ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣಕ್ಕೆ ಪ್ರೋತ್ಸಾಹಿಸಿದ್ದ ಅನ್ನದಾನ ಶ್ರೀಗಳು

ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣಕ್ಕೆ ಪ್ರೋತ್ಸಾಹಿಸಿದ್ದ ಅನ್ನದಾನ ಶ್ರೀಗಳು

ದಾವಣಗೆರೆ, ಸೆ.10- ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣ ಸಂಸ್ಥೆ ಆರಂಭಿಸಿದ್ದ ಶ್ರೀ ಗುರು ಅನ್ನದಾನ ಮಹಾಶಿವಯೋಗಿಗಳವರು ಕೆಳಸ್ತರದ ಜನರಿಗೆ ಅನ್ನ ದಾಸೋಹದ ಮೂಲಕ ಬರೀ ಅನ್ನ ನೀಡಿದರೆ, ಹೊಟ್ಟೆ ಬಿಟ್ಕೊಂಡ್ ಓಡಾಡುತ್ತಾರೆ. ಹೀಗಾಗಿ, ಅವರನ್ನು ಶಿಕ್ಷಣವಂತರನ್ನಾಗಿ ಮಾಡಬೇಕು. ಜ್ಞಾನ ಕೊಡಬೇಕೆಂಬ ಉದ್ದೇಶದಿಂದ ಮನೆ, ಮನೆಗೆ ಹೋಗಿ ಮಠದ ಶಿಕ್ಷಣ ಸಂಸ್ಥೆಗಳಿಗೆ ಬಂದು ಶಿಕ್ಷಣ ಪಡೆಯುವಂತೆ ಪ್ರೋತ್ಸಾಹ ನೀಡಿದ್ದರು ಎಂದು ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ಸ್ಮರಿಸಿದರು.

ನಗರದ ಶ್ರೀ ಅನ್ನದಾನೇಶ್ವರ ಶಾಖಾ ಮಠದಲ್ಲಿ  ಇಂದು ನಡೆದ ಲಿಂ. ಶ್ರೀ ಗುರು ಅನ್ನದಾನ ಮಹಾಶಿವಯೋಗಿಗಳವರ 46ನೇ ಪುಣ್ಯಾರಾಧನೆ, ಲಿಂ. ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರ ದ್ವಿತೀಯ ವರ್ಷದ ಪುಣ್ಯಾರಾಧನೆ ಶಿವಾನುಭವ ಸಂಪದ ಹಾಗೂ 501 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ರಸಗೊಬ್ಬರಕ್ಕೆ ಸಬ್ಸಿಡಿ ನೀಡುತ್ತಿರುವ ಸರ್ಕಾರ ನೀತಿಗಳು ಸರಿಯಾಗಿಲ್ಲ. ಇದೇ ರೀತಿ ರಸಗೊಬ್ಬರಗಳನ್ನು ಬಳಕೆ ಮಾಡಿದರೆ, ಮುಂದಿನ 20 ವರ್ಷಗಳಲ್ಲಿ ಮನೆಗೊಬ್ಬ ಕಾನ್ಸರ್ ಪೀಡಿತ ಸಿಗುತ್ತಾನೆ. ರಾಸಯನಿಕ ಗೊಬ್ಬರಗಳಿಗೆ ಸಬ್ಸಿಡಿ ನೀಡುವ ಬದಲು, ಜನರಿಗೆ ಉತ್ತಮ ಆರೋಗ್ಯ ನೀಡುವ ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವತ್ತ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಹಸಿರು ಕ್ರಾಂತಿಯ ಪರಿಣಾಮ ಹೆಚ್ಚಾಗಿ ರಸಗೊಬ್ಬರ ಬಳಕೆ ಮಾಡಿ, ಬೆಳೆಯುವ ಉತ್ಪನ್ನ ಸೇವಿಸುತ್ತಿರುವ ಪರಿಣಾಮ ದೇಹದಲ್ಲಿ ಕಸುವು ಉಳಿಯಲ್ಲ. ಹೀಗಾಗಿ, ಭಾರತದಲ್ಲಿ ಕಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗಿದೆ. ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿ ಬಂಜರಾಗಿದೆ. ಇದನ್ನು ಅರಿತ ಡಾ. ಅಭಿನವ ಅನ್ನದಾನ ಶ್ರೀಗಳು 2013ರಲ್ಲಿ ಹಾಲ್ಕೆರೆಯಿಂದ ಉಳುವಿಯವರೆಗೂ 213 ಚಕ್ಕಡಿ ಗಾಡಿಗಳನ್ನು ಕಟ್ಟಿಕೊಂಡು ಐದು ಸಾವಿರ ರೈತರನ್ನು ಕರೆದುಕೊಂಡು ಹಳ್ಳಿ, ಹಳ್ಳಿಗೆ ಭೇಟಿ ನೀಡಿ ಸಾವಯವ ಕೃಷಿ, ಜೈವಿಕ ಇಂಧನದ ಬಗ್ಗೆ ಜಾಗೃತಿ ಮೂಡಿಸಿದ್ದರು. ಈ ನಿಟ್ಟಿನಲ್ಲಿ ನಾವು ನಮ್ಮ 7 ಮಠಗಳಿಂದ ಸಾವಯವ ಕೃಷಿ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.

ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,  ಅನ್ನದಾನೇಶ್ವರ ಸಂಸ್ಥಾನ ಮಠವು ಜಾತಿ, ಮತ ಮತ್ತು ಪಂಥಗಳ ಮೇರೆ ಮೀರಿ ಅಧ್ಯಾತ್ಮಿಕ ನೆಲೆಗಟ್ಟಿನಲ್ಲಿ  ಸಾರ್ವಜನಿಕರನ್ನು ಉತ್ತುಂಗ ಸ್ಥಿತಿಗೆ ಕೊಂಡ್ಡೊಯ್ಯುವ ಕೆಲಸ ಮಾಡುತ್ತಿದೆ. ಯಾವುದೇ ಸರ್ಕಾರ ಮಾಡದ ಕೆಲಸವನ್ನು ವೀರಶೈವ-ಲಿಂಗಾಯತ ಮಠಗಳು ಮಾಡುತ್ತಿವೆ. ಆದರೆ, ಈಗಿನ ಕೆಲ ಭಕ್ತರು ಮಠಗಳನ್ನು ಮಠಗಳಾಗಿ ಉಳಿಯಲು ಬಿಡದೇ ಅಧಿಕಾರದ ಲಾಲಸೆಯಿಂದ ಮಠದ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ 501 ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಅಕ್ಕಿ ವರ್ತಕ ಎ.ಬಿ. ಚಂದ್ರಶೇಖರ್‍ ಅವರಿಗೆ ವಾಣಿಜ್ಯ ಸಿರಿ, ಇಎಸ್‍ಐ ಆಸ್ಪತ್ರೆ ಅಧೀಕ್ಷಕ ಡಾ. ಬಸವನಗೌಡ ಅವರಿಗೆ ವೈದ್ಯ ರತ್ನ, ವಕೀಲ ಎಂ.ವಿ. ರೇವಣಸಿದ್ದಯ್ಯ ಅವರಿಗೆ ಕಾಯಕ ರತ್ನ, ವೈದ್ಯ ಡಾ. ಮಂಜುನಾಥ ದೊಗ್ಗಳ್ಳಿ ಅವರಿಗೆ ಸಮಾಜಸೇವಾ ಚಿಂತಾಮಣಿ, ಎಂ.ಎಸ್. ಶರಣಪ್ಪ ಅವರಿಗೆ ಕಾಯಕ ಸೌರಭ, ಜಂಬಿಗಿ ರಾಧೇಶ್‍ ಅವರಿಗೆ ಗಣಕ ಶ್ರೇಷ್ಠ, ಶಿವಪುತ್ರಪ್ಪ ಹೆರೂರ್ ನಾಗನೂರ್‍ ಅವರಿಗೆ ಕಾಯಕ ಜೀವಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ  ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಜಸ್ಟಿನ್ ಡಿ’ಸೌಜಾ, ಎನ್. ಅಡಿವೆಪ್ಪ, ವೀರಪ್ಪ ಎಂ. ಬಾವಿ, ಸುಜಾತ, ಬಿ.ವಿ. ತನುಜ, ಎನ್.ಎ. ಗಿರೀಶ್, ಮತ್ತಿತರರಿದ್ದರು.

error: Content is protected !!