ರಾಣೇಬೆನ್ನೂರು,ಸೆ.6- ಇಲ್ಲಿನ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಬ್ಯಾಂಕ್ ಸ್ಥಾಪನೆಯಾಗಿ 99 ವರ್ಷ 6 ತಿಂಗಳುಗಳಾಗಿದ್ದು, ನೂರು ತುಂಬುವ ಮೊದಲೇ ಆಡಳಿತ ಮಂಡಳಿ ಶತಮಾನೋತ್ಸವ ಸಮಾರಂಭ ಏರ್ಪಡಿಸಿರುವುದು ಬ್ಯಾಂಕ್ ಬೈಲಾ ವಿರುದ್ದದ ತೀರ್ಮಾನವಾಗಿದೆ. ಹಾಗಾಗಿ ಸಮಾರಂಭ ರದ್ದು ಪಡಿಸುವಂತೆ ಮಾಜಿ ನಿರ್ದೇಶಕ ಆರ್.ಜೆ. ಸುರಳಿಕೇರಿ ಮಠ, ಷೇರುದಾರ ಸತೀಶ ಅಜ್ಜೇವಡೆಯರ ಮಠ ಹಾಗೂ ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಅವರು ಬ್ಯಾಂಕ್ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ಅಢಾವೆ ಪತ್ರ ಹಾಗೂ ಸಭೆಯ ಇತರೆ ಮಾಹಿತಿ ಒದಗಿಸದೇ ದಿನಾಂಕ 22 ರಂದು ವಾರ್ಷಿಕ ಮಹಾಸಭೆ ನಡೆಸುವ ನೋಟೀಸ್ ಕಳಿಸಲಾಗಿದೆ. ಎರಡು ದಿನಗಳ ಅಂತರದಲ್ಲಿ ಅಂದರೆ ದಿನಾಂಕ 24 ರಂದು ಶತಮಾನೋತ್ಸವ ಸಮಾರಂಭ ನಿಗದಿ ಮಾಡಿರುವುದಕ್ಕೆ ಷೇರು ದಾರರ ವಿರೋಧವಿದೆ. ದಿನಾಂಕ 7, ಮಾರ್ಚ್ 1923 ರಂದು ಬ್ಯಾಂಕ್ ಸ್ಥಾಪನೆಗೊಂಡಿದ್ದು ಶತಮಾನ ಆಚರಣೆಗೆ ಒಂದು ವರ್ಷಕ್ಕೂ ಹೆಚ್ಚು ಅವಧಿ ಇದೆ ಎಂದು ಹೇಳಲಾಗಿದೆ.
ಈಗಿರುವ ಆಡಳಿತ ಮಂಡಳಿಯ ಅವಧಿ ಡಿಸೆಂಬರ್ ವರೆಗೆ ಮಾತ್ರವಿದ್ದು, ಸಮಾರಂಭವನ್ನು ಮಾಡಲು ಮಹಾಸಭೆಯ ಒಪ್ಪಿಗೆ ಪಡೆಯದೇ ಷೇರುದಾರರನ್ನು ಕಡೆಗಣಿಸಿ ತರಾತುರಿಯಲ್ಲಿ ಸಮಾರಂಭ ನಡೆಸುತ್ತಿರುವುದು ಷೇರುದಾರರಲ್ಲಿ ಬೇಸರ ಉಂಟುಮಾಡಿದೆ ಎಂದಿರುವ ಮನವಿ ದಾರರು, ಚುನಾವಣೆ ನಡೆದು, ಬರುವ ಹೊಸ ಆಡಳಿತ ಮಂಡಳಿ ಅತ್ಯಂತ ಅದ್ಧೂರಿಯಾಗಿ ಸಮಾರಂಭ ಏರ್ಪಡಿಸಬಹುದು ಎಂದು ಹೇಳಿ, ಈ ಬಗ್ಗೆ ಸರ್ಕಾರ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದು ಸಮಾರಂಭ ರದ್ದುಪಡಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವು ದಾಗಿ ಅವರು ತಿಳಿಸಿದ್ದಾರೆ. ಹಿಂದೆ ಅನೇಕ ಕಾರಣಗಳಿಂದ ಬ್ಯಾಂಕ್‌ನ ಚಟುವಟಿಕೆಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಈ ಬಾರಿ ಬ್ಯಾಂಕ್ ನ ಸಮಾರಂಭ ರದ್ದು ಪಡಿಸುವುದಕ್ಕಾಗಿ ನ್ಯಾಯಾ ಲಯದ ಕಟ್ಟೆ ಹತ್ತಲು ಅಧ್ಯಕ್ಷರು ಅವಕಾಶ ಕೊಡದೆ ಸಮಾರಂಭವನ್ನು ಮುಂದೂಡುವಂತೆ ಮೂವರು ಪ್ರವಾಸಿ ಮಂದಿರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.