ಹನಗವಾಡಿಯಲ್ಲಿನ ಜನತಾ ದರ್ಶನ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ. ಹರೀಶ್
ಹರಿಹರ, ಸೆ. 26 – ತಾಲ್ಲೂಕಿನ ಹನಗವಾಡಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸೋಮವಾರ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹದಿನೈದು ಅರ್ಜಿಗಳನ್ನು ಸಲ್ಲಿಸಿದರು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜನರ ಮನೆ ಬಾಗಿಲಿಗೆ ಅಧಿಕಾರಿಗಳು ಎಂಬಂತೆ ಜನರ ಸಮಸ್ಯೆಗಳನ್ನು ಆಲಿಸಲು ನಾವು ಮುಂದಾಗಿದ್ದೇವೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಈ ಸಭೆಯ ಗಮನಕ್ಕೆ ತಂದರೆ ಕೂಡಲೇ ಸಂಬಂಧಪಟ್ಟ ಇಲಾಖೆ ಯಿಂದ ಪರಿಹಾರ ಕೊಡಿಸುತ್ತೇವೆ ಎಂದು ತಹಶೀಲ್ದಾರ್ ಪೃಥ್ವಿ ಸಾನಿಕಂ ತಿಳಿಸಿದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಸರ್ಕಾರದ ತಪ್ಪು ನಿರ್ಧಾರಗಳಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ದಾವಣಗೆರೆ ಜಿಲ್ಲೆಯ ರೈತರು ನೀರಿಗಾಗಿ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಒದಗಿಬಂದಿದೆ. ನನಗೆ ಜನತಾ ದರ್ಶನ ಎಷ್ಟು ಮುಖ್ಯವೋ ಭದ್ರಾ ನೀರಿನ ರೈತರ ಹೋರಾಟವೂ ಅಷ್ಟೇ ಮುಖ್ಯ ಎಂದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ಎನ್.ರವಿ ಮಾತನಾಡಿ, ಜನರ ಸಮಸ್ಯೆಗಳಿಗೆ ಸಾಧ್ಯವಾದರೆ ಇಂದೇ ಪರಿಹಾರ ನೀಡುತ್ತೇವೆ, ಇಲ್ಲವಾದಲ್ಲಿ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ಹನಗವಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರವೀಣ್ ಮಾತನಾಡಿ, ಹಲಸಬಾಳು, ಹರಗನಹಳ್ಳಿ, ಹನಗವಾಡಿ, ಬೆಳ್ಳೂಡಿ ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಸಿಟಿ ಬಸ್ ಸೌಲಭ್ಯ, ಗ್ರಾಮದ ಪಶು ಆಸ್ಪತ್ರೆಗೆ ಖಾಯಂ ವೈದ್ಯರು, ಕೈಗಾರಿಕೆ ಅಭಿವೃದ್ಧಿ ಪ್ರದೇಶವನ್ನು ಗ್ರಾ.ಪಂ.ಗೆ ಹಸ್ತಾಂತರಿಸುವುದು, ಗ್ರಾಮ ಠಾಣೆ ವಿಸ್ತರಣೆ ಸೇರಿದಂತೆ ವಿವಿಧ ಸೌಲಭ್ಯಗಳ ಬಗ್ಗೆ ಗಮನ ಸೆಳೆದರು.
ಹನಗವಾಡಿ ಗ್ರಾ.ಪಂ ಅಧ್ಯಕ್ಷ ಬಿ.ಎನ್.ತಿಪ್ಪೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ದ್ರಾಕ್ಷಾಯಣಮ್ಮ, ಸದಸ್ಯರಾದ ಎಸ್.ಹೆಚ್.ಸವಿತಾ, ಲಕ್ಷ್ಮವ್ವ, ಪುಷ್ಪಾ, ಹನುಮಂತಪ್ಪ, ಶಾರದಮ್ಮ, ಸುಜಾತ, ಪಿಡಿಓ ರೇಣುಕಾ ಬಾಯಿ ಮತ್ತಿತರರು ಉಪಸ್ಥಿತರಿದ್ದರು.