ನಂದಿ ಸೌಹಾರ್ದ ಸಹಕಾರಿಗೆ 32.99 ಲಕ್ಷ ರೂ. ಲಾಭ

ನಂದಿ ಸೌಹಾರ್ದ ಸಹಕಾರಿಗೆ 32.99 ಲಕ್ಷ ರೂ. ಲಾಭ

ವಾರ್ಷಿಕ ಮಹಾಸಭೆಯಲ್ಲಿ ಸಹಕಾರಿ ಅಧ್ಯಕ್ಷ ಹೆಚ್.ಟಿ.ಶಾಂತನಗೌಡ್ರು ಹರ್ಷ

ಮಲೇಬೆನ್ನೂರು, ಸೆ.25- ಇಲ್ಲಿನ ಪ್ರತಿಷ್ಠಿತ ಶ್ರೀ ನಂದಿ ಸೌಹಾರ್ದ ಸಹಕಾರಿಗೆ 2023ರ ಮಾರ್ಚ್ ಅಂತ್ಯಕ್ಕೆ 32,99,981 ರೂ. ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಲು ಹರ್ಷಿತನಾಗಿದ್ದೇನೆಂದು ಸಹಕಾರಿ ಅಧ್ಯಕ್ಷ ಹಳ್ಳಿಹಾಳ್ ಹೆಚ್.ಟಿ.ಶಾಂತನಗೌಡ್ರು ತಿಳಿಸಿದರು.

ಅವರು, ಭಾನುವಾರ ಇಲ್ಲಿನ ಜಿಗಳಿ ರಸ್ತೆಯಲ್ಲಿರುವ ರಾಜರಾಜೇಶ್ವರ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ನಂದಿ ಸೌಹಾರ್ದ ಸಹಕಾರಿ ನಿಯಮಿತದ 2022-23ನೇ ಸಾಲಿನ ಸರ್ವ ಸದಸ್ಯರ 4ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ಸಹಕಾರಿಯು 1,01,46,300 ರೂ. ಷೇರು ಬಂಡವಾಳ ಮತ್ತು 18,42,54,434 ರೂ. ದುಡಿಯುವ ಬಂಡವಾಳ ಹಾಗೂ 5,58,73,619 ಠೇವಣಿಗಳನ್ನು ಹೊಂದಿರುತ್ತದೆ. ಸದಸ್ಯರಿಗೆ 12,27,05,236 ರೂ. ಸಾಲ ಸೌಲಭ್ಯ ಕಲ್ಪಿಸಿದ್ದು, 3,43,73,897 ರೂ. ನಂದಿ ನಿತ್ಯ ನಿಧಿ ಹಾಗೂ 89,99,496 ರೂ. ಕಾಯ್ದಿಟ್ಟ ನಿಧಿಯಾಗಿರುತ್ತದೆ.

ಈ ವರ್ಷ ಸದಸ್ಯರಿಗೆ ನಿವ್ವಳ ಲಾಭ ಶೇ.12 ರಷ್ಟು ಡಿವೆಡೆಂಡ್ ನೀಡಲು ತೀರ್ಮಾನಿಸಿದ್ದು, ಸದಸ್ಯರ ಮರಣೋತ್ತರ ನಿಧಿಯನ್ನು 2 ಸಾವಿರ ರೂ.ಗಳಿಂದ 5 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಿದ್ದೇವೆಂದು ಶಾಂತನಗೌಡ್ರು ಘೋಷಿಸಿದರು.

ಸಹಕಾರಿಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ನಿರ್ದೇಶಕ ಜಿಗಳಿ ಇಂದೂಧರ್ ಮಾತನಾಡಿ, ಈಗಾಗಲೇ ನಂದಿಗುಡಿ ಮತ್ತು ಹಾನಗಲ್ ತಾಲ್ಲೂಕಿನ ತಿಳವಳ್ಳಿಯಲ್ಲಿ ಶಾಖೆ ಹೊಂದಿರುವ ನಮ್ಮ ಸಹಕಾರಿಯು ಸದಸ್ಯರ ಏಳಿಗೆಗೆ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಚಿಂತನೆ ಹೊಂದಿದ್ದೇವೆ ಎಂದರು.

ನಂದಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಬಿ.ವೀರಯ್ಯ ಮಾತನಾಡಿ, ಗೊತ್ತು-ಗುರಿಯಿಲ್ಲದ ಫೈನಾನ್ಸ್ ಬ್ಯಾಂಕುಗಳಲ್ಲಿ ಠೇವಣಿ ಇಡುವುದು ಸೂಕ್ತವಲ್ಲ, ನಮ್ಮ ಸಹಕಾರಿಯಲ್ಲಿ ಹೆಚ್ಚು ದುಡಿಯುವ ಬಂಡವಾಳವಿದ್ದರೂ, ಕಡಿಮೆ ಲಾಭ ಏಕೆ ಬಂದಿದೆ ? ಎಂದು ಪ್ರಶ್ನಿಸಿ, ಖರ್ಚುಗಳನ್ನು ಕಡಿಮೆ ಮಾಡಿ ಎಂದರು.

ಹೊನ್ನಾಳಿಯ ಹೆಚ್.ಎ.ಹುಡೇದ್,   ಸಂಘದ ಮಾಜಿ ಅಧ್ಯಕ್ಷ ಜಿಗಳಿಯ ಜಿ.ಎಂ.ವಿಜಯಕುಮಾರ್ ಮಾತನಾಡಿದರು.

ಸಹಕಾರಿ ಉಪಾಧ್ಯಕ್ಷ ಜಿಗಳಿಯ ಎಂ.ವಿ.ನಾಗರಾಜ್ ಸ್ವಾಗತಿಸಿದರು.  ಅಕೌಂಟೆಂಟ್ ಎಂ.ಬಿ.ನಾಗನಗೌಡ ಅವರು ಹಿಂದಿನ ಸಭೆಯ ನಡವಳಿಕೆಗಳನ್ನೂ ಓದಿ ದಾಖಲು ಮಾಡಿದರು. ಅನುಪಾಲನಾ ವರದಿಯನ್ನು ಸಹಕಾರಿ ಕಾರ್ಯದರ್ಶಿ ಹೆಚ್.ಎಂ.ಬಸವರಾಜ್ ಅವರು ಸಭೆಯ ಗಮನಕ್ಕೆ ತಂದು ಒಪ್ಪಿಗೆ ಪಡೆದರು.

ಸಹಕಾರಿ ನಿರ್ದೇಶಕ ಕೆ.ಹೆಚ್.ಆಂಜನೇಯ ಪಾಟೀಲ್ ಅವರು, ಲಾಭಾಂಶ ಹಂಚಿಕೆ ವಿಚಾರವನ್ನು ಮತ್ತು ನಿರ್ದೇಶಕ ಸಂತೋಷ್ ಪಾಳೇದ್ ಅವರು, ಮುಂಗಡ ಪತ್ರಕ್ಕೆ ಸಭೆಯ ಒಪ್ಪಿಗೆ ಪಡೆದುಕೊಂಡರು.

ಈ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಹಕಾರಿ ನಿರ್ದೇಶಕರಾದ ಹಳ್ಳಿಹಾಳ್ ಹೆಚ್.ವೀರನಗೌಡ, ಹೆಚ್.ಟಿ.ಪರಮೇಶ್ವರಪ್ಪ, ಜಿಗಳಿಯ ಗೌಡ್ರ ಬಸವರಾಜಪ್ಪ, ಶ್ರೀಮತಿ ಶೋಭಾ ಬಿ.ಜಿ.ಪಾಲಾಕ್ಷಪ್ಪ, ಶ್ರೀಮತಿ ಭಾಗ್ಯ ಉದಯಕುಮಾರ್, ಕೊಕ್ಕನೂರಿನ ಬಿ.ಹೆಚ್. ರವಿ, ಟಿ.ರಾಮಚಂದ್ರಪ್ಪ, ಆರ್.ನಾಗರಾಜ್, ಎ.ಕೆ.ತಿಪ್ಪೇಶ್, ಮಲೇಬೆನ್ನೂರಿನ ಎ.ಆರೀಫ್ ಅಲಿ ವೇದಿಕೆಯಲ್ಲಿದ್ದರು.

ಕ್ಯಾಷಿಯರ್ ಬಿ.ಜಿ.ರಂಗನಾಥ್, ಅಕೌಂಟೆಂಟ್ ಸೂಮಾ ನಿರೂಪಿಸಿದರು. ಕ್ಯಾಷಿಯರ್ ಹೆಚ್.ರುದ್ರಗೌಡ ವಂದಿಸಿದರು.

error: Content is protected !!