ಹೃದಯಾಘಾತದ ಲಕ್ಷಣಗಳನ್ನು ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷ್ಯ ಮಾಡಬೇಡಿ

ಹೃದಯಾಘಾತದ ಲಕ್ಷಣಗಳನ್ನು ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷ್ಯ ಮಾಡಬೇಡಿ

ಮಲೇಬೆನ್ನೂರಿನಲ್ಲಿನ ಉಚಿತ ಹೃದಯ ತಪಾಸಣಾ ಶಿಬಿರದಲ್ಲಿ ಡಾ. ಗುರುರಾಜ್ ಎಚ್ಚರಿಕೆ

ಮಲೇಬೆನ್ನೂರು, ಸೆ. 5- ಈ ಹಿಂದೆ ಶ್ರೀಮಂತರ ಕಾಯಿಲೆಯಾಗಿದ್ದ ಬಿ.ಪಿ., ಶುಗರ್ ಇತ್ತೀಚೆಗೆ ಹಳ್ಳಿ ಜನರಲ್ಲೂ ಹೆಚ್ಚಾಗಿ ಕಂಡು ಬರುತ್ತಿವೆ. ಈ ಎರಡೂ ಕಾಯಿಲೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಬೀಡಿ, ಸಿಗರೇಟ್, ತಂಬಾಕುಗಳಿಂದ ದೂರವಿದ್ದರೆ ಹೃದಯಾ ಘಾತವನ್ನು ತಡೆಗಟ್ಟಬಹುದೆಂದು ಎಸ್.ಎಸ್. ನಾರಾ ಯಣ ಹಾರ್ಟ್‌ ಸೆಂಟರ್‌ನ ಡಾ. ಗುರುರಾಜ್ ಹೇಳಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾವಣಗೆರೆಯ ಎಸ್.ಎಸ್. ನಾರಾಯಣ ಹಾರ್ಟ್‌ ಸೆಂಟರ್ ಮತ್ತು ಮಲೇಬೆನ್ನೂರು ಲಯನ್ಸ್ ಕ್ಲಬ್ ಹಾಗೂ ಶ್ರೀ ವೀರಭದ್ರೇಶ್ವರ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿನ್ನೆ ಹಮ್ಮಿಕೊಂಡಿದ್ದ ಉಚಿತ ಹೃದಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹೃದಯಾಘಾತದ ಲಕ್ಷಣಗಳನ್ನು ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷ್ಯ ಮಾಡಬೇಡಿ. ಹಾರ್ಟಿಕ್ ಕೆಲವರಿಗೆ ಮೋಸ ಮಾಡುತ್ತದೆ ಎಂದು ಎಚ್ಚರಿಸಿದ ಡಾ. ಗುರುರಾಜ್ ಅವರು ಹೃದಯಕ್ಕೆ ಸಂಬಂಧಿಸಿದ ಯಾವುದೇ ಲಕ್ಷಣ ಕಂಡು ಬಂದರೂ ವೈದ್ಯರ ಬಳಿ ಹೋಗಿ ಇಸಿಜಿ ಮಾಡಿಸಿಕೊಳ್ಳಿ ಎಂದರು.

ಇತ್ತೀಚೆಗೆ ಚಿಕ್ಕ ವಯಸ್ಸಿನವರಲ್ಲೂ ಹೃದಯಾಘಾತ ಕಂಡು ಬರುತ್ತಿದ್ದು, ಕಾಯಿಲೆಗಳು ಯಾವ ಕಾರಣದಿಂದ ಬರುತ್ತವೆ ಮತ್ತು ಬಂದರೆ ಹೇಗೆ ತಡೆಗಟ್ಟಬೇಕೆಂಬ ಅರಿವು ಬಹಳ ಮುಖ್ಯವಾಗಿದೆ. ಯಾವುದೇ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ಮಾಡದೆ ಚಿಕಿತ್ಸೆ ಪಡೆದುಕೊಳ್ಳಿ. ಕಾಯಿಲೆ ದೊಡ್ಡದಾಗಿ ಬೆಳೆದ ನಂತರ ನೀವು ಎಷ್ಟೇ ಹಣ ಸುರಿದರೂ ಉತ್ತಮ ಫಲಿತಾಂಶ ಸಿಗುವುದಿಲ್ಲ. ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ ನಿಯಮಿತ ವ್ಯಾಯಾಮ, ಹಣ್ಣು-ತರಕಾರಿ ಬಳಸಿ. ಮಾನಸಿಕ ಒತ್ತಡದಿಂದ ದೂರವಿರಿ ಎಂದು ಡಾ. ಗುರುರಾಜ್ ತಿಳಿಸಿದರು.

ಲಯನ್ಸ್ ಮಾಜಿ ಗೌರ್ನರ್ ಡಾ. ಟಿ. ಬಸವರಾಜ್ ಮಾತನಾಡಿ, ಆರೋಗ್ಯದ ಬಗ್ಗೆ ಯಾರೂ ಉದಾಸೀನ ಮಾಡದೇ ಜಾಗೃತರಾಗಿರಬೇಕೆಂದರು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ಅವರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಚಿಟ್ಟಕ್ಕಿ ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಿರಿಗೆರೆ ಸಿದ್ದಪ್ಪ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ಓ.ಜಿ. ರುದ್ರಗೌಡ್ರು, ಎನ್.ಜಿ. ಶಿವಾಜಿ ಪಾಟೀಲ್, ಶ್ರೀಮತಿ ರೂಪಾ ಪಾಟೀಲ್, ಡಾ. ಹೆಚ್.ಜೆ. ಚಂದ್ರಕಾಂತ್, ಜಿಗಳಿ ಎನ್. ಶಿವನಗೌಡ್ರು, ಇ.ಎಂ. ಮರುಳಸಿದ್ದೇಶ್, ಉಡೇದರ ಸಿದ್ದೇಶ್, ವೀರಭದ್ರೇಶ್ವರ ದೇವಸ್ಥಾನದ ಟ್ರಸ್ಟಿ ಬಿ.ಎನ್. ವೀರೇಶ್‌ ಪುರಸಭೆ ಸದಸ್ಯ ಷಾ ಅಬ್ರಾರ್, ಭಾನುವಳ್ಳಿ ಸುರೇಶ್, ಎಳೆಹೊಳೆ ಕುಮಾರ್, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮಂಜುಳಾ, ನೇತ್ರಾಧಿಕಾರಿ ಶ್ರೀರಾಮುಲು, ಎಸ್.ಎಸ್. ನಾರಾಯಣ ಹಾರ್ಟ್ ಸೆಂಟರ್‌ನ ಗುಡ್ಡಪ್ಪ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

error: Content is protected !!