ಕಾಟಾಚಾರದ ಜನತಾ ದರ್ಶನ ಆಗದಿರಲಿ

ಕಾಟಾಚಾರದ ಜನತಾ ದರ್ಶನ ಆಗದಿರಲಿ

ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳಿಗೆ ಕಿವಿಮಾತು

ದಾವಣಗೆರೆ, ಸೆ. 26 – ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಜನರ ಸಮಸ್ಯೆಗಳನ್ನು ಸ್ಥಳ ದಲ್ಲೇ ಬಗೆಹರಿಸಲು ಜನತಾ ದರ್ಶನ ಕಾರ್ಯ ಕ್ರಮ ಮಾಡಿದ್ದು, ಇದನ್ನು ಕಾಟಾಚಾರಕ್ಕೆ ಮಾಡದೆ ಜನರಿಗೆ ಸ್ಪಂದಿಸಬೇಕು ಎಂದು ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಮಾಯಕೊಂಡದಲ್ಲಿ ಸೋಮವಾರ ತಾಲ್ಲೂಕು ಆಡಳಿತ ಮತ್ತು ವಿವಿಧ ಇಲಾಖೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದು ಸ್ವೀಕರಿಸಿದ ಅರ್ಜಿಗಳನ್ನು ಮುಂದಿನ ಜನತಾ ದರ್ಶನ ಕಾರ್ಯಕ್ರಮ ಬರುವುದರೊಳಗೆ ಅಧಿಕಾರಿಗಳು ಬಗೆಹರಿಸಿ, ಅವರಿಗೆ ಪರಿಹಾರ ಒದಗಿಸಿದರೆ, ಈ ಕಾರ್ಯಕ್ರಮ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ. ಅಷ್ಟೇ ಅಲ್ಲದೇ ನೀವು ಪರಿಹಾರ ನೀಡಿದ ವರದಿಯನ್ನು ಅಂದು ನೀಡ ಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದ‌ ಬಳಿ ಬರುವ ಬದಲು ಸರ್ಕಾರವೇ ಜನರ ಬಳಿಗೆ ಬರುವ ವಿನೂತನ ಜನತಾ ದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಾರ್ವ ಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಜನರ ಸಮಸ್ಯೆಗಳ ಪರಿಹಾರಕ್ಕೆ ಸರ್ವ ಪ್ರಯತ್ನ ನಡೆಸುತ್ತಿದ್ದು, ಆಡಳಿತವನ್ನೇ ನಿಮ್ಮ ಮನೆ ಬಾಗಿಲಿಗೆ ಕರೆದುಕೊಂಡು ಬಂದು ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ನಡೆಸುತ್ತಿದ್ದೇವೆ. ಇದು ನಮ್ಮ ಸರ್ಕಾರದ ಬದ್ದತೆಯಾಗಿದೆ. ನಾವು ನುಡಿದಂತೆ ನಡೆಯುತ್ತಿದ್ದೇವೆ  ಎಂದರು.

ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿಗಳ ಪೈಕಿ ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಈಡೇರಿಸಲಾಗಿದೆ. ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನಭಾಗ್ಯ ಹಾಗೂ ಶಕ್ತಿಯೋಜನೆಗಳ ಅಡಿಯಲ್ಲಿ ಈ ರಾಜ್ಯದ, ಬಡವರ ಮಧ್ಯಮ ವರ್ಗದ ಜನರಿಗೆ ಯೋಜನೆಗಳ ಲಾಭ ತಲುಪಿಸಲಾಗಿದೆ. ಇದೀಗ ಜನತಾ ದರ್ಶನ ಕಾರ್ಯಕ್ರಮ ಮೂಲಕ ಅಧಿಕಾರಿಗಳನ್ನು ಜನರ ಮನೆ ಬಾಗಿಲಿಗೆ ಕರೆದುಕೊಂಡು ಬಂದು ನಿಮ್ಮ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ , ಮಾಜಿ ಜಿಪಂ ಸದಸ್ಯ ವೆಂಕಟೇಶ್, ಉಪತಹಸೀಲ್ದಾರ್ ಹಾಲೇಶಪ್ಪ, ಎಡಿಎಲ್ ಆರ್ ಕಸ್ತೂರಿ, ಸಹಾಯಕ ಸಿಡಿಪಿಒ ನೇತ್ರಾವತಿ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸುನಿತಾ, ಪಿಡಿಒ ನಾಗರಾಜ್, ಆರ್.ಎಫ್.ಒ ದರ್ಶನ್, ಎಇಇ ಪುಟ್ಟಸ್ವಾಮಿ, ಮಾಯಕೊಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ಹನುಮಂತಪ್ಪ, ಗೋಪಾಲ, ರುದ್ರೇಶ್ ಸೇರಿದಂತೆ, ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಫಲಾನುಭವಿಗಳು ಹಾಜರಿದ್ದರು. 

ಸ್ಥಳದಲ್ಲಿಯೇ ಶಾಸಕ ಕೆ.ಎಸ್.ಬಸವಂತಪ್ಪ, ಸಮಸ್ಯೆ ಕೋರಿ ಜನರು 60 ಅರ್ಜಿ ಸಲ್ಲಿಸಿದರು. ಅದರಲ್ಲಿ 30 ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದರು.

error: Content is protected !!