ದೇಶಕ್ಕೆ ಅನ್ನ ನೀಡುವ ರೈತನಿಗೆ ಅರೆ ಹೊಟ್ಟೆ ಪರಿಸ್ಥಿತಿ

ದೇಶಕ್ಕೆ ಅನ್ನ ನೀಡುವ ರೈತನಿಗೆ ಅರೆ ಹೊಟ್ಟೆ ಪರಿಸ್ಥಿತಿ

ಕೂನಬೇವು ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ರೈತ ಮುಖಂಡ ಭೈರತಿಹಳ್ಳಿ ಭೈರೇಗೌಡ್ರು

ರಾಣೇಬೆನ್ನೂರು,ಆ.30- ಇಡೀ ದೇಶಕ್ಕೆ ಅನ್ನ ನೀಡುವ  ರೈತರು ಅರೆ ಹೊಟ್ಟೆಯಲ್ಲಿ ಮಲಗುವ ಪರಿಸ್ಥಿತಿ ಎದುರಾಗಿದೆ. ಸರ್ಕಾರಗಳ ಆಡಳಿತ ವೈಫಲ್ಯ, ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡುವಲ್ಲಿ ತಾರತಮ್ಯ. ಹೀಗೆ ನಾನಾ ಕಾರಣಗಳಿಂದ ನಮ್ಮ ಮೇಲೆ ಕೊಡಲಿ ಏಟು ಬೀಳುತ್ತಲೇ ಇವೆ. ಹಾಗಾಗಿ ರೈತರು ಒಗ್ಗಟ್ಟಾಗಬೇಕಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ   ಪ್ರಧಾನ ಕಾರ್ಯದರ್ಶಿ ಭೈರತಿಹಳ್ಳಿ ಭೈರೇಗೌಡ್ರು ಹೇಳಿದರು.

ತಾಲ್ಲೂಕಿನ ಕೂನಬೇವು ಗ್ರಾಮದಲ್ಲಿ ಮೊನ್ನೆ ಏರ್ಪಾಡಾಗಿದ್ದ ರೈತ ಸಂಘದ ಗ್ರಾಮ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಯಾವುದೇ ರೈತನಿಗೆ ಅನ್ಯಾಯವಾಗಲಿ, ನಾವು ಕೈ ಕಟ್ಟಿ ಕುಳಿತುಕೊಳ್ಳಬಾರದು. ಬದಲಾಗಿ ಆತನ ಜೊತೆ ನಾವೂ ಸಹ ಕೈ ಜೋಡಿಸಿ ರೈತ ವಿರೋಧಿ ಸರ್ಕಾರಗಳ ವಿರುದ್ಧ ಬಂಡೇಳಬೇಕು. ಅನ್ಯಾಯದ ವಿರುದ್ಧ ಪ್ರತಿಭಟಿಸುವಂತಹ ಸಂದರ್ಭ ಬಂದಲ್ಲಿ ಮನೆ ಕೆಲಸವನ್ನು ಕ್ಷಣ ಕಾಲ ನಿಲ್ಲಿಸಿ ಎಲ್ಲರೂ ಒಗ್ಗಟ್ಟಾಗಿ ನಿಂತಾಗ ಮಾತ್ರ ನಮಗೆ ಜಯ ಲಭಿಸಲು ಸಾಧ್ಯವಾಗುತ್ತದೆ ಎಂದರು.

ನಾವು   ಮುಂಗಾರು ಮಳೆಯ ಜೊತೆ ಜೂಜಾಟ ಆಡುತ್ತಿದ್ದೇವೆ. ಸಕಾಲದಲ್ಲಿ ಮಳೆ ಬಂದರೆ ಬಿತ್ತಿದ ಬೀಜ ಪೈರಾಗಿ ಕೈ ಸೇರುತ್ತದೆ. ಇಲ್ಲದಿದ್ದರೆ ನೆಲದಲ್ಲಿಯೇ ಹುದುಗಿಬಿಡುತ್ತದೆ. ಸಾಲ ಮಾಡಿ ಬೀಜ, ಗೊಬ್ಬರ ತಂದು ಹೊಲಕ್ಕೆ ಹಾಕಿ ಮಳೆರಾಯ ಕೈ ಕೊಟ್ಟರೆ ರೈತ ನಲುಗಿ ಹೋಗುತ್ತಾನೆ. ಸಾಲ ಬೆಳೆಯುತ್ತಲೇ ಹೋಗುತ್ತದೆ. ಸಾಲಕ್ಕೆ ಹೆದರಿದ ನಮ್ಮ ರೈತರು ಸರಣಿ ಆತ್ಮಹತ್ಯೆ ಮಾಡಿ ಕೊಳ್ಳುತ್ತಿರುವುದು ದುರಂತದ ಸಂಗತಿ. ಏನೇ ಕಷ್ಟ ಬಂದರೂ ಕೂಡ ಆತ್ಮಹತ್ಯೆಯಂತಹ ಕೆಲಸಕ್ಕೆ ಕೈ ಹಾಕದೆ ಧೈರ್ಯದಿಂದ ಎದುರಿಸಬೇಕು ಎಂದು  ಅವರು ರೈತರಲ್ಲಿ ಆತ್ಮಸ್ಥೈರ್ಯ ತುಂಬಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಇಡೀ ರಾಜ್ಯದ ಗಮನ ಸೆಳೆದ ಪ್ರಸಿದ್ಧ ಮೆಗಾ ಮಾರುಕಟ್ಟೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ನಿಮ್ಮ ಗ್ರಾಮದ ಹತ್ತಿರದಲ್ಲಿಯೇ ಇದೆ. ಅದಕ್ಕೆ ನಿಮ್ಮ ಜಮೀನುಗಳನ್ನೂ ಸಹ ಕೊಟ್ಟಿದ್ದೀರಿ. ನಿಮ್ಮ ಮಕ್ಕಳಿಗೆ ಅಲ್ಲಿ ಉದ್ಯೋಗ ಸಿಗಬೇಕಾದರೆ ಹೋರಾಟದ ಅನಿವಾರ್ಯತೆ ಇದೆ. ಆದ್ದರಿಂದ ಪ್ರತಿ ಹೋರಾಟದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಿದರೆ ಮಾತ್ರ ನಮ್ಮ ಹೋರಾಟ ಯಶಸ್ಸಿನ ಹಾದಿ ಹಿಡಿಯುತ್ತದೆ ಎಂದರು.

ಗ್ರಾಮದ ಸಾವಯವ ಕೃಷಿಕ ಚಂದ್ರಶೇಖರ ಪಾಟೀಲ ಅಧ್ಯಕ್ಷೀಯ ಭಾಷಣ ಮಾಡಿದರು. ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ, ತಾಲೂಕಾಧ್ಯಕ್ಷ ಹನುಮಂತಪ್ಪ ಕಬ್ಬಾರ ಮೊದಲಾದವರು ಮಾತನಾಡಿದರು.

ಹಿರಿಯ ರೈತರಾದ ಮಲ್ಲಮ್ಮ ಗಾಣಿಗೇರ, ಶಿವಪ್ಪ ಮಾಳಗುಡ್ಡಪ್ಪನವರ, ನಿಂಗಪ್ಪ ಮಾಸಣಗಿ, ನಿಂಗನಗೌಡ ಪಾಟೀಲ ತಮ್ಮಣ್ಣ ಅಣಜಿ, ಬಸಪ್ಪ ರಾಜೋಳದ, ಗ್ರಾಪಂ ಮಾಜಿ ಅಧ್ಯಕ್ಷ ಮಾಲತೇಶ ಮಾಸಣಗಿ, ಮೈಲಾರಪ್ಪ ನೆಗಳೂರ, ಮೈಲಾರಪ್ಪ ಮಾಳಗುಡ್ಡಪ್ಪನವರ, ವಿರುಪಾಕ್ಷಪ್ಪ ಬಣಕಾರ ಮತ್ತಿತರರು ಉಪಸ್ಥಿತರಿದ್ದರು.

ನಿವೃತ್ತ ದೈಹಿಕ   ಶಿಕ್ಷಕ ಎಂ.ಎಸ್.ಗಾಣಿಗೇರ ಸ್ವಾಗತಿಸಿದರು. ಗುಡ್ಡಪ್ಪ ಮಾಳಗುಡ್ಡಪ್ಪನವರ ನಿರೂಪಿಸಿದರು.

error: Content is protected !!