ಇಸ್ತ್ರಿ ಪೆಟ್ಟಿಗೆ ಹಿಡಿಯುವ ಕೈ ಪೆನ್ನು ಹಿಡಿದು ಮಡಿವಂತರ ಸಮಾಜವಾಗಬೇಕು

ಇಸ್ತ್ರಿ ಪೆಟ್ಟಿಗೆ ಹಿಡಿಯುವ ಕೈ ಪೆನ್ನು ಹಿಡಿದು ಮಡಿವಂತರ ಸಮಾಜವಾಗಬೇಕು

ಹೊನ್ನಾಳಿ : `ಮನೆ- ಮನೆಗೆ ಮಾಚಿದೇವ’ ಕಾರ್ಯಕ್ರಮದಲ್ಲಿ ಡಾ. ಬಸವ ಮಾಚಿದೇವ ಸ್ವಾಮೀಜಿ ಆಶಯ

ಹೊನ್ನಾಳಿ, ಆ.31-   ಇಸ್ತ್ರಿ ಪೆಟ್ಟಿಗೆ ಹಿಡಿಯುವ ಕೈಯ್ಯಲ್ಲಿ ಪೆನ್ನು, ಪುಸ್ತಕ ಹಿಡಿಯುವಂತೆ ಮಾಡಿ ಮಡಿವಾಳ ಸಮಾಜವನ್ನು ಮಡಿವಂತರ ಸಮಾಜ ವನ್ನಾಗಿ ಮಾಡಬೇಕಾಗಿದೆ ಎಂದು  ಚಿತ್ರದುರ್ಗ  ಮಡಿವಾಳ ಗುರುಪೀಠದ  ಜಗದ್ಗುರು ಡಾ.ಬಸವ ಮಾಚಿದೇವ ಸ್ವಾಮೀಜಿ ಹೇಳಿದರು. 

ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳ ಮಡಿವಾಳ ಜನಾಂಗದ ಕ್ಷೇಮಾಭಿವೃದ್ದಿ  ಸಂಘ ಮತ್ತು ಸಮಾಜದ ಬಂಧುಗಳು ಸೇರಿ ಪಟ್ಟಣದ ಗುರುಭವನದಲ್ಲಿ ಆಯೋಜಿಸಲಾಗಿದ್ದ   `ಮನೆ- ಮನೆಗೆ ಮಾಚಿದೇವ’ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.

ಮಡಿವಾಳ ಗುರುಪೀಠದಿಂದ ಹಮ್ಮಿಕೊಳ್ಳ ಲಾಗಿರುವ `ಮನೆ-ಮನೆಗೆ ಮಾಚಿದೇವ’ ಕಾರ್ಯಕ್ರಮವು   ಅಪರೂಪದ ಹಾಗು ವಿಶೇಷ ಕಾರ್ಯಕ್ರಮವಾಗಿದ್ದು, ಮಡಿವಾಳ ಸಮಾಜ ಬಂಧುಗಳ ಜಾಗೃತಿ ಮತ್ತು ಸಮಾಜ ಸಂಘಟನೆಗೆ ಒತ್ತು ನೀಡುವ ಉದ್ದೇಶವಾಗಿದೆ ಎಂದು   ಹೇಳಿದರು. 

ಸಮಾಜದ ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ, ಸಂಸ್ಕೃತಿ ನೀಡದಿದ್ದರೆ ಅವರನ್ನು ಹೊಳೆಗೆ ಹಾಕಿದಂತಾಗುತ್ತದೆ. ಕಾರಣ ಸಮಾಜ ಸದೃಢವಾಗಬೇಕಾದರೆ ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ.   ಮಡಿವಾಳ ಮಾಚಿದೇವರು 12ನೇ ಶತಮಾನದಲ್ಲಿ ಬಂದು ಹೋದ ಸತ್ಪುರುಷರಾಗಿದ್ದು, ಅವರು ಇಡೀ ಮನುಕುಲಕ್ಕೆ ದಾರಿದೀಪ ವಾಗಿದ್ದಾರೆಂದರು.

 ಪ್ರತಿ ತಾಲ್ಲೂಕಿನಂತೆ ಮಠದ ಪ್ರತಿನಿಧಿಯಾಗಿ ಹೊನ್ನಾಳಿ ತಾಲ್ಲೂಕಿನಿಂದ ಒಬ್ಬ ಮಹಿಳೆ ಹಾಗು ಒಬ್ಬ ಪುರುಷನನ್ನು ಆಯ್ಕೆ ಮಾಡಿ ಕಳಿಸುವಂತೆ ನೆರೆದಿದ್ದ ಭಕ್ತರಿಗೆ ಸೂಚಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ  ಶಾಸಕ ಡಿ.ಜಿ.ಶಾಂತನಗೌಡ,    12ನೇ ಶತಮಾನ ಧಾರ್ಮಿಕ, ಸಾಂಸ್ಕೃತಿಕವಾಗಿ ಸುವರ್ಣ ಕಾಲ ಎಂದು ಕರೆಯಬಹುದಾಗಿದೆ.  ಬಸವಾದಿ ಶರಣರು ತಮ್ಮ ವಚನಗಳು ಹಾಗೂ ಸಾಧನೆಗಳ ಮೂಲಕ ಇಡೀ ಮನುಕುಲಕ್ಕೆ ಭಗವಂತನ  ಸಾಕ್ಷಾತ್ಕಾರದ ಮಾರ್ಗವನ್ನು ತೋರಿದ್ದಾರೆ   ಎಂದು  ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ  ಹೊನ್ನಾಳಿ ತಾಲ್ಲೂಕು ಮಡಿವಾಳ ಸಮಾಜದ ಅಧ್ಯಕ್ಷ ಕುಳಗಟ್ಟೆ ಮಹಾಂತೇಶ್ ಮಾತನಾಡಿ, 2005 ರಲ್ಲಿ, ತಾಲ್ಲೂಕಿನಲ್ಲೇ ಮೊದಲ ಬಾರಿಗೆ ಗುರುಗಳನ್ನು  ಕರೆತಂದು ಮನೆ ಮನೆಗೆ ಭೇಟಿ ನೀಡಲಾಗಿತ್ತು ಇದೀಗ ಮಡಿವಾಳ ಗುರುಪೀಠವು ಇತರೆ ಮಠಗಳಿಗೆ ಸರಿಸಮಾನವಾಗಿ ಬೆಳೆದು ನಿಂತಿರುವುದು ಸಂತಸದ ವಿಚಾರ.   ಈ ಸಭೆಗೆ ಬೆಂಬಲಿಸಿದಂತೆ ಮಡಿವಾಳ ಗುರುಪೀಠಕ್ಕೂ ಭೇಟಿ ನೀಡಿ ಶ್ರೀಗಳಿಗೆ ಬಲ ತುಂಬಬೇಕಿದೆ ಎಂದರು.

ನಿವೃತ್ತ ಶಿಕ್ಷಕ ಷಣ್ಮುಖಪ್ಪ ಮಡಿವಾಳ ಮಾಚಿ ದೇವರ ಕುರಿತು ಉಪನ್ಯಾಸ ನೀಡಿದರು. ಎಂ. ಚಂದ್ರಪ್ಪ ಕ್ಯಾಸಿನಕೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು.  

ಸಮಾರಂಭದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ನ್ಯಾಮತಿ ತಾಲ್ಲೂಕು ಅಧ್ಯಕ್ಷ ಎಂ.ಬಿ.ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು. ಮಲ್ಲಿಕಾರ್ಜುನಪ್ಪ ಸ್ವಾಗತಿಸಿ ದರು.  ಮುಖ್ಯ ಶಿಕ್ಷಕ ಕೋಟ್ಯಪ್ಪ ನಿರೂಪಿಸಿದರು. ಎ.ಎನ್.ಗಣೇಶ್ ವಂದಿಸಿದರು. 

error: Content is protected !!