ದಾವಣಗೆರೆ, ಸೆ.1- ಭದ್ರಾ ಜಲಾಶಯದಲ್ಲಿ ಹಾಲಿ ಲಭ್ಯವಿರುವ ನೀರನ್ನು ನಾಲೆಗಳಲ್ಲಿ ಆನ್ ಅಂಡ್ ಆಫ್ ಕ್ರಮದಲ್ಲಿ ಹರಿಸುವ ಬಗ್ಗೆ ಸೂಕ್ತ ಕ್ರಮವನ್ನು ತಕ್ಷಣವೇ ಕೈಗೊಳ್ಳಬೇಕೆಂದು ಭದ್ರಾ ಅಚ್ಚುಕಟ್ಟು ರೈತರ ಹಿತರಕ್ಷಣಾ ಸಮಿತಿ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.
ಈ ಬಾರಿ ಮುಂಗಾರು ಮಳೆ ಕೊರತೆಯಿಂದಾಗಿ ಭದ್ರಾ ಜಲಾಶಯದಲ್ಲಿ ಕಡಿಮೆ ನೀರು ಸಂಗ್ರಹವಾಗಿರುವುದು ಸರಿಯಷ್ಟೇ. ಇಡೀ ರಾಜ್ಯ ಬರಗಾಲಕ್ಕೆ ತುತ್ತಾಗಿ ಈಗಾಗಲೇ ನೀರಿನ ಸಮಸ್ಯೆ ತಲೆದೋರಿದೆ. ತೀವ್ರವಾದ ಬರಗಾಲ ಆವರಿಸಿರುವ ಈ ತುರ್ತು ಸಂದರ್ಭದಲ್ಲಿ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಸದ್ಬಳಕೆ ಮಾಡಿ ಜನ-ಜಾನುವಾರು ಸೇರಿದಂತೆ ಭತ್ತ, ತೆಂಗು, ಅಡಿಕೆ, ಬಾಳೆ ಬೆಳೆಗಳನ್ನು ರಕ್ಷಿಸಿ ರೈತರನ್ನು ರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ಸಂದರ್ಭದಲ್ಲಿ ರೈತರ ರಕ್ಷಣೆಯ ಹೊಣೆ ಹೊರದಿದ್ದರೆ ಸರ್ಕಾರವೇ ರೈತರನ್ನು ಸಾವಿನ ದವಡೆಗೆ ತಳ್ಳಿದಂತಾಗುತ್ತದೆ ಎಂದ ಸಮಿತಿ ಹೇಳಿದೆ.
ಭದ್ರಾ ಜಲಾಶಯದಲ್ಲಿ ಈ ದಿನಕ್ಕೆ 164 ಅಡಿ ನೀರು ಲಭ್ಯವಿದ್ದು, ಸರ್ಕಾರ ಈಗಾಗಲೇ ನಿರಂತರವಾಗಿ 100 ದಿನಗಳ ಕಾಲ ನೀರು ಹರಿಸುವ ಅವೈಜ್ಞಾನಿಕ ತೀರ್ಮಾನವನ್ನು ಕೈಗೊಂಡಿದ್ದು, ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಬದುಕಿನ ಆತಂಕ ಸೃಷ್ಠಿಯಾಗಿದೆ. ನಿರಂತರವಾಗಿ 100 ದಿನಗಳ ಕಾಲ ನೀರು ಹರಿಸಿದಲ್ಲಿ ಬೇಸಿಗೆಯಲ್ಲಿ ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ನಾಶವಾಗುವುದರ ಜೊತೆಗೆ ರೈತರ ಬದುಕು ಹಾಳಾಗುತ್ತದೆ ಎಂದು ಸಮಿತಿ ಸಂಚಾಲಕ ಮಂಜಪ್ಪಗೌಡ ಮತ್ತಿತರರು ತಿಳಿಸಿದರು. ಬರಗಾಲದ ಈ ತುರ್ತು ಸಂದರ್ಭದಲ್ಲಿ ಹಾಲಿ ಲಭ್ಯವಿರುವ ನೀರನ್ನು ಆನ್ ಅಂಡ್ ಆಫ್ ಕ್ರಮದಲ್ಲಿ ಹರಿಸಬೇಕೆಂದು ಒತ್ತಾಯಿಸಿದರು.