ಮೆಕ್ಕೆಜೋಳ ಬೆಳೆ ಹಾನಿ ಪರಿಹಾರಕ್ಕೆ ಒತ್ತಾಯಿಸಿ ರೈತ ಸಂಘದ ಪ್ರತಿಭಟನೆ

ಮೆಕ್ಕೆಜೋಳ ಬೆಳೆ ಹಾನಿ ಪರಿಹಾರಕ್ಕೆ ಒತ್ತಾಯಿಸಿ ರೈತ ಸಂಘದ ಪ್ರತಿಭಟನೆ

ದಾವಣಗೆರೆ, ಸೆ. 4- ಮೆಕ್ಕೆಜೋಳ ಬೆಳೆ ಹಾನಿಗೆ ಪರಿಹಾರ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ನಗರದ ತಹಶೀಲ್ದಾರ್ ಕಚೇರಿ ಬಳಿ ಇರುವ ರಾಜ್ಯ ರೈತ ಸಂಘದ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.

ಈ ವೇಳೆ ಸಂಘದ ಗೌರವಾಧ್ಯಕ್ಷ  ಬುಳ್ಳಾಪುರದ ಹನುಮಂತಪ್ಪ ಮಾತನಾಡಿ, ಜಿಲ್ಲೆಯಲ್ಲಿ ರೈತರು ಬೆಳೆದ ಮೆಕ್ಕೆಜೋಳ ಮತ್ತು ಇತರೆ ಬೆಳೆಗಳು ಬಹುತೇಕ ಮಳೆ ಬಾರದೆ ಒಣಗುತ್ತಿವೆ. ರೈತರು ಕೃಷಿ ಮಾಡಲು ದುಬಾರಿ ಬಿತ್ತನೆ ಬೀಜ, ರಸಗೊಬ್ಬರ, ಕೂಲಿ ಇತರೆ ವೆಚ್ಚಗಳಿಗೆ ಹಣ ಖರ್ಚು ಮಾಡಿ ಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಇದಲ್ಲದೇ ಪಂಪ್‌ಸೆಟ್‌ಗಳಿಗೆ ವಿದ್ಯುತ್ ನೀಡುವಲ್ಲಿ ಅಧಿಕಾರಿಗಳು ಮನಬಂದಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಮನಗಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು. ಕಳೆದ ವರ್ಷ ಅತಿವೃಷ್ಟಿ ಆಗಿತ್ತು. ಈ ವರ್ಷ ಮಳೆ ಇಲ್ಲದೆ ಅನಾವೃಷ್ಟಿ ಎದುರಾಗಿದೆ. ಇದರಿಂದಾಗಿ ರೈತರು ಬೆಳೆದ ಬೆಳೆಗಳು ಒಣಗುತ್ತಿವೆ. ಕಾರಣ ಬ್ಯಾಂಕುಗಳಲ್ಲಿ ಪಡೆದ ಸಾಲ ತೀರಿಸಲು ಸಾಧ್ಯವಾಗಿಲ್ಲ. ಆದರೆ ಬ್ಯಾಂಕುಗಳು ರೈತರ ಸಾಲ ಪಾವತಿಸಬೇಕೆಂದು ಪದೇ ಪದೇ ನೋಟೀಸ್ ಕಳುಹಿಸುತ್ತಿವೆ. ಆದ್ದರಿಂದ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವರು, ಸಂಬಂಧಿಸಿದ ಅಧಿಕಾರಿಗಳು ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಇದಲ್ಲದೇ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗ ಬೇಕು. ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಎಸ್.ಟಿ. ಪರಮೇಶ್ವರಪ್ಪ, ಕರಿಲಕ್ಕೇನಹಳ್ಳಿ ರೇವಣಸಿದ್ಧಪ್ಪ, ಇ. ಶ್ರೀನಿವಾಸ್, ಈಚಘಟ್ಟದ ವಿಜಯಕುಮಾರ್, ಬಲ್ಲೂರು ನಾಗರಾಜ ರೆಡ್ಡಿ, ಕಿತ್ತೂರು ರುದ್ರೇಶ್, ಚಟ್ಟೋಬನಹಳ್ಳಿ ಕಮಲೇಶ್, ಕುಮಾರ್, ಮಾಳಿಗೇರ ತಿಪ್ಪಣ್ಣ, ಬುಳ್ಳಾಪುರದ ಶರಣಪ್ಪ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!