ಕಳೆದ ವರ್ಷ ಅತಿವೃಷ್ಟಿ, ಈ ವರ್ಷ ಅನಾವೃಷ್ಟಿ, ಕಾಳಜಿ ಇಲ್ಲದ ಸರ್ಕಾರ

ಕಳೆದ ವರ್ಷ ಅತಿವೃಷ್ಟಿ, ಈ ವರ್ಷ ಅನಾವೃಷ್ಟಿ, ಕಾಳಜಿ ಇಲ್ಲದ ಸರ್ಕಾರ

ರೈತ ಸಂಘದ ಅಧ್ಯಕ್ಷ ಅರಬಗಟ್ಟೆ ಕೆ.ಸಿ.ಬಸಪ್ಪ ಅಸಮಾಧಾನ

ಹೊನ್ನಾಳಿಯಲ್ಲಿ ಇಂದು ಮತ್ತು ನ್ಯಾಮತಿಯಲ್ಲಿ ನಾಳೆ ರೈತರ ಪ್ರತಿಭಟನೆ

ಹೊನ್ನಾಳಿ,ಸೆ.12-  ಕಳೆದ ವರ್ಷ ಅತಿವೃಷ್ಟಿ, ಈ ವರ್ಷ ಅನಾವೃಷ್ಟಿಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ, ಸರ್ಕಾರ ರೈತರ ಬಗ್ಗೆ ಕಾಳಜಿ  ವಹಿಸುತ್ತಿಲ್ಲ ಎಂದು ರೈತ ಸಂಘದ ಅಧ್ಯಕ್ಷ ಅರಬಗಟ್ಟೆ ಕೆ.ಸಿ.ಬಸಪ್ಪ  ಅಸಮಾಧಾನ ವ್ಯಕ್ತಪಡಿಸಿದರು.   

ಈ ಸಂಬಂಧ ಬುಧವಾರ ಬೃಹತ್ ಪ್ರತಿಭಟನೆ ನಡೆಸಲು ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳ ರೈತ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು   ನಿರ್ಧರಿಸಿದ್ದು, ಆ ಬಗ್ಗೆ ಚರ್ಚಿಸಲು ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರು ಬಿತ್ತನೆ ಮಾಡಿ ಬೆಳೆ ಬೆಳೆದರೂ ಮಳೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ರೈತರು ಪಂಪ್‌ಸೆಟ್ ಹಾಗೂ ಬೋರ್‌ವೆಲ್ ಹೊಂದಿದವರಿಗೆ ಇತ್ತೀಚಿಗೆ ಲೋಡ್‍ಶೆಡ್ಡಿಂಗ್‍ನಿಂದ ಸರ್ಮಪಕವಾಗಿ ಕರೆಂಟ್ ಇಲ್ಲದೇ ತೀವ್ರತರ ತೊಂದರೆ ಅನುಭವಿಸುತ್ತಿದ್ದಾರೆ. ರೈತರ ಟಿಸಿಗಳು ಸುಟ್ಟರೆ ಸರ್ಕಾರದ ನಿಯಮದ ಪ್ರಕಾರ ಒಂದರೆಡು ದಿನಗಳಲ್ಲಿ ಟಿಸಿ ಕೊಡಬೇಕು. ಎರಡು ವಾರ ಆದರೂ ಕೆಇಬಿ ಇಲಾಖೆಯ ಅಧಿಕಾರಿಗಳು  ರೈತರನ್ನು ಅಲೆದಾಡಿಸುತ್ತಾರೆ, ಕೆರೆಕಟ್ಟೆ ತುಂಬಿಸುವ ಯೋಜನೆಯು ವಿಫಲವಾಗಿದೆ, ಕಳೆದ ಮೂರು ವರ್ಷಗಳಿಂದ ರೈತರು ಬೆಳೆ ವಿಮೆ ಕಟ್ಟಿದರೆ ವಿಮಾ ಹಣ ಬಂದಿಲ್ಲ ಎಂದರು.

ನ್ಯಾಮತಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬೆಳಗುತ್ತಿ ಉಮೇಶ್ ಮಾತನಾಡಿ, ನ್ಯಾಮತಿ ತಾಲ್ಲೂಕಿನ ಹಳೇ ಜೋಗದ ಬಳಿ ಗೌಳಿಗರ ಕ್ಯಾಂಪ್‍ನಲ್ಲಿ ಜಾನುವಾರುಗಳಿಗೆ ನೀರು, ರಸ್ತೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು ಎಂದರು.

ನಾಳೆ ದಿನಾಂಕ 13ರ ಬುಧವಾರ ಹೊನ್ನಾಳಿಯಲ್ಲಿ ಮತ್ತು ಇದೇ ದಿನಾಂಕ 15 ರ ಶುಕ್ರವಾರ ನ್ಯಾಮತಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. 

ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿದರಗಡ್ಡೆ ಜಯಣ್ಣ ಮಾತನಾಡಿ,  ಮುಂಗಾರು ಹಂಗಾಮಿನಲ್ಲಿ ರೈತರು ಮುಂಗಡವಾಗಿ ಬಿತ್ತನೆ ಮಾಡಿ, ಬೆಳೆದ ಎಲ್ಲಾ ಪೈರುಗಳು ಒಣಗಿವೆ. ಈಗ ಎಷ್ಟು ಮಳೆ ಬಂದರೂ ಬೆಳೆ ಆಗುವುದಿಲ್ಲ, ತಾಲ್ಲೂಕು ಕೃಷಿ ಇಲಾಖೆ ಅಧಿಕಾರಿಗಳು ಸಮಗ್ರ ವರದಿ ಮಾಡಿ, ಶಾಸಕರಿಗೆ ವರದಿಯ ಮಾಹಿತಿ ನೀಡಿದ್ದಾರೆ. ಅವಳಿ ತಾಲೂಕಗಳನ್ನು ಬರಗಾಲ ಪೀಡಿತ  ಎಂದು ಘೋಷಿಸಲು ಪ್ರಯತ್ನಿಸಬೇಕೆಂದರು.

ಈ ಸಂದರ್ಭದಲ್ಲಿ ನ್ಯಾಮತಿ ತಾಲ್ಲೂಕು ಉಪಾಧ್ಯಕ್ಷ ಚನ್ನೇಶಪ್ಪ, ಮಾದನಬಾವಿ ಗೌರಪ್ಪ, ಶಾಂತಪ್ಪ, ತುಗ್ಗಲಹಳ್ಳಿ     ಹೇಮಪ್ಪ, ಬಸವನಹಳ್ಳಿ ಆನಂದಪ್ಪ, ಕೃಷ್ಣನಾಯ್ಕ, ನಾರಾಯಣಮೂರ್ತಿ, ದೇವರಹೊನ್ನಾಳಿ ಜಯದೇವಪ್ಪ, ಕುಬೇರಪ್ಪ, ಶಿವಪ್ಪ, ಬಾಬುಲಾಲ್ ಹಾಗು ಇತರರು ಇದ್ದರು.

error: Content is protected !!