ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಸರ್ವೇಗೆ ಒತ್ತಾಯ

ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಸರ್ವೇಗೆ ಒತ್ತಾಯ

ಶಾಸಕ ಬಸವಂತಪ್ಪ 

ದಾವಣಗೆರೆ, ಸೆ. 25 – ರಾಜ್ಯದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಇದ್ದರೂ ಕೂಡ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ಕೊಡುವ ಕೆಲಸ ನಡೆಯುತ್ತಿದೆ. ಕೂಡಲೇ ಪುನಃ ಸರ್ವೇ ಮಾಡಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ಕಲ್ಪಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಮಾಯಕೊಂಡ ಕೆ.ಎಸ್.ಬಸವಂತಪ್ಪ ಸಮಾಜ ಕಲ್ಯಾಣ ಇಲಾಖೆ ಸಚಿವರ ಗಮನಕ್ಕೆ ತಂದರು.

ಬೆಂಗಳೂರು ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹಾದೇವಪ್ಪ ಅಧ್ಯಕ್ಷತೆಯಲ್ಲಿ ನಡೆದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ನೇಮಕಾತಿ ನಿಷೇಧ ಮತ್ತು ಅವರ ಪುನವರ್ಸತಿ ಅಧಿನಿಯಮ-2023ರ ಸೆಕ್ಸನ್ 26 ರನ್ವಯ ರಾಜ್ಯ ಮೇಲ್ವಿಚಾರಣ ಸಮಿತಿಯ 6ನೇ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಿದ್ದು,  ಅವರನ್ನು ಗುರುತಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಅವರು ಶೇ.100 ರಷ್ಟು ಕೆಲಸ ಮಾಡದಿದ್ದರೆ ಅವರನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಬೇಡ. ಆದರೆ ಅವರು ಕೆಲಸ ಮಾಡುತ್ತಿದ್ದರೂ, ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳು ಇಲ್ಲ ಎಂದು ತಪ್ಪು ವರದಿ ಕೊಡುವುದು ಸರಿಯಲ್ಲ. ಕೂಡಲೇ ಸರ್ಕಾರ ಮತ್ತೊಮ್ಮೆ ಸರ್ವೇ ಮಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.

ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳನ್ನು ಆರ್ಥಿಕವಾಗಿ ಸಬಲೀಕರಣ ಮಾಡಲು ಅವರ ಕುಟುಂಬಕ್ಕೆ 5 ಲಕ್ಷ ರೂ.ವರೆಗೆ ಉಚಿತ ಸಹಾಯಧನ ನೀಡಬೇಕು. ವಸತಿ ನಿಯಮ ಪ್ರಕಾರ ಅವರು ಮನೆ ಕಟ್ಟಿಸಿಕೊಳ್ಳಲು ಸಾಮಾನ್ಯರಿಗೆ 1 ಲಕ್ಷ, ಎಸ್ಸಿ-ಎಸ್ಟಿಗೆ 1.50 ಲಕ್ಷ ರೂ. ಇದೆ. ಆದರೆ ಇದು ಅವೈಜ್ಞಾನಿಕವಾಗಿದ್ದು, ಕೂಡಲೇ ವಸತಿ ನಿಯಮ ಬದಲಾಯಿಸಿ 5 ಲಕ್ಷ ರೂ.ನಿಂದ 8 ಲಕ್ಷ ರೂ.ವರೆಗೆ ಕೊಡಬೇಕು. ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಸೌಲಭ್ಯ ನೀಡಬೇಕು. ಜೊತೆಗೆ ಮೊರಾರ್ಜಿ, ನವೋದಯ ಸೇರಿದಂತೆ ವಸತಿಯುತ ಶಾಲೆಗಳಿಗೆ ಉಚಿತ ಪ್ರವೇಶ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಎಚ್.ಸಿ. ಮಹಾದೇವಪ್ಪ, ಪ್ರಿಯಾಂಕ ಖರ್ಗೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇದ್ದರು.

error: Content is protected !!