ಪಂಚಮುಖಿ ಉದ್ಯಾನವನದಲ್ಲಿನ ಕಾರ್ಯಕ್ರಮದಲ್ಲಿ ಕೆ.ಜಿ. ಯಲ್ಲಪ್ಪ
ದಾವಣಗೆರೆ, ಅ. 2 – ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಆದರ್ಶಗಳು ನಮಗೆ ತುಂಬಾ ಮುಖ್ಯ. ಇವನ್ನು ನಾವೆಲ್ಲರೂ ಆಚರಣೆಗೆ ತಂದುಕೊಳ್ಳಬೇಕು ಎನ್ನುತ್ತಾ ಶಾಸ್ತ್ರೀಯವರು ರೈಲ್ವೇ ಮಂತ್ರಿಯಾಗಿದ್ದ ಅವಧಿಯಲ್ಲಿ ರೈಲು ಅಪಘಾತಕ್ಕೊಳಗಾದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದ್ದರು. ಇಂದು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ದೇಶದ ಎರಡನೇ ಪ್ರಧಾನಿಯಾದ ಸಮಯದಲ್ಲಿ ಕ್ಷೀರ ಕ್ರಾಂತಿ, ಹಸಿರು ಕ್ರಾಂತಿಗೆ ಮುನ್ನುಡಿ ಬರೆದರು ಎಂದು ಕೆ.ಜಿ. ಯಲ್ಲಪ್ಪ ವಿವರಿಸಿದರು.
ನಗರದ ಪಂಚಮುಖಿ ಉದ್ಯಾನವನ ಸಮಿತಿ ವತಿಯಿಂದ ಇಂದು ಏರ್ಪಡಿಸಿದ್ದ ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಾನ್ ನಾಯಕರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಗೌರವಾಧ್ಯಕ್ಷ ಎಂ. ಸೋಮಶೇಖರಪ್ಪ ಮಾತನಾಡಿ, ಗಾಂಧೀಜಿಯವರು ಬ್ರಿಟೀಷರ ವಿರುದ್ಧ ನಡೆಸಿದ ಅಸಹಕಾರ ಚಳುವಳಿ, ಉಪ್ಪಿನ ಸತ್ಯಾಗ್ರಹ ಮತ್ತು ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಈ ಹೋರಾಟಗಳನ್ನು ಅಹಿಂಸಾ ಭಾವದಿಂದ ಮಾಡಿದರು.
ಗಾಂಧೀಜಿಯವರು ಮುಷ್ಕರಗಳಿಗೆ ಕರೆಕೊಟ್ಟರೆ ಲಕ್ಷಾಂತರ ಭಾರತೀಯರು ಅವರ ಹಿಂದೆ ನಿಲ್ಲುತ್ತಿದ್ದರು. ಅಷ್ಟರಮಟ್ಟಿನ ನಿಸ್ವಾರ್ಥ ನಾಯಕರಾಗಿದ್ದರು. 200 ವರ್ಷ ಆಳಿದ ಬ್ರಿಟೀಷರು 1947 ಆಗಸ್ಟ್ 15 ರಂದು ಸ್ವಾತಂತ್ರ್ಯ ಕೊಟ್ಟು ಹೋಗುವಾಗ ಸ್ನೇಹಿತರಂತೆ ಹೋದರು, ಗಾಂಧೀಜಿಯವರನ್ನು ಕೇವಲ ಭಾರತೀಯರಷ್ಟೇ ಅಲ್ಲ, ಬ್ರಿಟೀಷ್ ವೈಸ್‍ರಾಯ್ ಲಾರ್ಡ್ ಮೌಂಟ್ ಬ್ಯಾಟನ್, ಮಾರ್ಟಿನ್ ಲೂಥರ್ ಕಿಂಗ್‍ರಂತಹವರು ಅವರನ್ನು ದೇವರಂತೆ ಕಾಣುತ್ತಿದ್ದರು. ಅವರು 1948ರಲ್ಲಿ ಹತರಾದಾಗ ವಿಶ್ವಸಂಸ್ಥೆ ಕೂಡ ಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ತೋರಿದರು. ಇದು ಗಾಂಧೀಜಿಯವರ ವಿಶ್ವಮಾನ್ಯತೆಗೆ ಹಿಡಿದ ಕೈಗನ್ನಡಿ ಎಂದರು.
ಉಪಾಧ್ಯಕ್ಷ ಬಸವರಾಜಪ್ಪ ಮಾತನಾಡಿ, ಶಾಸ್ತ್ರೀಜಿಯವರು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ರಾಷ್ಟ್ರವನ್ನು ಮುನ್ನಡೆಸಿದ ರೀತಿಯನ್ನು ಅವರ ಜೈ ಜವಾನ್, ಜೈಕಿಸಾನ್ ಘೋಷಣೆಗಳನ್ನು ಅದರ ಪ್ರಸ್ತುತತೆಯನ್ನು ತಿಳಿಸಿದರು.
ಭರತ್‍ಕುಮಾರ್ ಸಿಹಿ ವಿತರಿಸಿದರು. ಸದಸ್ಯರುಗಳಾದ ದೇವೇಂದ್ರಪ್ಪ, ನಾರಾಯಣ, ಚಂದ್ರಣ್ಣ, ದೇವರಾಜ್, ರವಿಕುಮಾರ್ ಹಾಗು ಬಡಾವಣೆ ಮಹಿಳೆಯರು, ಶ್ರೀಮತಿ ಮಂಜುಳಾ ಶೇಖರಪ್ಪ, ಕುಂದರಗಿ, ಕುಬೇರಪ್ಪಗೌಡ್ರು, ಭುವನ್, ಗಗನ್ ಉಪಸ್ಥಿತರಿದ್ದರು.