ರಾಣೇಬೆನ್ನೂರು ಕ್ಷೇತ್ರ ಕಾಂಗ್ರೆಸ್ ಪಾಲಿಗೆ?

ರಾಣೇಬೆನ್ನೂರು ಕ್ಷೇತ್ರ ಕಾಂಗ್ರೆಸ್ ಪಾಲಿಗೆ?

ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿ ಚುನಾವಣೆ

ರಾಣೇಬೆನ್ನೂರು, ಸೆ. 28- ಇದೇ ದಿ.30ರಂದು ನಡೆಯುವ ಧಾರವಾಡ ಕರ್ನಾಟಕ ಸೆಂಟ್ರಲ್ ಕೋ-ಆಪ್ ಬ್ಯಾಂಕ್‌ನ 2023ನೇ ಸಾಲಿನ ನಿರ್ದೇಶಕ ಮಂಡಳಿ ಚುನಾವಣೆಗೆ ರಾಣೇಬೆನ್ನೂರು ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಕ್ಷೇತ್ರದ ಒಂದು ಸ್ಥಾನಕ್ಕೆ ಹನುಮಂತರಾಜು ಚನ್ನಗೌಡ್ರ, ಶಿವಾನಂದಪ್ಪ ಸಂಗಾಪೂರ, ಮಳ್ಳಪ್ಪ ನಿಂಗಜ್ಜನವರ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದು, ಪ್ರಚಾರ ಬಿರುಸು ಪಡೆದಿದೆ.

ತಾಲ್ಲೂಕಿನಲ್ಲಿ ಒಟ್ಟು 42 ಪತ್ತಿನ ಸಹಕಾರಿ ಸಂಘಗಳಿದ್ದು, ಅವುಗಳಲ್ಲಿ 40 ಸಂಘಗಳು ಮತದಾನದ ಹಕ್ಕು ಪಡೆದಿವೆ. ತಮ್ಮ ಬೆಂಬಲಿತ ಅಭ್ಯರ್ಥಿ ಮಳ್ಳಪ್ಪ 29 ಮತ ಪಡೆದು ಜಯಗಳಿಸುವರು ಎಂದು ಕಾಂಗ್ರೆಸ್ಸಿ ಗರು, 22 ಮತ ಪಡೆದು ನಮ್ಮ ಬೆಂಬಲಿತ ಅಭ್ಯರ್ಥಿ ಶಿವಾನಂದ ಆಯ್ಕೆ ಖಚಿತ ಎನ್ನುವುದು ಬಿಜೆಪಿ ನಂಬಿಕೆ ಯಾದರೆ, 16 ರಿಂದ 17 ಮತ ಪಡೆದು ನಮ್ಮ ಹುರಿಯಾಳು ಹನುಮಂತರಾಜು ಗೆದ್ದೇ ಗೆಲ್ಲುತ್ತಾರೆ ಎನ್ನುವುದು ನವ ಯುಗ ನಿರ್ಮಾತೃ ಸಂತೋಷ ಪಾಟೀಲ ದೃಢ ನಂಬಿಕೆ.

ಮಾಜಿ ಸಭಾಪತಿ ಕೆ.ಬಿ. ಕೋಳಿವಾಡ ಚುನಾವಣಾ ಅಖಾಡಕ್ಕಿಳಿದಿದ್ದು, ತಮ್ಮ ಅಭ್ಯರ್ಥಿ ಮಳ್ಳಪ್ಪ ನಿಂಗಜ್ಜನವರ ಗೆಲುವಿಗೆ ಅವಶ್ಯ ಮತದಾರರನ್ನು ಈಗಾಗಲೇ ಜೊತೆಗಿಟ್ಟುಕೊಂಡಿದ್ದಾರೆ ಎನ್ನುವುದು ಮತ್ತು ಬಂಡಾಯ ಬಿಜೆಪಿ ಎನ್ನಲಾಗುವ ನವಯುಗದ ಹನುಮಂತರಾಜು ಅವರು ಬಿಜೆಪಿ ಮತಗಳಿಗೆ ಲಗ್ಗೆ ಹಾಕುವುದರಿಂದ ಕಾಂಗ್ರೆಸ್ ಗೆಲುವು ನಿಶ್ಚಿತ ಎನ್ನುವುದು ರಾಜಕೀಯ ಪರಿಣಿತರ ಲೆಕ್ಕಾಚಾರವಾಗಿದೆ.

ಮಾಜಿ ಶಾಸಕ ಬಿಜೆಪಿ ಅರುಣಕುಮಾರ ಪೂಜಾರ ಸಹ ಚುನಾವಣಾ ಅಖಾಡಕ್ಕಿಳಿದಿದ್ದು, ಅವರ ಅಭ್ಯರ್ಥಿ ಶಿವಾನಂದ ಸಂಗಾಪೂರ ಅವರ ಗೆಲುವಿಗೆ ನವಯುಗದ ಹನುಮಂತರಾಜು ತೊಡರುಗಾಲು ಹಾಕಲಿದ್ದಾರೆ. ಬಿಜೆಪಿ ಸೋಲಿಸುವುದೇ ನವಯುಗದ ಗುರಿ ಎನ್ನುವ ವಾತಾವರಣ ತಾಲ್ಲೂಕಿನಲ್ಲಿ ಬಿಂಬಿತ ಗೊಂಡಂತಾಗಿದೆ ಎನ್ನುವುದು ಪರಿಣಿತರ ಲೆಕ್ಕಾಚಾರದಲ್ಲಿ ಸೇರಿದೆ. ಒಟ್ಟಾರೆ ಕಾಂಗ್ರೆಸ್ ಗೆಲುವು ಅಬಾಧಿತ ಎನ್ನುವಂತಾಗಿದೆ.

error: Content is protected !!