ಮದ್ಯ ಮಂಡಳಿ ಅನುದಾನದಲ್ಲಿ `ಸಂಯಮ’

ಮದ್ಯ ಮಂಡಳಿ ಅನುದಾನದಲ್ಲಿ `ಸಂಯಮ’

ಜಿಲ್ಲೆಯಲ್ಲಿ ಘಟಕವಿಲ್ಲ, 5 ವರ್ಷಗಳಿಂದ ಯಾವುದೇ ಮದ್ಯ ವರ್ಜನೆ ಶಿಬಿರವೂ ಇಲ್ಲ

ಅಬಕಾರಿ ಆದಾಯ 29,920 ಕೋಟಿ ರೂ., ಮದ್ಯ ಸಂಯಮ ಮಂಡಳಿಗೆ ಕೇವಲ 1.25 ಕೋಟಿ ರೂ.

ದಾವಣಗೆರೆ, ಸೆ. 28 – ಕಳೆದ ಹತ್ತು ವರ್ಷಗಳಲ್ಲಿ ರಾಜ್ಯ ಸರ್ಕಾರದ ವಾರ್ಷಿಕ ಅಬಕಾರಿ ಆದಾಯ 11,069.73 ಕೋಟಿ ರೂ.ಗಳಿಂದ 29,920.37 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಕೊರೊನಾ ವರ್ಷಗಳೂ ಬಿಡದಂತೆ ಪ್ರತಿ ವರ್ಷ
ಮದ್ಯ ಮಾರಾಟದಿಂದ ಬರುವ ಅಬಕಾರಿ ಆದಾಯ ಏರುತ್ತಲೇ ಇದೆ.

ಹಾಗಾದರೆ ಮದ್ಯ ಸೇವಿಸುವವರ ಪ್ರಮಾಣ ಹೆಚ್ಚಾಗಿದೆ ಎಂದರ್ಥ ಅಲ್ಲವೇ? ಹಾಗೆಂದ ಮೇಲೆ ಮದ್ಯ ವ್ಯಸನಿಗಳ ಸಂಖ್ಯೆಯೂ ಹೆಚ್ಚಾಗಿರಬೇಕಲ್ಲವೇ? ಹಾಗಾದರೆ ಮದ್ಯ ವ್ಯಸನ ನಿಯಂತ್ರಣಕ್ಕೆ ಮಾಡುವ ಖರ್ಚೂ ಹೆಚ್ಚಾಗಬೇಕಲ್ಲವೇ?

ಹಾಗೆಂದುಕೊಂಡಿದ್ದರೆ ನಿಮ್ಮ ಚಿಂತನೆಗೂ ಸರ್ಕಾರದ ಚಿಂತನೆಗೂ ತಾಳೆ ಆಗುತ್ತಿಲ್ಲ ಎಂದರ್ಥ. ಏಕೆಂದರೆ 2018-19ರಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿಗೆ ನೀಡಲಾದ ಅನುದಾನ 1.90 ಕೋಟಿ ರೂ. ಆಗಿದ್ದರೆ, 2022-23ರಲ್ಲಿ ಇದು ಕೇವಲ 1.25 ಕೋಟಿ ರೂ.ಗಳಿಗೆ ಇಳಿಕೆಯಾಗಿದೆ!

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಎಂಬುದು ಒಂದಿದೆ, ಅದು ಕೆಲಸ ಮಾಡುತ್ತಿದೆ ಎಂಬುದು ಎಷ್ಟೋ ಜನರಿಗೆ ಗೊತ್ತಿದೆ ಎಂಬುದೇ ಅನುಮಾನ. ಏಕೆಂದರೆ ಮಂಡಳಿಯು ಬೆಂಗಳೂರು ಹೊರತು ಪಡಿಸಿದರೆ ಬೇರೆ ಯಾವುದೇ ಜಿಲ್ಲೆಯಲ್ಲಿ ಕಾರ್ಯ ನಿರ್ವಹಣೆ ಘಟಕ ಹೊಂದಿಲ್ಲ. ಕಳೆದ ಐದು ವರ್ಷಗಳಿಂದ ಮಂಡಳಿಯಿಂದ ದಾವಣಗೆರೆ ಜಿಲ್ಲೆಯಲ್ಲಿ ಯಾವುದೇ ಮದ್ಯ ವರ್ಜನೆ ಶಿಬಿರ ಆಯೋಜಿಸಿಲ್ಲ. ಕೊನೆಗೆ ಜಿಲ್ಲೆಯಲ್ಲಿ ಎಷ್ಟು ಮದ್ಯವ್ಯಸನಿಗಳಿದ್ದಾರೆ ಎಂಬುದರ ಸಮೀಕ್ಷೆಯೂ ನಡೆದಿಲ್ಲ.

ಮಂಡಳಿಗೆ ನೀಡುವ ಅನುದಾನದ ಬಗ್ಗೆ ಸರ್ಕಾರ ಸಾಕಷ್ಟು §ಸಂಯಮ¬ ಕಾಯ್ದುಕೊಂಡಿದೆ. 2018-19 ಹಾಗೂ 2019-20ರಲ್ಲಿ ವರ್ಷಕ್ಕೆ ತಲಾ 1.90 ಕೋಟಿ ರೂ. ಅನುದಾನ ನೀಡಲಾಗಿತ್ತು. ಅದು 2020-21ರಲ್ಲಿ 1.44 ಕೋಟಿ ರೂ.ಗಳಿಗೆ ಇಳಿಕೆಯಾಗಿದೆ. 2021-22ರಲ್ಲಂತೂ ಕೇವಲ 86 ಲಕ್ಷ ರೂ.ಗಳಿಗೆ ತಲುಪಿತ್ತು.

ಮದ್ಯಪಾನ ಸಂಯಮ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿರುವ ಮಾಹಿತಿಯ ಪ್ರಕಾರ, ಮಂಡಳಿಯು ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುತ್ತಿದೆ, ಪ್ರಚಾರ ಮಾಧ್ಯಮಗಳ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದೆ.

ಶಾಲಾ – ಕಾಲೇಜುಗಳಲ್ಲಿ ವಿಚಾರ ಸಂಕಿರಣ, ಬೀದಿ ನಾಟಕ, ಸಾಕ್ಷ್ಯಚಿತ್ರ ಪ್ರದರ್ಶನ ಇತ್ಯಾದಿಗಳನ್ನು ಮಾಡುತ್ತಿದೆ. ಧರ್ಮಸ್ಥಳದ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಮದ್ಯವರ್ಜನೆ ಶಿಬಿರಗಳನ್ನು ಆಯೋಜಿಸುತ್ತಿದೆ.

ಆದರೆ, ಸರ್ಕಾರ ನೀಡುವ §ಚಿಲ್ಲರೆ¬ ಅನುದಾನದಲ್ಲಿ, ಯಾವುದೇ ಜಿಲ್ಲೆಯಲ್ಲಿ ಘಟಕಗಳನ್ನು ಹೊಂದಿರದೇ ಅದಾವ ರೀತಿ ಮದ್ಯ ಸಂಯಮ ಮೂಡಿಸುತ್ತಿದೆ ಎಂಬುದನ್ನು ಜನರೇ ಯೋಚಿಸಬೇಕಿದೆ. 

ವಿಶ್ವ ಆರೋಗ್ಯ ಸಂಘಟನೆಯ ವರದಿಯ ಪ್ರಕಾರ, ಮದ್ಯವು 200ಕ್ಕೂ ಹೆಚ್ಚು ರೀತಿಯ ರೋಗ ಹಾಗೂ ಗಾಯಗಳ ಪರಿಸ್ಥಿತಿಗೆ ಕಾರಣವಾಗುತ್ತಿದೆ. ವಿಶ್ವದಾದ್ಯಂತ ಪ್ರತಿ ವರ್ಷ ಮದ್ಯ ಸಂಬಂಧದ ಕಾರಣಗಳಿಂದ 30 ಲಕ್ಷ ಸಾವುಗಳು ಸಂಭವಿಸುತ್ತಿವೆ. ಇದು ಒಟ್ಟು ಸಾವುಗಳ ಪ್ರಮಾಣ ಶೇ.5.3. ಅಷ್ಟೇ ಅಲ್ಲದೇ, ಜಾಗತಿಕವಾಗಿ ಶೇ.5.1ರಷ್ಟು ರೋಗಗಳ ಹೊರೆಗೆ ಮದ್ಯವೇ ಕಾರಣವಾಗಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ನೆಪ ಮಾತ್ರಕ್ಕೆ §ಸಂಯಮ¬ ಮಂಡಳಿ ರಚಿಸಿಟ್ಟುಕೊಳ್ಳುವುದರಲ್ಲಿ ಅರ್ಥವಿದೆಯೇ?

ಮುಂಬರುವ ದಿನಗಳಲ್ಲಿ ನಿಗಮ – ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿಗಳು ನಡೆಯಬಹುದು. ಆದರೆ, ಆ ಸಂದರ್ಭದಲ್ಲಿ §ಶುಷ್ಕ¬ವಾಗಿರುವ ಸಂಯಮ ಮಂಡಳಿಯ ಅಧ್ಯಕ್ಷ ಸ್ಥಾನ ಪಡೆಯಲು ಹೆಚ್ಚೇನೂ ಸ್ಪರ್ಧೆ ಏರ್ಪಡುವುದಿಲ್ಲ ಎಂದು ನಂಬಿದರೆ ತಪ್ಪೇನಿಲ್ಲ.

error: Content is protected !!