ಜಿಗಳಿ ಗ್ರಾ.ಪಂ.ಗೆ ಮತ್ತಷ್ಟು ಶಕ್ತಿ ತುಂಬಿದ `ಗಾಂಧಿ ಗ್ರಾಮ ಪುರಸ್ಕಾರ’

ಜಿಗಳಿ ಗ್ರಾ.ಪಂ.ಗೆ ಮತ್ತಷ್ಟು ಶಕ್ತಿ ತುಂಬಿದ `ಗಾಂಧಿ ಗ್ರಾಮ ಪುರಸ್ಕಾರ’

ರಾಜ್ಯ ಸರ್ಕಾರ ಗಾಂಧಿ ಜಯಂತಿ ದಿನದಂದು ಕೊಡಮಾಡುವ `ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಈ ವರ್ಷ ಹರಿಹರ ತಾಲ್ಲೂಕಿನಿಂದ ಜಿಗಳಿ ಗ್ರಾ.ಪಂ. ಆಯ್ಕೆಯಾಗಿದೆ.

ಜಿಗಳಿ, ಜಿ. ಬೇವಿನಹಳ್ಳಿ ಮತ್ತು ವಡೆಯರ ಬಸವಾಪುರ ಗ್ರಾಮಗಳನ್ನು ಒಳಗೊಂಡಿರುವ ಜಿಗಳಿ ಗ್ರಾಮ ಪಂಚಾಯ್ತಿಯು ಒಟ್ಟು 1613 ಕುಟುಂಬಗಳನ್ನು ಮತ್ತು 6896 ಜನಸಂಖ್ಯೆಯನ್ನು ಹಾಗೂ 501 ಮತದಾರರನ್ನು ಹೊಂದಿದೆ.

ಜಿಗಳಿಯಲ್ಲಿ 10, ಜಿ. ಬೇವಿನಹಳ್ಳಿಯಲ್ಲಿ 7 ಮತ್ತು ವಡೆಯರ ಬಸವಾಪುರದಲ್ಲಿ ಒಬ್ಬರು ಸೇರಿ ಒಟ್ಟು 18 ಜನ ಸದಸ್ಯರನ್ನು ಹೊಂದಿರುವ ಜಿಗಳಿ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆಗಿಂತ ಅವಿರೋಧ
ಆಯ್ಕೆಯಾಗಿರುವುದೇ ಹೆಚ್ಚು.

ಮೊದಲಿನಿಂದಲೂ ಮೂರೂ ಗ್ರಾಮಗಳ ಮುಖಂಡರು ಹೊಂದಾಣಿಕೆಯಿಂದ ಅಧಿಕಾರ ಹಂಚಿಕೆ ಮಾಡಿಕೊಂಡು ಬಂದಿದ್ದಾರೆ. ಜೊತೆಗೆ ಅಭಿವೃದ್ಧಿ ವಿಷಯದಲ್ಲೂ ಪಕ್ಷಾತೀತವಾಗಿ, ಒಗ್ಗಟ್ಟಿನಿಂದ ಪಂಚಾಯ್ತಿಗೆ ಆಗಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ.

ಉದ್ಯೋಗ ಖಾತ್ರಿ ಅನುಷ್ಠಾನ, ಸ್ವಂತ ಸಂಪನ್ಮೂಲ ಕ್ರೋಢೀಕರಣದ ಜೊತೆಗೆ ಬಡತನ ನಿರ್ಮೂಲನೆಗೆ ಒತ್ತು ಕೊಟ್ಟು ಕೆಲಸ ಮಾಡುತ್ತಿರುವ ಜಿಗಳಿ ಗ್ರಾ.ಪಂ. ಜನರ ಜೀವನ ಗುಣಮಟ್ಟ ಸುಧಾರಿಸುವುದಕ್ಕಾಗಿ ಹತ್ತು ಹಲವು ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದೆ.

ಇಲ್ಲಿ ಶಿಕ್ಷಣ, ಆರೋಗ್ಯಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದು, ಕೊರೊನಾ ಸಂದರ್ಭದಲ್ಲಿ ಎಲ್ಲರಿಗೂ ವ್ಯಾಕ್ಸಿನ್ ಹಾಕಿಸುವುದೂ ಸೇರಿದಂತೆ ಮಕ್ಕಳಿಗೆ ಎಲ್ಲಾ ರೀತಿಯ ಚುಚ್ಚುಮದ್ದುಗಳನ್ನು ಶೇ. 100ರಷ್ಟು ನೀಡಲಾಗಿದೆ. 

2010-11ನೇ ಸಾಲಿನಲ್ಲಿ ಸಂಪೂರ್ಣ ಸ್ವಚ್ಛತೆಗಾಗಿ `ನಿರ್ಮಲ ಗ್ರಾಮ ಪುರಸ್ಕಾರ’ ಪ್ರಶ ಸ್ತಿಗೂ ಜಿಗಳಿ ಗ್ರಾಮ ಪಂಚಾಯ್ತಿ ಆಯ್ಕೆಯಾಗಿತ್ತು.

ಅಲ್ಲದೇ, ಶಾಸಕ ಬಿ.ಪಿ. ಹರೀಶ್ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಸುವರ್ಣ ಗ್ರಾಮ ಯೋಜನೆಗೂ ಜಿಗಳಿ ಗ್ರಾಮವನ್ನು ಆಯ್ಕೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಗ್ರಾಮದ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ ಬಂದಿತ್ತು. ಆ ಅನುದಾನದಲ್ಲಿ ಸಿಸಿ ರಸ್ತೆ, ಸಿಸಿ ಚರಂಡಿ ಸೇರಿ ದಂತೆ ವಿವಿಧ ಕಾಮಗಾರಿಗಳನ್ನು ಮಾಡಲಾಗಿತ್ತು.

ಇತ್ತೀಚೆಗೆ ಗ್ರಾ.ಪಂ.ನಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರಗಳನ್ನು ಏರ್ಪಡಿಸಿದ್ದರು. 50ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದರು.

ವಿಶೇಷವಾಗಿ ಉದ್ಯೋಗ ಖಾತ್ರಿಯಲ್ಲಿ ಶೇ. 100ರಷ್ಟು ಕಾಮಗಾರಿಗಳನ್ನು ನೈಸರ್ಗಿಕವಾಗಿಯೇ ಮಾಡಲಾಗಿದ್ದು, ಜೆಜೆಎಂ ಯೋಜನೆಯಡಿ ಮನೆ ಮನೆಗೆ ನಳ ಸಂಪರ್ಕ  ಮತ್ತು ಸರ್ಕಾರದ ನಿರ್ದೇಶನದಂತೆ ವಾರ್ಡ್ ಸಭೆ ಹಾಗೂ ಗ್ರಾಮ ಸಭೆಗಳನ್ನು ಪರಿಣಾಮಕಾರಿಯಾಗಿ ನಡೆಸಲಾಗಿದೆ.

ಜಿಗಳಿ ಗ್ರಾ.ಪಂ.ಗೆ ಮತ್ತಷ್ಟು ಶಕ್ತಿ ತುಂಬಿದ `ಗಾಂಧಿ ಗ್ರಾಮ ಪುರಸ್ಕಾರ' - Janathavani

ಗ್ರಾಮದ ಹೊರ ವಲಯದಲ್ಲಿ ಸ್ವಚ್ಛ ಸಂಕೀರ್ಣ ಘಟಕವನ್ನು ಸ್ಥಾಪಿಸಿ ಕಸ ವಿಲೇವಾರಿಗೆ ಚಾಲನೆ ನೀಡಲಾಗಿದೆ. ಜೊತೆಗೆ ಗ್ರಾ.ಪಂ.ನಿಂದ ನೂತನ ಡಿಜಿಟಲ್ ಗ್ರಂಥಾಲಯ ಕಟ್ಟಡವನ್ನೂ ಕಟ್ಟಲಾಗಿದೆ.

ಒಟ್ಟಾರೆಯಾಗಿ ಜಿಗಳಿ ಗ್ರಾಮ ಪಂಚಾಯ್ತಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಈ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದರ ಫಲವಾಗಿ ಈ ವರ್ಷದ `ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಆಯ್ಕೆಯಾಗಿದೆ ಎಂದರೆ ತಪ್ಪಾಗಲಾರದೆಂದು ಗ್ರಾ.ಪಂ. ಅಧ್ಯಕ್ಷೆ ಜಿ. ಬೇವಿನಹಳ್ಳಿಯ ಶ್ರೀಮತಿ ರೂಪಾ ಸೋಮಶೇಖರ್ ಮತ್ತು ಉಪಾಧ್ಯಕ್ಷ ಜಿಗಳಿಯ ಎಕ್ಕೆಗೊಂದಿ ಚೇತನ್ ಅವರು ಅಭಿಪ್ರಾಯಪಟ್ಟರು.

ಈ ಪುರಸ್ಕಾರ ನಮ್ಮ ಗ್ರಾಮ ಪಂಚಾ ಯ್ತಿಗೆ ಕಿರೀಟವಾಗಲಿದ್ದು, ಮತ್ತಷ್ಟು ಅಭಿ ವೃದ್ಧಿ ಹಾಗೂ ಬದಲಾವಣೆಗೆ ಸ್ಫೂರ್ತಿ ಯಾಗಿದೆ ಎಂದು ಗ್ರಾ.ಪಂ.ನ ಸರ್ವ ಸದಸ್ಯರೂ ಸಂತಸ ವ್ಯಕ್ತಪಡಿಸಿದ್ದಾರೆ.

ಗ್ರಾ.ಪಂ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರ ಮತ್ತು ಮೂರೂ ಗ್ರಾಮಗಳ ಗ್ರಾಮಸ್ಥರ ಸಹಕಾರದ ಪರಿಣಾಮ ನಮ್ಮ ಗ್ರಾ.ಪಂ. ಈ ಪುರಸ್ಕಾರಕ್ಕೆ ಆಯ್ಕೆಯಾಗಲು ಕಾರಣವಾಗಿದ್ದು, ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಂತಾಗಿದೆ. ಜೊತೆಗೆ ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುವುದರೊಂದಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಲು ಉತ್ಸಾಹ ತಂದಿದೆ ಎಂದು ಪಿಡಿಓ ಕೆ.ಎಸ್. ಉಮೇಶ್ ಹೇಳಿದರು.

ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನು ಷ್ಠಾನ ಹಾಗೂ ಮೂಲಭೂತ ಸೌಕರ್ಯ ನಿರ್ವಹಣೆ ಮತ್ತು ತಂತ್ರಜ್ಞಾನ ಬಳಕೆಯಲ್ಲಿ ಗ್ರಾ.ಪಂ.ಗಳ ನಡುವೆ ಆರೋಗ್ಯಕರ ಸ್ಪರ್ಧೆಗಾಗಿ ರಾಜ್ಯ ಸರ್ಕಾರ `ಗಾಂಧಿ ಗ್ರಾಮ ಪುರಸ್ಕಾರ’ ಪ್ರಶಸ್ತಿ ನೀಡುತ್ತಾ ಬಂದಿದ್ದು, ಹರಿಹರ ತಾಲ್ಲೂಕಿನಲ್ಲಿ ಈ ಪ್ರಶಸ್ತಿಗೆ 5 ಗ್ರಾ.ಪಂ.ಗಳು ಸ್ಪರ್ಧೆಯಲ್ಲಿದ್ದವು. ಅಂತಿಮವಾಗಿ ಜಿಗಳಿ ಗ್ರಾ.ಪಂ. ಆಯ್ಕೆಯಾಗಿದೆ ಎಂದು ಹರಿಹರ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಎನ್. ರವಿ ತಿಳಿಸಿದರು.

ಗ್ರಾಮಸ್ಥರ ಹರ್ಷ : ಜಿಗಳಿ ಗ್ರಾ.ಪಂ.ಗೆ ಮೊದಲ ಬಾರಿಗೆ  `ಗಾಂಧಿ ಗ್ರಾಮ ಪುರಸ್ಕಾರ’ ಲಭಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಜಿಗಳಿ, ಜಿ. ಬೇವಿನಹಳ್ಳಿ ಮತ್ತು ಬಸವಾಪುರ ಗ್ರಾಮಗಳ ಗ್ರಾಮಸ್ಥರು, ಈ ಪ್ರಶಸ್ತಿಯಿಂದ ನಮ್ಮ ಗ್ರಾ.ಪಂ. ರಾಜ್ಯಮಟ್ಟದಲ್ಲಿ ಸ್ಥಾನ ಪಡೆದಿದೆ ಎಂದಿದ್ದಾರೆ.

ಬೆಂಗಳೂರಿನ ವಿಧಾನಸೌಧದಲ್ಲಿ ಅ. 2ರಂದು ಜರುಗುವ ರಾಜ್ಯಮಟ್ಟದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. 

ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಓ ಹಾಗೂ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.


ಜಿಗಳಿ ಪ್ರಕಾಶ್

error: Content is protected !!