ಬಿದರಕೆರೆಯ `ಈರುಳ್ಳಿ ಬೆಳೆ ಕ್ಷೇತ್ರೋತ್ಸವ’ದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ದೇವರಾಜ ಟಿ.ಎನ್
ದಾವಣಗೆರೆ,ಸೆ.27-ಉತ್ತಮ ಗುಣಮಟ್ಟದ ಬೀಜ ಮತ್ತು ವೈಜ್ಞಾನಿಕ ತಾಂತ್ರಿಕತೆಗಳನ್ನು ಅಳವಡಿಸಿಕೊಂಡರೆ ಉತ್ತಮ ಇಳುವರಿ ಪಡೆಯಲು ಸಾಧ್ಯ, ಇದಕ್ಕೆ ಉದಾರಣೆಯೆಂದರೆ ಈರುಳ್ಳಿಯ ಭೀಮಾ ಸೂಪರ್ ತಳಿಯ ಈ ವರ್ಷದ ಉತ್ಪಾದಕತೆಯೇ ಸಾಕ್ಷಿ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥ ಡಾ. ದೇವರಾಜ ಟಿ.ಎನ್ ತಿಳಿಸಿದರು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ, ಬಿದರಕೆರೆ ತರಳಬಾಳು ರೈತ ಉತ್ಪಾದಕ ಕಂಪನಿ, ಬಿದರಕೆರೆ ಹಾಗೂ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಜಗಳೂರು ಇವರು ಹಮ್ಮಿಕೊಂಡಿದ್ದ `ಈರುಳ್ಳಿ ಬೆಳೆ ಕ್ಷೇತ್ರೋತ್ಸವ’ ಉದ್ಘಾಟಿಸಿ ಮಾತನಾಡಿದರು.
ಬೀಜೋಪಚಾರ, ಸಮಗ್ರ ಪೋಷಕಾಂಶ ನಿರ್ವಹಣೆ ಮತ್ತು ಕೀಟ ಹಾಗೂ ರೋಗ ನಿರ್ವಹಣಾ ಕ್ರಮಗಳನ್ನು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನದಿಂದ ರೈತರು ಅನುಸರಿಸಿರುವುದರಿಂದ ಇಂದು ಉತ್ತಮ
ಬೆಳೆ ಬಂದಿದೆ. ಇಳುವರಿಯ ಜೊತೆಗೆ ಮೌಲ್ಯವರ್ಧನೆ, ಸಂಸ್ಕರಣೆ ಹಾಗೂ ಗ್ರೇಡಿಂಗ್ ತಂತ್ರಜ್ಞಾನಗಳನ್ನು ತೋಟಗಾರಿಕೆ ಬೆಳೆಗಳಲ್ಲಿ ಅನುಸರಿಸುವುದರಿಂದ ಬೆಳೆಗೆ ಉತ್ತಮ ಬೆಲೆ ನಿರ್ಧಾರ ಮಾಡಲು ಸಹಾಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ, ಕಲ್ಲೇದೇವರಪುರ ಗ್ರಾಮದಲ್ಲಿ ಆಯ್ದ ರೈತರಿಗೆ ಭೀಮಾ ಸೂಪರ್ ತಳಿಯನ್ನು
ಪ್ರಾತ್ಯಕ್ಷಿಕೆಗೆ ನೀಡಲಾಗಿದ್ದು, ರೈತರು ನಮ್ಮ ಮಾರ್ಗದರ್ಶನದಲ್ಲಿ ಟ್ರೈಕೋಡರ್ಮಾ ಬೀಜಜೋಪಚಾರ, ಮಣ್ಣು ಪರೀಕ್ಷೆಯ ಆಧಾರದ ಮೇಲೆ ಪೋಷಕಾಂಶಗಳ ಬಳಕೆ, ಕೀಟ ನಿರ್ವಹಣೆಗೆ ಹಳದಿ ಮತ್ತು ನೀಲಿ ಅಂಟು ಪಟ್ಟಿಯ ಬಳಕೆ, ಸಮಗ್ರ ರೋಗ ಮತ್ತು ಕೀಟ ನಿರ್ವಹಣೆ ಕ್ರಮಗಳನ್ನು ಅನುಸರಿಸುವುದರಿಂದ ಇಂದು ಎಕರೆಗೆ 170 ಚೀಲ ಇಳುವರಿಯನ್ನು ಪಡೆದಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಉತ್ತಮ ತಳಿಯ ಈರುಳ್ಳಿ ಬೀಜವನ್ನು ಬಿದರಕೆರೆ ರೈತ ಉತ್ಪಾದಕ ಕಂಪನಿಯ ವತಿಯಂದ ಮಾರಾಟಕ್ಕೆ ಒದಗಿಸಲಾಗುವುದು ಎಂದು ತಿಳಿಸಿದರು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ತೋಟಯ್ಯ ಜಿ. ಮಾತನಾಡಿ, ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಖುಷ್ಕಿ ತೋಟಗಾರಿಕೆಗೆ ಅನುದಾನ ಲಭ್ಯವಿದ್ದು, ಇದರ ಸದ್ಭಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ವಿಜ್ಞಾನಿ ಮಲ್ಲಿಕಾರ್ಜುನ ಬಿ.ಓ., ಬಿದರಕೆರೆ ತರಳಬಾಳು ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಸೋಮನಗೌಡ, ನಿರ್ದೇಶಕ ಕೃಷ್ಣಮೂರ್ತಿ, ರೈತರು ಕಾರ್ಯಕ್ರಮದಲ್ಲಿ ಹಾಜರಿದ್ದರು.