ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಗಳ ತಾಯಿ : ಪರಶುರಾಮನಗೌಡ

ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಗಳ ತಾಯಿ : ಪರಶುರಾಮನಗೌಡ

ದಾವಣಗೆರೆ, ಸೆ.27- ಶಿಕ್ಷಣದಲ್ಲಿ ಕಲಿಯ ಬೇಕೆಂಬ ಒತ್ತಾಸೆ ಇರಬೇಕು, ಶಿಕ್ಷಕ ವ್ಯತ್ತಿಯನ್ನು ಬೇರೆ ಯಾವ ವೃತ್ತಿಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಎಲ್ಲಾ ವೃತ್ತಿಗಳ ತಾಯಿ ಶಿಕ್ಷಕ ವೃತ್ತಿಯಾಗಿದೆ ಎಂದು ನೂತನ ವಿದ್ಯಾಸಂಸ್ಥೆಯ ಅಧ್ಯಕ್ಷ ಪರಶುರಾಮನಗೌಡ ಹೇಳಿದರು.

ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮಗೆ ಸಾಧನೆ ಮಾಡಬೇಕೆಂಬ ಗುರಿ ಇರಬೇಕು. ವಿದ್ಯಾರ್ಥಿಗಳು ತಮ್ಮ ಹೃದಯದಲ್ಲಿ ಶಿಕ್ಷಕರನ್ನು ಆರಾಧಿಸುವಂತಹ ಶಿಕ್ಷಕರು ನೀವಾಗ ಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.

ಸರ್ಕಾರಿ ಮಾಜಿ ಪುರಸಭೆ ಪಿ.ಯು. ಕಾಲೇಜು (ಪ್ರೌಢಶಾಲಾ ವಿಭಾಗ)ದ ಉಪ ಪ್ರಾಚಾರ್ಯ ಆರ್.ನಾಗರಾಜ್ ಮಾತನಾಡಿ, ಶಿಕ್ಷಣವು ನಮ್ಮ ಜೀವನವನ್ನು ಪರಿವರ್ತಿಸುತ್ತದೆ. ಬಿ.ಎಡ್, ಎಂದರೆ ಗೌರವಾನ್ವಿತ ಪದವಿ. ಕರ್ತವ್ಯದಲ್ಲಿ ಶ್ರದ್ಧೆ ಇದ್ದರೆ ಒಳ್ಳೆಯ ಸ್ಥಾನ ದೊರಕುವುದು. ಸಮಯ ಪ್ರಶ್ನೆ ಎಲ್ಲಾ ಶಿಕ್ಷಕರಲ್ಲಿ ಇರಬೇಕು. ಇಡೀ ಸಮಾಜ ಶಿಕ್ಷಕರ ಮೇಲೆ ಅವಲಂಬಿತವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಿಕ್ಕನಹಳ್ಳಿ ದೊಡ್ಡಪ್ಪ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ.ಶಿವಮೂರ್ತಿ ಮಾತನಾಡಿ, ಶಿಕ್ಷಣ ನಿಂತ ನೀರಲ್ಲ, ಹರಿಯುತ್ತಿರುವ ನೀರು. ಇಂದಿನ ಶಿಕ್ಷಣವು ತುಂಬಾ ಸುಲಭವಾಗಿ ದೊರೆಯುತ್ತಿದೆ. ವಿದ್ಯಾರ್ಥಿಗಳಿಗೆ ಚಿಂತನೆಗೆ ಒಳಪಡಿಸುವಂತಹ ಶಿಕ್ಷಕರಾಗಿರಬೇಕು, ಶಿಕ್ಷಕರಿಗೆ ಶ್ರದ್ಧೆ, ಶಿಸ್ತು, ಸಮಯ ಪಾಲನೆ ಮಾಡುವುದರಿಂದ ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದರು.

ನೂತನ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಕೆ.ಎಸ್. ದಿವಾಕರ ನಾಯ್ಕ ಮಾತನಾಡಿ, ಶಿಕ್ಷಕರು ತಮ್ಮ ಕರ್ತವ್ಯದ ಮೌಲ್ಯಮಾಪನ ಮಾಡಿಕೊಳ್ಳಬೇಕು. ಶಿಕ್ಷಕರು ನೈತಿಕ ಮೌಲ್ಯಗಳನ್ನು ಹಾಗೂ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹಿತ ನುಡಿಗಳನ್ನಾಡಿದರು.

ಪ್ರಶಿಕ್ಷಣಾರ್ಥಿ ಕು. ಎಸ್‌.ಸಿ. ಕಾವ್ಯ ಹಾಗೂ ಕು. ಎಂ.ಎಂ. ರಕ್ಷಿತಾ ಪ್ರಾರ್ಥಿಸಿದರು. ಕು. ಕೆ.ಎಸ್.ನಯನ ಅತಿಥಿಗಳನ್ನು ಸ್ವಾಗತಿಸಿದರು. ಕು. ಹೆಚ್.ಎಸ್.ಸುಷ್ಮಾ ಹಾಗೂ ಶ್ರೀಮತಿ ಹೆಚ್.ರೂಪಾ ಅತಿಥಿಗಳ ಪರಿಚಯ ಮಾಡಿದರರು. ಕು. ಡಿ.ಪಿ. ಕೃತಿ ಶಿಕ್ಷಕರ ದಿನಾಚರಣೆ ಕುರಿತು ಭಾಷಣ ಮಾಡಿದರು. ಕು. ಎಂ.ರಂಜಿತಾ ವಂದಿಸಿದರು. ಕು. ಆರ್.ವಿ. ಅಮೃತ ಕಾರ್ಯಕ್ರಮ ನಿರೂಪಿಸಿದರು.

error: Content is protected !!