ಭದ್ರಾ ಐಸಿಸಿಯಿಂದ ನೀರಿನ ನಿರ್ವಹಣೆ ಕುರಿತು ಮಧ್ಯಂತರ ತೀರ್ಮಾನ
ಸೆ.16ರಿಂದ 10 ದಿನ ನೀರು ಬಂದ್
ಭದ್ರಾ ಐಸಿಸಿಯ ತೀರ್ಮಾನ ಏಕಪಕ್ಷೀಯ ಮತ್ತು ಅವೈಜ್ಞಾನಿಕವಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇವೆ.
– ಶಾಸಕ ಬಿ.ಪಿ. ಹರೀಶ್, ವೈ. ದ್ಯಾವಪ್ಪ ರೆಡ್ಡಿ
ಜಿಗಳಿ ಪ್ರಕಾಶ್
ಮಲೇಬೆನ್ನೂರು, ಸೆ. 15- ಭದ್ರಾ ಜಲಾಶಯದಿಂದ ಅಚ್ಚುಕಟ್ಟಿನ ಮುಂಗಾರು ಬೆಳೆಗಳಿಗೆ ನಾಲೆಗಳಲ್ಲಿ ಹರಿಸುತ್ತಿದ್ದ ನೀರನ್ನು ಆಫ್ ಅಂಡ್ ಆನ್ ಪದ್ಧತಿಯಲ್ಲಿ ಹರಿಸಲು ತೀರ್ಮಾನಿಸಲಾಗಿದೆ ಎಂದು ಭದ್ರಾ ಅಧೀಕ್ಷಕ ಇಂಜಿನಿಯರ್ ಸುಜಾತ ಅವರು ಶುಕ್ರವಾರ ಅಧಿಸೂಚನೆ ಹೊರಡಿಸಿದ್ದಾರೆ.
ದಿನಾಂಕ 06-09-2023 ರಂದು ಮಲವಗೊಪ್ಪದಲ್ಲಿರುವ ಭದ್ರಾ ಕಾಡಾ ಕಛೇರಿಯಲ್ಲಿ ಭದ್ರಾ ಕಾಡಾ ಅಧ್ಯಕ್ಷರೂ ಆದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ 83ನೇ ಭದ್ರಾ ಐಸಿಸಿ ಸಭೆಯ ತೀರ್ಮಾನದಂತೆ 2023-24 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಮಧ್ಯಂತರ ನಿಲುಗಡೆಯೊಂದಿಗೆ ಸರದಿಯಲ್ಲಿ ನಾಲೆಗಳಲ್ಲಿ ನೀರು ಹರಿಸಲಾಗುವುದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನೀರಿನ ಹೊಸ ವೇಳಾಪಟ್ಟಿ : ಬಲದಂಡೆ ನಾಲೆಗೆ ದಿನಾಂಕ 16-09-2023 ರಿಂದ 25-09-2023 ರವರೆಗೆ 10 ದಿನಸ ನೀರು ಬಂದ್ ಮಾಡಿ, ದಿನಾಂಕ 26-09-2023 ರಿಂದ 15-10-2023 ರವರೆಗೆ 20 ದಿವಸ ನೀರು ಹರಿಸಲಾಗುವದು. ಮತ್ತೆ ದಿನಾಂಕ 16.10.2023 ರಿಂದ 25.10.2023ರವರೆಗೆ 10 ದಿವಸ ನೀರು ಬಂದ್ ಮಾಡಿ, 26.10.2023 ರಿಂದ 17.11.2023ರವರೆಗೆ 23 ದಿವಸ ನೀರು ಹರಿಸಲಾಗುವುದು. ಈ ವೇಳಾಪಟ್ಟಿ ಪ್ರಕಾರ ಬಲದಂಡೆ ನಾಲೆಗೆ ಬಿಟ್ಟು 20 ದಿವಸ ಬಂದ್ ಮಾಡಿ, 43 ದಿವಸ ಮಾತ್ರ ನೀರು ಹರಿಸಲಾಗುವುದು.
ಅದೇ ರೀತಿ ಎಡದಂತೆ ನಾಲೆಗೂ ನೀರಿನ ಹೊಸ ವೇಳಾಪಟ್ಟಿ ಮಾಡಲಾಗಿದ್ದು, ಈಗಾಗಲೇ ಹತ್ತು ದಿನ ನಾಲೆಯಲ್ಲಿ ನೀರು ಬಂದ್ ಮಾಡಿರುವುದರಿಂದ ದಿನಾಂಕ 17.9.2023ರಿಂದ 01.10.23ರವರೆಗೆ 15 ದಿನ ನೀರು ಹರಿಸಲಾಗುವುದು.
ದಿನಾಂಕ 2.10.23 ರಿಂದ 11.10.23 ರವರೆಗೆ ಹತ್ತು ದಿನ ನೀರು ಬಂದ್ ಮಾಡಿ ದಿನಾಂಕ 12.10.23ರಿಂದ 26.10.23ರವರೆಗೆ 15 ದಿನ ನೀರು ಹರಿಸಲಾಗುವುದು.
ದಿನಾಂಕ 27.10.23ರಿಂದ 5.11.23ರವರೆಗೆ ಮತ್ತೆ 10 ದಿನ ನೀರು ಬಂದ್ ಮಾಡಿ ದಿನಾಂಕ 6.11.23ರಿಂದ 17.11.23ರವರೆಗೆ 12 ದಿನ ನೀರು ಹರಿಸಲಾಗುವುದು. ಈ ಪ್ರಕಾರ ಎಡದಂಡೆ ನಾಲೆಗೆ 30 ದಿನ ನೀರು ಬಂದ್ ಮಾಡಿ 42 ದಿನ ನೀರು ಹರಿಸಲಾಗುವುದು.
ಆಕ್ರೋಶ: ದಾವಣಗೆರೆ ಜಿಲ್ಲೆಯ ಜನ ಪ್ರತಿನಿಧಿಗಳು ಹಾಗೂ ರೈತ ಮುಖಂಡರ ಜೊತೆ ಚರ್ಚಿಸದೆ ಏಕಾಏಕಿ ಭದ್ರಾ ಜಲಾಶಯದಿಂದ ನಾಲೆಗೆ ಹರಿಸುವ ನೀರನ್ನು ಆಫ್ ಅಂಡ್ ಆನ್ ಪದ್ಧತಿಯಲ್ಲಿ ಹರಿಸುವ ತೀರ್ಮಾನವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಶಾಸಕ ಬಿ.ಪಿ. ಹರೀಶ್ ಜನತಾವಾಣಿಗೆ ತಿಳಿಸಿದ್ದಾರೆ.
ಈ ಅವೈಜ್ಞಾನಿಕ ತೀರ್ಮಾನ ಕುರಿತು ಶನಿವಾರ ಜಿಲ್ಲಾ ಸಚಿವರು, ಸಂಸದರು, ಶಾಸಕರು ಹಾಗೂ ರೈತರೊಂದಿಗೆ ಚರ್ಚಿಸಿ, ನಮ್ಮ ಮುಂದಿನ ತೀರ್ಮಾನ ಪ್ರಕಟಿಸುತ್ತೇವೆ ಎಂದು ಹರೀಶ್ ಹೇಳಿದರು.
ತೀರ್ಮಾನ ಪುನರ್ ಪರಿಶೀಲನೆಗೆ ಆಗ್ರಹ : ಭದ್ರಾ ನಾಲೆಗಳಲ್ಲಿ 100 ದಿನ ಸತತವಾಗಿ ನೀರು ಹರಿಸುತ್ತೇವೆ ಎಂಬ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಅಚ್ಚುಕಟ್ಟಿನ ರೈತರು ಭತ್ತದ ನಾಟಿ ಮಾಡಿದ್ದಾರೆ. ಈಗ ದಿಢೀರ್‌ನೆ ನಾಲೆಯಲ್ಲಿ 10 ದಿವಸ ನೀರು ಬಂದ್ ಮಾಡುವ ತೀರ್ಮಾನ ಮಾಡಿರುವುದರಿಂದ ಭತ್ತ ನಾಟಿ ಮಾಡಿದ ರೈತರಿಗೆ ಬಹಳ ತೊಂದರೆ ಆಗುತ್ತದೆ ಎಂದು ಭದ್ರಾ ಅಚ್ಚುಕಟ್ಟು ವ್ಯಾಪ್ತಿ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ ಹೇಳಿದ್ದಾರೆ.
`ಜನತಾವಾಣಿ’ಯೊಂದಿಗೆ ಮಾತನಾಡಿದ ಅವರು, ಭದ್ರಾ ಅಧೀಕ್ಷಕ ಇಂಜಿನಿಯರ್ ಅವರು ಶುಕ್ರವಾರ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ದಿನಾಂಕ 06-09-2023 ರಂದು ನಡೆದ ಭದ್ರಾ ಐಸಿಸಿ ಸಭೆಯ ತೀರ್ಮಾನದಂತೆ ಆಫ್ ಅಂಡ್ ಆನ್ ಪದ್ಧತಿಯಲ್ಲಿ ನೀರು ಹರಿಸಲಾಗುವುದೆಂದು ಹೇಳಿದ್ದಾರೆ.
ಅವತ್ತಿನ ಸಭೆಯಲ್ಲಿ ನಾವು ಕೂಡಾ ಇದ್ದೆವು. ಈ ರೀತಿಯ ಯಾವುದೇ ತೀರ್ಮಾನ ಅಂದಿನ ಸಭೆಯಲ್ಲಿ ಆಗಿಲ್ಲ, ನೀರಾವರಿ ಸಚಿವರ ಜೊತೆ ಚರ್ಚಿಸಿ, ತೀರ್ಮಾನ ಮಾಡುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದರು.
ಆದರೀಗ ಏಕಾಏಕಿ ಈ ತೀರ್ಮಾನ ಕೈಗೊಂಡಿರುವುದು ಏಕ ಪಕ್ಷೀಯ ಹಾಗೂ ಅವೈಜ್ಞಾನಿಕವಾಗಿದ್ದು, ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಮತ್ತು ಈ ತೀರ್ಮಾನವನ್ನು ಪುನರ್ ಪರಿಶೀಲಿಸುವಂತೆ ವೈ. ದ್ಯಾವಪ್ಪರೆಡ್ಡಿ ಆಗ್ರಹಿಸಿದ್ದಾರೆ.
ಜಲಾಶಯದಲ್ಲಿ ನೀರು ಕಡಿಮೆ ಇರುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಈಗಿನ ತೀರ್ಮಾನದಂತೆ ಬಲ ಮತ್ತು ಎಡದಂಡೆ ನಾಲೆಗಳಲ್ಲಿ 20 ದಿವಸ ನೀರು ಬಂದ್ ಮಾಡುವುದರಿಂದ ಸುಮಾರು 60 ಸಾವಿರ ಕ್ಯೂಸೆಕ್ಸ್ ನೀರನ್ನು ಉಳಿಸಬಹುದು. ಆದರೆ ಇದರಿಂದ ಭತ್ತದ ನಾಟಿ ಮಾಡಿರುವ ರೈತರಿಗೆ ಬಹಳ ತೊಂದರೆ ಆಗುತ್ತದೆ.
ಆದ್ದರಿಂದ ಬಲದಂಡೆ ನಾಲೆಗೆ 20 ದಿವಸ ನೀರು ಬಂದ್ ಮಾಡುವ ಬದಲಾಗಿ ಜಲಾಶಯದಿಂದ ನಾಲೆಗೆ ಬಿಡುಗಡೆ ಮಾಡುವ ನೀರಿನ ಪ್ರಮಾಣವನ್ನು 2650 ಕ್ಯೂಸೆಕ್ಸ್ ಬದಲಾಗಿ 2 ಸಾವಿರ ಕ್ಯೂಸೆಕ್ಸ್ ನೀರು ಹರಿಸುವ ತೀರ್ಮಾನ ಮಾಡಬೇಕು. ಇದರಿಂದ 48,750 ಕ್ಯೂಸೆಕ್ಸ್ ನೀರು ಉಳಿತಾಯವಾಗುತ್ತದೆ.
ಎಡದಂಡೆಯಲ್ಲೂ 180 ಕ್ಯೂಸೆಕ್ಸ್ ನೀರು ಕಡಿಮೆ ಮಾಡಿದರೆ ಸುಮಾರು 10 ಸಾವಿರ ಕ್ಯೂಸೆಕ್ಸ್ ನೀರು ಉಳಿತಾಯ ಆಗುತ್ತದೆ.
ಇದರಿಂದ ರೈತರಿಗೂ ತೊಂದರೆ ತಪ್ಪಿಸಬಹುದು ಮತ್ತು ನೀರನ್ನೂ ಉಳಿತಾಯ ಮಾಡಬಹುದೆಂದು ವೈ. ದ್ಯಾವಪ್ಪ ರೆಡ್ಡಿ ಭದ್ರಾ ಐಸಿಸಿ ಸಮಿತಿಗೆ ಸಲಹೆ ನೀಡಿದ್ದಾರೆ.