ಕಾಂಗ್ರೆಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲ, ಬಿಜೆಪಿ ಪ್ರಬಲ ಆಕಾಂಕ್ಷಿ

ಕಾಂಗ್ರೆಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲ, ಬಿಜೆಪಿ ಪ್ರಬಲ ಆಕಾಂಕ್ಷಿ

ನನಗೆ ಬಿಜೆಪಿ ಎಲ್ಲವನ್ನೂ ಕೊಟ್ಟಿದ್ದು, ಪಕ್ಷ ನನಗೆ ತಾಯಿ ಇದ್ದಂತೆ.ಯಡಿಯೂರಪ್ಪನವರು ನನಗೆ ನಾಯಕರು ಎಂದ ರೇಣುಕಾಚಾರ್ಯ, ನಾನು ಮೂರು ಬಾರಿ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದು, ಈ ಬಾರಿ ಸೋತಿದ್ದು, ನಾನು ಜನಾದೇಶಕ್ಕೆ ತಲೆ ಬಾಗುತ್ತೇನೆ. ಹಾಗಂತ ನಾನು ಕಾಂಗ್ರೆಸ್ ಸೇರುವುದಿಲ್ಲ. ಬಿಜೆಪಿಯಲ್ಲೇ ಇರುತ್ತೇ ನೆಂದು ಹತ್ತಾರು ಬಾರಿ ಹೇಳಿದ್ದೇನೆ. ಈಗಲೂ ಹೇಳುತ್ತಿದ್ದೇನೆ ಬಿಜೆಪಿ ಬಿಡುವ ಮಾತೇ ಇಲ್ಲ.

– ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

ಹೊನ್ನಾಳಿ, ಸೆ. 1- ನಾನು ಕಾಂಗ್ರೆಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲ. ಅರ್ಜಿನೂ ಹಾಕಿಲ್ಲ. ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಪ್ರಬಲ ಆಕಾಂಕ್ಷಿ ಎಂದು ಹೇಳಿದ್ದೇನೆ, ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ 400 ರೂ. ಸಬ್ಸಿಡಿ ಹಾಗೂ ಸಿಲಿಂಡರ್ ಬೆಲೆ 200 ರೂ. ಕಡಿಮೆ ಮಾಡಿದ್ದು, ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು.

ಚುನಾವಣೆಯಲ್ಲಿ ಸೋಲು-ಗೆಲುವು ಶಾಶ್ವತ ಅಲ್ಲ. ನಾವು ಏನು ಕೆಲಸ ಮಾಡಿದ್ದೇವೋ ಅದು ಶಾಶ್ವತ. ಜಾತ್ಯತೀತ ವ್ಯಕ್ತಿ ನಾನೇನು ಹೀನಾಯವಾಗಿ ಸೋತಿಲ್ಲ. 75 ಸಾವಿರ ಜನರು ನನಗೆ ಮತ ಹಾಕಿದ್ದು, ಈಗಲೂ ನಾನು ಅವಳಿ ತಾಲ್ಲೂಕಿನಾದ್ಯಂತ ಪ್ರವಾಸ ಮಾಡುತ್ತಿದ್ದು, ಜನರು ನನ್ನನ್ನು ಪ್ರತಿ ಗ್ರಾಮದಲ್ಲೂ ಆತ್ಮೀಯವಾಗಿ ಬರ ಮಾಡಿಕೊಳ್ಳುತ್ತಿದ್ದಾರೆಂದರು.

ಸಿಎಂ, ಡಿಸಿಎಂ ಭೇಟಿ ಮಾಡೋದು ತಪ್ಪಾ..?

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಂದಾಯ ಸಚಿವ ಕೃಷ್ಣಭೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಕೃಷಿ ಸಚಿವ ಚೆಲುವರಾಯ ಸ್ವಾಮಿ ಅವರನ್ನು ಭೇಟಿ ಮಾಡಿದ್ದು, ಹೊನ್ನಾಳಿ- ನ್ಯಾಮತಿ ಅವಳಿ ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕು ಎಂದು ಘೋಷಿಸುವಂತೆ ಮನವಿ ಮಾಡಿದ್ದೇನೆ, ಇದು ತಪ್ಪಾ? ಎಂದು ಪ್ರಶ್ನಿಸಿದ್ದಾರೆ.

ಹೊನ್ನಾಳಿಯಲ್ಲಿ ಕೃಷಿ ಮೇಳ, ಸೇವಾಲಾಲ್ ಜಯಂತಿಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರನ್ನು ಕರೆದಿದ್ದು ನಾನು, ನನ್ನ ಮಾತಿಗೆ ಬೆಲೆ ಕೊಟ್ಟು ಅವರು ಬಂದಿದ್ದರು, ರಾಜಕೀಯ ಹೊರತು ಪಡಿಸಿ ಅವರ ನನ್ನ ಮಧ್ಯೆ ಸ್ನೇಹವಿದೆ. ಹಾಗಾಗಿ ಅವರನ್ನು ಭೇಟಿ ಮಾಡಿ ಅವಳಿ ತಾಲ್ಲೂಕುಗಳನ್ನು ಬರ ಪಟ್ಟಿಗೆ ಸೇರಿಸುವಂತೆ ಮನವಿ ಮಾಡಿದ್ದೇನೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲಾ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ಅವಳಿ ತಾಲ್ಲೂಕುಗಳನ್ನು ಬರ ಪಟ್ಟಿಗೆ ಸೇರಿಸುವಂತೆ ಶಿಫಾರಸ್ಸು ಮಾಡುವಂತೆ ಮನವಿ ಮಾಡಿದ್ದೇನೆ, ಅಷ್ಟೇ ಅಲ್ಲದೇ ಅವರೇ ನಾನು ಬಿಜೆಪಿಯಿಂದ ಲೋಕಸಭೆಗೆ ರೇಣುಕಾಚಾರ್ಯ ಪ್ರಬಲ ಆಕಾಂಕ್ಷಿ ಎಂದು ಹೇಳಿದ್ದಾರೆಂದರು.

ಕೋವಿಡ್ ಸಂದರ್ಭದಲ್ಲಿ ನನ್ನ ಕರ್ತವ್ಯ ನಾನು ಮಾಡಿದ್ದೇನೆ. ಆಗ ಸ್ವತಃ ಹಿರಿಯರಾದ ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ್ ಅವರು ನನ್ನ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಶಾಮನೂರು ಶಿವಶಂಕರಪ್ಪನವರ ಹುಟ್ಟುಹಬ್ಬಕ್ಕೂ ಭೇಟಿ ನೀಡಿ ಶುಭ ಕೋರಿದ್ದೇನೆಂದರು.

error: Content is protected !!