ಅಪಘಾತ : ತಾಯಿ-ಮಗ ಸೇರಿ ಮೂವರ ಸಾವು

ಅಪಘಾತ : ತಾಯಿ-ಮಗ ಸೇರಿ ಮೂವರ ಸಾವು

ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಪ್ರತಿಭಾ ಮಲ್ಲಿಕಾರ್ಜುನ್ ಕಬ್ಬೂರು ಅವರ ಸಹೋದರ ಎಂ.ಎಸ್. ನಿರಂಜನಮೂರ್ತಿ ಮತ್ತು ತಾಯಿ ಚನ್ನಮ್ಮ  ಅಂತ್ಯಕ್ರಿಯೆ ಇಂದು

ದಾವಣಗೆರೆ,ಸೆ.6- ಚಿಕ್ಕಮಗಳೂರು ಸಮೀಪ ಇಂದು ಸಂಜೆ 5.30ರ ಸಮಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರೂ ಮೃತಪಟ್ಟಿದ್ದಾರೆ. 

ಚಿಕ್ಕಮಗಳೂರಿನ ಸ್ಪಂದನ ಆಸ್ಪತ್ರೆ ವ್ಯವಸ್ಥಾಪಕ ಎಂ.ಎಸ್. ನಿರಂಜನಮೂರ್ತಿ (47) ಮತ್ತು ಅವರ ತಾಯಿ ಶ್ರೀಮತಿ ಎಂ. ಚನ್ನಮ್ಮ (60) ಅವರಲ್ಲದೇ, ಅವರೊಂದಿಗಿದ್ದ ಸ್ಪಂದನ ಆಸ್ಪತ್ರೆಯ ಆಯಾ ರತ್ನಮ್ಮ ದುರ್ಮರಣಕ್ಕೀಡಾದ ನತದೃಷ್ಟರು.

ಮೃತ ನಿರಂಜನಮೂರ್ತಿ ಅವರು ಕಂದಾಯ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ದಿ. ಶಿವಯ್ಯ ಅವರ ಪುತ್ರರಾಗಿದ್ದು, ಮೂಲತಃ ಹೊಳಲ್ಕೆರೆ ತಾಲ್ಲೂಕಿನ ಮುತ್ತುಗದೂರು ಗ್ರಾಮದವರು. ಸುಮಾರು ವರ್ಷಗಳಿಂದ ಚಿಕ್ಕಮಗಳೂರಿನಲ್ಲೇ ವಾಸವಾಗಿದ್ದರು.

ಅನಾರೋಗ್ಯದಿಂದಿದ್ದ ತಮ್ಮ ತಾಯಿ ಚನ್ನಮ್ಮ ಅವರನ್ನು ವೈದ್ಯರಲ್ಲಿ ತೋರಿಸಲೆಂದು ಚಿಕ್ಕಮಂಗಳೂರಿನಿಂದ ಕಡೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಚಿಕ್ಕಮಗಳೂರು ಸಮೀಪದ ಉದ್ದೆಬೋರನಹಳ್ಳಿಯ ಸೇತುವೆ ತಡೆಗೋಡೆಗೆ ಕಾರು ಅಪ್ಪಳಿಸಿದ ಪರಿಣಾಮ ಈ ದುರಂತ ನಡೆದಿದೆ.

ನಿರಂಜನಮೂರ್ತಿ ಅವರೇ ಕಾರು ಚಲಾಯಿಸುತ್ತಿದ್ದರು. ನಿರಂಜಮೂರ್ತಿ ಮತ್ತು  ಅವರ ತಾಯಿ ಚನ್ನಮ್ಮ ಇಬ್ಬರೂ ಘಟನಾ ಸ್ಥಳದಲ್ಲೇ ಸಾವಿಗೀಡಾದರೆ, ಅವರೊಂದಿಗಿದ್ದ ಆಯಾ ರತ್ನಮ್ಮ  ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಮೃತರ ಪೈಕಿ ನಿರಂಜನಮೂರ್ತಿ, ದಾವಣಗೆರೆ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಶ್ರೀಮತಿ ಪ್ರತಿಭಾ ಮಲ್ಲಿಕಾರ್ಜುನ್ ಕಬ್ಬೂರು ಅವರ ಸಹೋದರ.

ದಾವಣಗೆರೆಯಲ್ಲಿ ಅಂತ್ಯಕ್ರಿಯೆ : ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿರುವ ನಿರಂಜನಮೂರ್ತಿ ಮತ್ತು ಚನ್ನಮ್ಮ ಇಬ್ಬರ ಪಾರ್ಥಿವ ಶರೀರಗಳನ್ನು ನಾಳೆ ದಿನಾಂಕ 7ರ ಗುರುವಾರ ಬೆಳಿಗ್ಗೆ 6 ಗಂಟೆ ವೇಳೆಗೆ ನಗರಕ್ಕೆ ತರಲಾಗುವುದು. 

ಪಾರ್ಥಿವ ಶರೀರಗಳನ್ನು ಜಯನಗರ ಬಿ ಬ್ಲಾಕ್‌ನಲ್ಲಿರುವ ಶ್ರೀಮತಿ ಪ್ರತಿಭಾ ಮತ್ತು ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ್ ಕಬ್ಬೂರು ದಂಪತಿಯ `ಬಸವ ನಿಲಯ’ದಲ್ಲಿ ಗುರುವಾರ ಮಧ್ಯಾಹ್ನ 12.30ರವರೆಗೆ ಇರಿಸಲಾಗುವುದು. ನಂತರ ವೀರಶೈವ
ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.

error: Content is protected !!