೇಶ್, ಶಾಂಭವಿ ಜಾಗೃತಿ ಗೀತೆಗಳನ್ನಾಡಿದರು. ನಳಿನಿ, ಆರ್.ಜೆ. ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು. ಪೆದ್ದಪ್ಪ ಸ್ವಾಗತಿಸಿದರು. ಪುರಂದರ್ ಲೋಕಿಕೆರೆ ವಿಕಲಚೇತನರ ಸಾಧನ ಸಲಕರಣೆ ವಿತರಣೆಯನ್ನು ನಿರ್ವಹಿಸಿದರು.