ದಾವಣಗೆರೆ – ಹರಿಹರ ಅರ್ಬನ್ ಬ್ಯಾಂಕ್ ಕಾರ್ಯಕ್ರಮದಲ್ಲಿ ಇಸ್ರೋ ವಿಜ್ಞಾನಿ ಡಾ. ದಾರುಕೇಶ್ವರ
ದಾವಣಗೆರೆ,ಸೆ.29- ಭಾರತದ ವಿಜ್ಞಾನಿಗಳು ಏನನ್ನೂ ಸಾಧಿಸಬಲ್ಲರು ಎಂಬುದು ಚಂದ್ರಯಾನದ ಯಶಸ್ಸಿನಿಂದಾಗಿ ವಿಶ್ವಕ್ಕೆ ಅರಿವಾಗಿದೆ ಎಂದು ಇಸ್ರೋದ ವಿಜ್ಞಾನಿ ಡಾ. ದಾರುಕೇಶ್ವರ ಅವರು ಹೇಳಿದರು.
ನಗರದ ತ್ರಿಶೂಲ್ ಕಲಾ ಭವನದಲ್ಲಿ ನಿನ್ನೆ ಏರ್ಪಾಡಾಗಿದ್ದ ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕಿನ 51ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು, ಬ್ಯಾಂಕ್ ವತಿಯಿಂದ ನೀಡಿದ ಗೌರವಕ್ಕೆ ಕೃತಜ್ಞತೆ ಸಲ್ಲಿಸಿ ಅವರು ಮಾತನಾಡಿದರು.
ಜಗತ್ತಿನ ಒಟ್ಟು ಜಿಡಿಪಿ ಯ ಶೇ. 78 ರಷ್ಟು ವಿಜ್ಞಾನ – ತಂತ್ರಜ್ಞಾನದ ಕ್ಷೇತ್ರದಿಂದಲೇ ಬರುತ್ತಿದೆ. ಇಂದಿಗಿಂತ ನಾಳೆ ಚೆನ್ನಾಗಿರಬೇ ಕೆಂದರೆ ನಮ್ಮ ಸಾಧನೆಯ ಮಟ್ಟ ಏರಿಸಿ ಕೊಳ್ಳಲೇಬೇಕು. ಚಂದ್ರಯಾನ ಮೂರರ ಪ್ರಕ್ರಿಯೆಯನ್ನು ವಿಶ್ವದ 80 ಲಕ್ಷ ಜನ ನೇರವಾಗಿ ವೀಕ್ಷಿಸಿದ್ದಾರೆ. ಇದು ಬ್ರೆಜಿಲ್‌ನ ವಿಶ್ವ ಫುಟ್ಬಾಲ್ ಪಂದ್ಯದ ವೀಕ್ಷಕರ ದಾಖಲೆ ಬಿಟ್ಟರೆ ಇದೇ ದೊಡ್ಡ ದಾಖಲೆ ಅನ್ನಬಹುದು.
ಸಾಂಘಿಕವಾಗಿ ಸಮಾಜದ ಕಲ್ಯಾಣಕ್ಕೆ ವಿಜ್ಞಾನ ಕ್ಷೇತ್ರ ಹಾಗೂ ಸಹಕಾರ ಕ್ಷೇತ್ರವೆರಡೂ ಕಾರಣವಾಗಿವೆ ಎಂದರಲ್ಲದೇ, ಚಂದ್ರಯಾನ ಮೂರರ ಅನೇಕ ರೋಚಕ ಹಾಗೂ ಸ್ವಾರಸ್ಯ ಕರ ಅಂಶಗಳನ್ನು ಮಾತಿನಲ್ಲಿ ಚಿತ್ರಿಸಿದರು.
ಇಡೀ ಮಹಾಸಭೆಯ ವಿಶೇಷ ಆಕರ್ಷಣೆ ಯಾಗಿದ್ದ ಇವರ ಭಾಷಣವನ್ನು ಆಸಕ್ತಿಯಿಂದ ಕೇಳಿದ ಸಭಾ ಸದರು, ಚಂದ್ರಯಾನದ ಹಾಗೂ ಇಸ್ರೋ ಸಾಧನೆಯ ಕುರಿತಾಗಿ ಅನೇಕ ಪ್ರಶ್ನೆಗಳನ್ನು ಕೇಳಿ ವಿಜ್ಞಾನಿ ಡಾ.ದಾರುಕೇಶರಿಂದ ಉತ್ತರಗಳನ್ನು ಪಡೆದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕಿನ ಅಧ್ಯಕ್ಷ ಎನ್.ಎ. ಮುರುಗೇಶ್, ಚಂದ್ರಯಾನ – 3 ಯಶಸ್ಸಿನಲ್ಲಿ ಶ್ರಮಿಸಿದ ಇಸ್ರೋ ವಿಜ್ಞಾನಿ ಡಾ. ದಾರುಕೇಶ್ವರ ಅವರೂ ಸೇರಿದಂತೆ ಎಲ್ಲಾ ವಿಜ್ಞಾನಿಗಳ ಸೇವೆಯನ್ನು ಮೆಲುಕು ಹಾಕಿ ಅಭಿನಂದಿಸಿದರು.