ಪುಸ್ತಕ ಓದುವ ಹವ್ಯಾಸ ಬೆಳೆಸುವ ಹೊಣೆಗಾರಿಕೆ ಪೋಷಕರದ್ದು

ಪುಸ್ತಕ ಓದುವ ಹವ್ಯಾಸ ಬೆಳೆಸುವ ಹೊಣೆಗಾರಿಕೆ ಪೋಷಕರದ್ದು

ದಾವಣಗೆರೆ, ಸೆ.25- ಮಕ್ಕಳಲ್ಲಿ ಪುಸ್ತಕ, ದಿನಪತ್ರಿಕೆಗಳ ಓದುವ ಹವ್ಯಾಸ ಮೂಡಿಸಬೇಕಾಗಿರುವುದು ಪ್ರತಿಯೊಬ್ಬ ಪೋಷಕರ ಹೊಣೆಗಾರಿಕೆ ಮತ್ತು ಆದ್ಯ ಕರ್ತವ್ಯ ಎಂದು ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ ತಿಳಿಸಿದರು.

ನಗರದ `ಜಿಲ್ಲೆ ಸಮಾಚಾರ’ ಪತ್ರಿಕಾ ಬಳಗದ ಆಶ್ರಯದಲ್ಲಿ ರೋಟರಿ ಬಾಲಭವನದಲ್ಲಿ ಹಿರಿಯ ಪತ್ರಕರ್ತ ವಿ.ಹನುಮಂತಪ್ಪ ಅವರ ವಿಶಿಷ್ಟ ಲೇಖನಗಳ ಸಂಗ್ರಹದ `ಆಕಾಶಕ್ಕೆ ಏಣಿ’ ಕೃತಿ ಲೋಕಾರ್ಪಣೆ ಗೊಳಿಸಿ ಅವರು ಮಾತನಾಡಿದರು.

ಇಂದಿನ ವಾತಾವರಣದಲ್ಲಿ ಮಕ್ಕಳು ಓದುತ್ತಿ ದ್ದಾರೆ. ಆದರೆ, ಅದು ಮೊಬೈಲ್‌ನಲ್ಲಿ ದಿನಪತ್ರಿಕೆ, ಪುಸ್ತಕ ಮತ್ತಿತರೆ ಸಾಹಿತ್ಯ ಓದುವುದರಿಂದ ಜೀವನಕ್ಕೆ ಆಗುವಂತಹ ಅನುಕೂಲ, ಅನುಭವದ ಬಗ್ಗೆ ಜಾಗೃತಿ, ಅರಿವು ಮೂಡಿಸಿ ಓದುವಿಕೆಯ ಹವ್ಯಾಸ ಬೆಳೆಸುವಂತಾಗಬೇಕು. ಓದಿನಿಂದಲೇ ಉತ್ತಮ ಜೀವನದ ಅನುಭವ ಎಂಬುದನ್ನು ಕಟ್ಟಿಕೊಡಬೇಕು ಎಂದು ಆಶಿಸಿದರು.

ಆಧುನಿಕತೆಯ ಭರಾಟೆಯಲ್ಲಿ ಮಕ್ಕಳ ಕೈಯಲ್ಲಿ ಮೊಬೈಲ್ ಎನ್ನುವುದು ಅತೀ ಸಾಮಾನ್ಯ ಎನ್ನುವಂತಾಗುತ್ತಿದೆ. ಮೊಬೈಲ್‌ ನಲ್ಲೇ ಮಗ್ನರಾಗುತ್ತಿರುವ ಮಕ್ಕಳು, ಪೋಷಕರು ಏನು ಮಾಡುತ್ತಾರೆ. ಏನನ್ನು ಅನುಸರಣೆ ಮಾಡಬೇಕು ಎಂಬುದರಿಂದಲೇ ದೂರವಾಗು ತ್ತಿದೆ. ಹಾಗಾಗಿ ಮಕ್ಕಳಲ್ಲಿ ಓದುವಿಕೆಯ ಬಗ್ಗೆ ಆಸಕ್ತಿ ಬೆಳೆಸಬೇಕು ಎಂದು ತಿಳಿಸಿದರು.

ಹಿಂದೆ ಒಂದೇ ಮನೆಯಲ್ಲೇ ಹತ್ತಾರು ಜನರು ಇರುತ್ತಿದ್ದರು. ಆಗ ಹೊಂದಾಣಿಕೆ, ಸಹನೆ, ಸಂಯಮ, ವಿವೇಕ ಎಲ್ಲವೂ ಕಂಡು ಬರುತ್ತಿತ್ತು. ಈಗ ಗಂಡ-ಹೆಂಡತಿ ಒಂದಿಬ್ಬರು ಮಕ್ಕಳ ಕುಟುಂಬಗಳಲ್ಲೂ ವಿಘಟನೆಯೇ ಹೆಚ್ಚಾಗಿ ಕಂಡು ಬರುತ್ತಿದೆ. ಮಕ್ಕಳಲ್ಲೇ ನನ್ನದು ಎಂಬ ಭಾವನೆ ಬಲವಾಗಿ ಬೇರೂರುತ್ತಿದೆ. ತಂದೆ-ತಾಯಿಗಳೇ ತಮ್ಮ ವಸ್ತುಗಳನ್ನು ಬಳಕೆ ಮಾಡುವುದನ್ನು ಇಷ್ಟಪಡದಂತಹ ಆತಂಕಕಾರಿ ವಾತಾವರಣ ನಿರ್ಮಾಣವಾಗುತ್ತಿದೆ. ಆಧುನಿಕ ತಂತ್ರ ಜ್ಞಾನ ಬಳಕೆ ಗೊತ್ತಿಲ್ಲದ ಕಾರಣಕ್ಕೆ ದೊಡ್ಡವರೇ ಮಕ್ಕಳ ಮುಂದೆ ದಡ್ಡರಾಗಿ ಕಾಣುತ್ತಿದ್ದಾರೆ. ಎಲ್ಲದರೊಂದಿಗೆ ಹಿರಿಯರೂ  ಸಹ ಒಗ್ಗಿಕೊಳ್ಳಬೇಕು ಎಂದು ತಿಳಿಸಿದರು.

ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಪಿ.ಆರ್. ತಿಪ್ಪೇಸ್ವಾಮಿ ಮಾತನಾಡಿ, ಗ್ರಂಥಾಲಯ ಇಲಾಖೆಯಿಂದ 40 ಪುಸ್ತಕಗಳನ್ನು ಖರೀದಿ ಮಾಡುವ ಮೂಲಕ ಲೇಖಕರು, ಪ್ರಕಾಶನಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು. ವಿ. ಹನುಮಂತಪ್ಪ ಮಾತನಾಡಿ, ಓದುವ ಮತ್ತು ಬರೆಯುವ ಹವ್ಯಾಸವನ್ನು ದೂರ ಮಾಡದೇ ಹತ್ತಿರಕ್ಕೆ ಕರೆದುಕೊಳ್ಳಬೇಕು. ಪುಸ್ತಕಗಳನ್ನು ಕೊಂಡು ಓದುವ ಸಂಸ್ಕೃತಿ ಹೆಚ್ಚಾಗಬೇಕು ಎಂದರು.

ಹಿರಿಯ ನ್ಯಾಯವಾದಿ ರಾಮಚಂದ್ರ ಕಲಾಲ್ ಅಧ್ಯಕ್ಷತೆ ವಹಿಸಿದ್ದರು. ಅನ್‌ಮೋಲ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಸಿ.ಜಿ. ದಿನೇಶ್, ಪತ್ರಿಕಾ ಬಳಗದ ಅಧ್ಯಕ್ಷೆ ಸತ್ಯಭಾಮ ಮಂಜುನಾಥ್, ಸಾಲಿಗ್ರಾಮ ಗಣೇಶ್ ಶೆಣೈ, ಎಚ್. ಭಾರತಿ, ಎಚ್. ವೆಂಕಟೇಶ, ಎನ್. ಕೆ. ಕೊಟ್ರೇಶ್‌ ಇತರರು ಇದ್ದರು. ಡಾ.ಸಿ.ಕೆ. ಆನಂದತೀರ್ಥಾಚಾರ್ ಸ್ವಾಗತಿಸಿದರು. ಎನ್.ಟಿ. ಎರ್ರಿಸ್ವಾಮಿ ವಂದಿಸಿದರು.  

error: Content is protected !!