ಗೋಲ್ಡನ್‌ ಹ್ಯಾಚರೀಸ್‌ ವಿರುದ್ಧ ಕ್ರಮಕ್ಕೆ ಒತ್ತಾಯ

ಗೋಲ್ಡನ್‌ ಹ್ಯಾಚರೀಸ್‌ ವಿರುದ್ಧ ಕ್ರಮಕ್ಕೆ ಒತ್ತಾಯ

ರಾಣೇಬೆನ್ನೂರು, ಸೆ. 25 – ನೂತನವಾಗಿ ನಿರ್ಮಿಸಲಾಗುತ್ತಿರುವ ತಾಲ್ಲೂಕಿನ ಹನುಮನಹಳ್ಳಿ ಬಳಿಯ ಶ್ರೀ ಗೋಲ್ಡನ್ ಹ್ಯಾಚರೀಸ್ ಪ್ರೈವೇಟ್ ಲಿಮಿಟೆಡ್ ನವರು ಸರ್ಕಾರದ ಯಾವುದೇ ರೀತಿಯ ಪರವಾನಿಗೆ ಪಡೆಯದೇ ಕಾನೂನು ಬಾಹಿರವಾಗಿ ಕಾರ್ಯಾರಂಭ ಮಾಡಿದ್ದು ಈಗ ಕೆಲಸ ನಿಲ್ಲಿಸಿ ಒಂದು ವಾರದೊಳಗೆ  ಅನುಮತಿ ಪಡೆಯಬೇಕು ಎಂದು ತಹಶೀಲ್ದಾರ್‌ ಹಾಗೂ ಡಿವೈಎಸ್‌ಪಿ ಅವರು ಫ್ಯಾಕ್ಟರಿ ಮ್ಯಾನೇಜರ್ ಲೋಕೇಶ್‌ ಅವರಿಗೆ ಮೌಖಿಕ ಆದೇಶ ನೀಡಿದರೆಂದು ಗೊತ್ತಾಗಿದೆ.

ನೂತನವಾಗಿ ಪ್ರಾರಂಭಿಸಲಾಗುತ್ತಿರುವ ತಾಲ್ಲೂಕಿನ ಹನುಮನಹಳ್ಳಿ ಬಳಿಯ ಶ್ರೀ ಗೋಲ್ಡನ್ ಹ್ಯಾಚರಿಸ್ ಪ್ರೈವೇಟ್ ಲಿಮಿಟೆಡ್‌ನವರು ಸ್ಥಳೀಯರಿಗೆ ಕೆಲಸ ಕೊಡದೆ ಬಿಹಾರ ರಾಜ್ಯದಿಂದ ಕಾರ್ಮಿಕರನ್ನು ಕರೆತಂದಿರುವುದನ್ನು ವಿರೋಧಿಸಿ ಸುತ್ತಲಿನ ಗ್ರಾಮಗಳ ಜನರು ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಸಂದರ್ಭದಲ್ಲಿ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿದ್ದರೆಂದು ಹೇಳಲಾಗಿದೆ.

ಈ ಭಾಗದ ಇಟಗಿ, ಹನುಮನಹಳ್ಳಿ, ತರೇದಹಳ್ಳಿ, ಮುಷ್ಟೂರು, ಮುದೇನೂರು, ನಾಗೇನಹಳ್ಳಿ, ಮಲಕನಹಳ್ಳಿ, ನಂದಿಹಳ್ಳಿ, ಲಿಂಗದಹಳ್ಳಿ ಮುಂತಾದ ಸುಮಾರು ಎರಡು ನೂರರಷ್ಟು ಮಹಿಳೆಯರು, ನೂರಾರು ಪುರುಷರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ರೈತ ನಾಯಕರಾದ ರವೀಂದ್ರಗೌಡ ಪಾಟೀಲ, ಹೊನ್ನಪ್ಪ ಮರಿಯಮ್ಮನವರ, ಈರಣ್ಣ ಹಲಗೇರಿ, ಬಸವರಾಜ ಕೊಂಗಿ, ಶೇಖಪ್ಪ ಬೇಡರ, ನಿತ್ಯಾನಂದ ಕುಂದಾಪೂರ, ರೇಣುಕಾ ಲಮಾಣಿ, ಕವಿತಾ ಕೂಸನೂರ, ಶೈಲಾ ಕೊಟ್ಟದ, ಪರವೀಜ್ ಬಾನು, ಲಕ್ಷ್ಮಿ ಮತ್ತಿತರರು ಮುಂಚೂಣಿಯಲ್ಲಿದ್ದರು.

ಹನುಮನಹಳ್ಳಿಯ ಬಸ್ ನಿಲ್ದಾಣದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎರಡು ಕಿಲೋಮೀಟರ್ ದೂರದಲ್ಲಿರುವ  ಫ್ಯಾಕ್ಟರಿ ಸ್ಥಳಕ್ಕೆ ಬಂದು ಮುತ್ತಿಗೆ ಹಾಕುವದನ್ನು ತಡೆದ ಪೊಲೀಸರ ವರ್ತನೆಯನ್ನು ವಿರೋಧಿಸಿದರು. 

ಅಧಿಕಾರಿ ವರ್ಗ ಹಳ್ಳಿಗಳ ಜನರ ಪರ ನಿಲ್ಲದೆ ಶ್ರೀಮಂತರ, ಉದ್ಯಮಿಗಳ ಪರ ಇರುವುದು ಖಂಡನೀಯ. ಸ್ಥಳೀಯರಿಗೆ ಕೆಲಸ ಕೊಡದಿದ್ದರೆ ಇಲ್ಲಿಂದ ತೆರಳಲಿ, ನಮಗೆ ಅನ್ಯಾಯ ಮಾಡಿದರೆ ಇವರಿಗೂ ಮೈಕೋ ಪರಿಸ್ಥಿತಿ ಬರಲಿದೆ ಎಂದು ರವೀಂದ್ರಗೌಡ ರಸ್ತೆಯಲ್ಲಿಯೇ ಸಭೆ ನಡೆಸಿ, ಪ್ರತಿಭಟಿಸಿದರು.

error: Content is protected !!